ರಾಯಚೂರು ಜಿಲ್ಲೆಯಲ್ಲಿ ಅವನತಿಯಲ್ಲಿದೆ ಪಿಯು ಶಿಕ್ಷಣ: ಕಂಗಾಲಾದ ಮಕ್ಕಳು..!
ಸರ್ಕಾರಿ ಕಾಲೇಜು ಕಟ್ಟಡಗಳು ಇವೆ ಉಪನ್ಯಾಸಕರೇ ಇಲ್ಲ, ಮಕ್ಕಳು ದಾಖಲಾದರೂ ಪಾಠ-ಪ್ರವಚನ ಸಿಗದೇ ಪರದಾಟ, ಖಾಸಗಿ ಶಿಕ್ಷಣ ಸಂಸ್ಥೆಗಳ ಹೊಡೆತಕ್ಕೆ ಕಂಗಾಲಾದ ಮಕ್ಕಳು.
ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ರಾಯಚೂರು
ರಾಯಚೂರು(ಜು.07): ಬಿಸಿಲುನಾಡು ರಾಯಚೂರು ಜಿಲ್ಲೆಯ ಮಕ್ಕಳು ಇತ್ತೀಚಿಗೆ ಅಷ್ಟೇ ಶಾಲಾ-ಕಾಲೇಜುಗಳ ಕಡೆ ಮುಖ ಮಾಡುತ್ತಿದ್ದಾರೆ. ಇಂತಹ ವೇಳೆಯಲ್ಲಿ ಸರ್ಕಾರ ಸರ್ಕಾರಿ ಶಾಲಾ-ಕಾಲೇಜುಗಳ ಅಭಿವೃದ್ಧಿ ಕಡೆ ಹೆಚ್ಚು ಒತ್ತು ನೀಡಬೇಕು. ಆದ್ರೆ ರಾಯಚೂರು ಜಿಲ್ಲೆಯಲ್ಲಿ ಅದು ಏಕೋ ಉಲ್ಟಾ ಆಗುತ್ತಿದೆ.
ಹತ್ತಾರು ಕನಸುಗಳು ಹೊತ್ತು ಸರ್ಕಾರಿ ಕಾಲೇಜು ಸೇರುವ ಬಡಮಕ್ಕಳು ಗುಣಮಟ್ಟದ ಶಿಕ್ಷಣ ಸಿಗದೇ ರೋಡ್ ರೋಡ್ ಅಲೆಯುವ ಪರಿಸ್ಥಿತಿ ಸೃಷ್ಠಿಯಾಗುತ್ತಿದೆ. ಪಿಯು ಕಾಲೇಜಿಗೆ ಅಂತ ಬರುವ ಮಕ್ಕಳು ಒಂದು-ಎರಡು ಕ್ಲಾಸ್ ಮುಗಿಸಿಕೊಂಡು ಅಲೆಯುವರ ಸಂಖ್ಯೆ ಹೆಚ್ಚಾಗಿ ಕಂಡು ಬರುತ್ತಿದೆ. ಹೀಗಾಗಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಎಂಬುವುದು ಕನಸಿನ ಮಾತು ಆಗಿದೆ. ರಾಯಚೂರು ಜಿಲ್ಲೆಯಲ್ಲಿ ಪ್ರಥಮ ಪಿಯುಸಿ ಮತ್ತು ದ್ವೀತಿಯ ಪಿಯುಸಿ ಕಾಲೇಜಿನಲ್ಲಿ ಸುಮಾರು 40,523 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಬಹುಪಾಲು ವಿದ್ಯಾರ್ಥಿಗಳು ಖಾಸಗಿ ಕಾಲೇಜಿನಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.
ರಾಯಚೂರು: ಮಹಿಳೆಯರ ರಕ್ಷಣೆಗಾಗಿ ಬಂದಿದೆ ಸಖಿ ಒನ್ ಸ್ಟಾಪ್ ಸೆಂಟರ್..!
ಮೂಲಭೂತ ಸಮಸ್ಯೆಗಳಿಂದ ಪಿಯು ವಿದ್ಯಾರ್ಥಿಗಳು ಗೋಳಾಟ:
ರಾಯಚೂರು ಜಿಲ್ಲೆಯಲ್ಲಿ ಸರ್ಕಾರಿ ಪಿಯು ಕಾಲೇಜಿನಲ್ಲಿ ಮೂಲಭೂತ ಸಮಸ್ಯೆಗಳು ಹೆಚ್ಚಾಗಿವೆ. ಕಾಲೇಜಿನಲ್ಲಿ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶೌಚಾಲಯ, ಕುಡಿಯುವ ನೀರು, ಕುಳಿತುಕೊಳ್ಳಲು ಸ್ಥಳಕ್ಕಾಗಿ ಮಕ್ಕಳು ನಿತ್ಯವೂ ಕಿತ್ತಾಟ ಮಾಡುವ ಪರಿಸ್ಥಿತಿಯಿದೆ. ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ. ಮಕ್ಕಳ ಸಂಖ್ಯೆ ಹೆಚ್ಚಾದಂತೆ ಸರ್ಕಾರಿ ಕಾಲೇಜಿನಲ್ಲಿ ಮೂಲಭೂತ ಸೌಲಭ್ಯಗಳು ಸಹ ಹೆಚ್ಚಳ ಮಾಡಬೇಕು. ಆದ್ರೆ ಅದು ಆಗದೇ ಇರುವುದರಿಂದ ಮಕ್ಕಳು ನಾನಾ ಸಮಸ್ಯೆಗಳ ಮಧ್ಯೆ ಪಾಠ ಕೇಳುವ ಪರಿಸ್ಥಿತಿಯಿದೆ. ಸಮಸ್ಯೆಗಳ ಕುರಿತು ಮಕ್ಕಳು ದೂರು ನೀಡಿದ್ರೂ ಅಧಿಕಾರಿಗಳು ಕ್ರಮಕೈಗೊಳ್ಳಲು ಆಗದ ಪರಿಸ್ಥಿತಿಯಲ್ಲಿ ಪಿಯು ಕಾಲೇಜಿನ ಅಧಿಕಾರಿಗಳು ಇದ್ದಾರೆ.
ಭೂತ ಬಂಗಲೆಯಾಗಿದೆ ಪಿಯು ಉಪನಿರ್ದೇಶಕರ ಕಚೇರಿ:
ರಾಯಚೂರು ಜಿಲ್ಲೆಯ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿ ಭೂತ ಬಂಗಲೆಯಂತೆ ಇದೆ. ಆ ಕಟ್ಟಡದಲ್ಲಿ ಕೆಲಸ ಮಾಡುವ ಅಧಿಕಾರಿಗಳು ಸಹ ಸಿಬ್ಬಂದಿ ಕೊರತೆಯಿಂದ ಕೆಲಸದ ಒತ್ತಡ ಹೆಚ್ಚಾಗಿ ಬೇಕಾಬಿಟ್ಟಿಯಾಗಿ ಕೆಲಸ ಮಾಡಲು ಶುರು ಮಾಡಿದ್ದಾರೆ. ಹೀಗಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳು ಏನೇ ತಪ್ಪು ಮಾಡಿದ್ರೂ, ಯಾರು ಕೇಳುವರು ಇಲ್ಲದಂತೆ ಆಗಿದೆ. ಪಿಯು ಉಪನಿರ್ದೇಶಕರು ಕಚೇರಿ ಕೆಲಸ ಮುಗಿಸುವಷ್ಟರಲ್ಲಿ ಸುಸ್ತಾಗಿ ಹೋಗುತ್ತಿದ್ದಾರೆ. ಹೀಗಾಗಿ ಇಡೀ ಜಿಲ್ಲೆಯಲ್ಲಿ ದಿನೇ ದಿನೇ ಖಾಸಗಿ ಪಿಯು ಶಿಕ್ಷಣ ಸಂಸ್ಥೆಗಳು ಹುಟ್ಟಿಕೊಳ್ಳುತ್ತಿವೆ. ಸರ್ಕಾರಿ ಪಿಯು ಕಾಲೇಜುಗಳು ನಿಧಾನವಾಗಿ ಮುಚ್ಚುವ ಹಂತಕ್ಕೆ ಬಂದು ತಲುಪುತ್ತಿವೆ.
ಸರ್ಕಾರಿ ಪಿಯು ಕಾಲೇಜುಗಳಲ್ಲಿ ಪ್ರಾಂಶುಪಾಲರ ಹುದ್ದೆ ಖಾಲಿ!
ರಾಯಚೂರು ಜಿಲ್ಲೆಯಲ್ಲಿ ಒಟ್ಟು 43 ಸರ್ಕಾರಿ ಪಿಯು ಕಾಲೇಜುಗಳು ಇವೆ. 43 ಕಾಲೇಜುಗಳ ಪೈಕಿ 6 ಕಾಲೇಜಿನಲ್ಲಿ ಮಾತ್ರ ಪ್ರಾಂಶುಪಾಲರು ಇದ್ದಾರೆ. ಇನ್ನುಳಿದ ಎಲ್ಲಾ ಕಾಲೇಜುಗಳಲ್ಲಿ ಅಂದ್ರೆ ಸರ್ಕಾರದಿಂದ ಮುಂಜೂರಾದ 39 ಪ್ರಾಂಶುಪಾಲರ ಪೈಕಿ 33 ಹುದ್ದೆಗಳು ಖಾಲಿ ಇವೆ. ಆ ಖಾಲಿ ಇರುವ ಹುದ್ದೆಗಳಿಗೆ ಕಾಲೇಜಿನಲ್ಲಿ ಇರುವ ಉಪನ್ಯಾಸಕರಿಗೆ ಹೆಚ್ಚುವರಿ ಜವಾಬ್ದಾರಿ ನೀಡಿ ಪ್ರಾಂಶಪಾಲ ಹುದ್ದೆ ನಿಭಾಹಿಸಲು ಆದೇಶ ಮಾಡುತ್ತಾರೆ. ಆ ಉಪನ್ಯಾಸಕರು ಮಕ್ಕಳಿಗೆ ಪಾಠ ಮಾಡಬೇಕಾ ಅಥವಾ ಕಚೇರಿಯ ಕೆಲಸಗಳು ಮಾಡಬೇಕಾ ಎಂಬುವುದು ತಿಳಿಯದೇ ಯಾವುದೂ ಮಾಡದೇ ಮನಬಂದಂತೆ ವರ್ತಿಸಲು ಶುರು ಮಾಡುತ್ತಾರೆ. ಆಗ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಎಂಬುವುದು ಕನಸಿನ ಮಾತು ಆಗಿಯೇ ಉಳಿಯುತ್ತಿದೆ. ಇನ್ನು ಜಿಲ್ಲೆಯಲ್ಲಿ 8 ಅನುದಾನಿತ ಪದವಿ ಪೂರ್ವ ಕಾಲೇಜುಗಳು ಇವೆ. ಆ 8 ಕಾಲೇಜುಗಳ ಪೈಕಿ 4 ಪ್ರಾಂಶುಪಾಲರ ಹುದ್ದೆಗಳು ಮಂಜೂರಾಗಿವೆ. ಆ ನಾಲ್ಕು ಹುದ್ದೆಗಳು ಖಾಲಿ ಇರುವುದು ದುರಂತ ಸಂಗತಿಯಾಗಿದೆ.
ಪಿಯು ಕಾಲೇಜಿನಲ್ಲಿ ವಿಷಯವಾರು ಉಪನ್ಯಾಸಕರೇ ಇಲ್ಲ:
ಬಡಮಕ್ಕಳು ಎಸ್ಎಸ್ಎಲ್ಸಿ ಪಾಸ್ ಆಗಿ ಪಿಯು ಶಿಕ್ಷಣಕ್ಕಾಗಿ ನಗರ ಅಥವಾ ಪಟ್ಟಣಕ್ಕೆ ಪದವಿ ಪೂರ್ವ ಶಿಕ್ಷಣಕ್ಕಾಗಿ ಸೇರುತ್ತಾರೆ. ಆದ್ರೆ ರಾಯಚೂರು ಜಿಲ್ಲೆಯಲ್ಲಿ ಸರ್ಕಾರಿ ಕಾಲೇಜುಗಳು 43 ಮತ್ತು ಅನುದಾನಿತ ಪದವಿ ಪೂರ್ವ ಕಾಲೇಜು 8 ಸೇರಿ ಒಟ್ಟು 51 ಕಾಲೇಜುಗಳು ಇವೆ. ಈ ಕಾಲೇಜುಗಳಿಗೆ 43 ಕಾಲೇಜುಗಳಿಗೆ 369 ಉಪನ್ಯಾಸಕರ ಹುದ್ದೆಗಳು ಮಂಜೂರು ಆಗಬೇಕು. ಆದ್ರೆ 369ರ ಪೈಕಿ ಕೇವಲ 261 ಉಪನ್ಯಾಸಕರು ಮಾತ್ರ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ಇನ್ನುಳಿದ 108 ಹುದ್ದೆಗಳು ಖಾಲಿಯಿವೆ. ಆ ಹುದ್ದೆಗಳಿಗೆ ಅತಿಥಿ ಉಪನ್ಯಾಸಕರಿಗೆ ಭರ್ತಿ ಮಾಡಿದ್ರೂ ಅವರಿಗೆ ಸರಿಯಾಗಿ ವೇತನ ನೀಡಲು ಹಿಂದೇಟು ಹಾಕುವುದರಿಂದ ಅತಿಥಿ ಉಪನ್ಯಾಸಕರು 3-4 ಕಾಲೇಜಿನಲ್ಲಿ ಪಾಠ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ಇದ್ದ ಖಾಯಂ ಕೆಲ ಉಪನ್ಯಾಸಕರು ಹೆಸರಿಗೆ ಮಾತ್ರ ಕಾಲೇಜಿಗೆ ಬಂದು ಸಹಿ ಮಾಡಿ ಸಂಬಳ ಪಡೆಯುವ ಉಪನ್ಯಾಸಕರು ಸಹ ಇದ್ದಾರೆ. ಮುಖ್ಯವಾಗಿ ಸೈನ್ಸ್ ವಿಭಾಗಕ್ಕೆ ವಿಷಯವಾರು ಉಪನ್ಯಾಸಕರ ಕೊರತೆ ಮಾತ್ರ ಸರ್ಕಾರಿ ಕಾಲೇಜಿನಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ.
ಸೈನ್ಸ್ ಉಪನ್ಯಾಸಕರು ಇದ್ರೆ ಲ್ಯಾಬ್ ಉಪಕರಣಗಳೇ ಇಲ್ಲ:
ರಾಯಚೂರು ಜಿಲ್ಲೆಯ 43 ಸರ್ಕಾರಿ ಪದವಿಪೂರ್ವ ಕಾಲೇಜುಗಳ ಪೈಕಿ ಕೆಲ ಪಿಯು ಕಾಲೇಜಿನಲ್ಲಿ ಸೈನ್ಸ್ ಉಪನ್ಯಾಸಕರು ಇದ್ದಾರೆ. ಸರ್ಕಾರಿ ಉಪನ್ಯಾಸಕರು ಇಲ್ಲದೆ ಇದ್ರೂ ಅತಿಥಿ ಉಪನ್ಯಾಸಕರು ಮಕ್ಕಳಿಗೆ ಬೋಧನೆ ಮಾಡುತ್ತಿದ್ದಾರೆ. ಆದ್ರೆ ಸರ್ಕಾರದ ನಾನಾ ಯೋಜನೆಯ ಹಣ ಬರುತ್ತೆ ಆದ್ರೆ ಪಿಯು ಕಾಲೇಜಿನ ಸೈನ್ಸ್ ವಿದ್ಯಾರ್ಥಿಗಳಿಗೆ ಲ್ಯಾಬ್ಗಳಿಗೆ ಬೇಕಾದ ಉಪಕರಣಗಳು ಇರದೇ ಬಡ ಮಕ್ಕಳು ಕೇವಲ ಥೇರಿ ಮಾತ್ರ ಅಭ್ಯಾಸ ಮಾಡುವ ಪರಿಸ್ಥಿತಿಯಿದೆ. ಹಲವು ಬಾರಿ ಪೋಷಕರ ಮತ್ತು ಮಕ್ಕಳು ದೂರು ನೀಡಿದ್ರೂ ಅಧಿಕಾರಿಗಳಿಗೆ ಬಡ ಮಕ್ಕಳ ಸಮಸ್ಯೆ ಮಾತ್ರ ಕಾಣಿಸುತ್ತಿಲ್ಲ.
ಖಾಸಗಿ ಶಿಕ್ಷಣ ಸಂಸ್ಥೆಗಳ ಹೊಡೆತಕ್ಕೆ ಕಂಗಾಲಾದ ಬಡಮಕ್ಕಳು!
ರಾಯಚೂರು ಜಿಲ್ಲೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ದರ್ಬಾರ್ ಹೆಚ್ಚಾಗಿದೆ. ಸರ್ಕಾರಿ ಪದವಿ ಪೂರ್ವ ಕಾಲೇಜುಗಳು ಕೇವಲ 43 ಇದ್ರೆ, ಖಾಸಗಿ ಪದವಿ ಪೂರ್ವ ಕಾಲೇಜು ಇಡೀ ಜಿಲ್ಲೆಯಾದ್ಯಂತ 134 ಕಾಲೇಜುಗಳು ಇವೆ. ಖಾಸಗಿ ಕಾಲೇಜುಗಳ ಫ್ರೀ ಕೇಳಿದ್ರೆ ಬಡ ಮಕ್ಕಳಿಗೆ ಆ ಕಾಲೇಜಿನ ಕಡೆ ಮುಖ ಮಾಡಲು ಸಹ ಯೋಚನೆ ಮಾಡುವ ರೀತಿಯಲ್ಲಿ ದರಗಳು ನಿಗಧಿ ಮಾಡಿದ್ದಾರೆ. ಯಾರದರೂ ಏನಾದರೂ ಅಂದ್ರೆ ನಾವು ಗುಣಮಟ್ಟದ ಶಿಕ್ಷಣ ನೀಡುತ್ತೇವೆ. ನಮ್ಮ ಕಾಲೇಜಿಗೆ ಸೇರಿದ ಮಕ್ಕಳು ಮುಂದಿನ ನೀಟ್, ಸಿಇಟಿ ಪರೀಕ್ಷೆಯಲ್ಲಿ ಪಾಸ್ ಆಗುವಂತೆ ಬೋಧನೆ ಮಾಡುವ ವ್ಯವಸ್ಥೆ ನಮ್ಮ ಕಾಲೇಜಿನಲ್ಲಿ ಇದೆ ಎಂದು ಪಟ್ಟಿ ನೀಡುತ್ತಾರೆ. ಮಕ್ಕಳಿಗೆ ಖಾಸಗಿ ಕಾಲೇಜಿನಲ್ಲಿ ಓದಿಸಬೇಕೆಂದು ಪೋಷಕರು ಆಸ್ತಿ ಮಾರಾಟ ಮಾಡಿ ಪಿಯು ಕಾಲೇಜಿಗೆ ಸೇರಿಸುವ ಪರಿಸ್ಥಿತಿ ಸೃಷ್ಠಿಯಾಗುತ್ತಿದೆ. ಖಾಸಗಿ ಕಾಲೇಜಿನ ವಿರುದ್ಧ ಪೋಷಕರು ಫ್ರೀ ವಿಚಾರಕ್ಕೆ ದೂರು ನೀಡಿದ್ರೂ, ಅಧಿಕಾರಿಗಳು ಕ್ರಮಕೈಗೊಳ್ಳಲು ಆಗದಂತೆ ಖಾಸಗಿ ಸಂಸ್ಥೆಗಳು ಬೆಳೆದು ನಿಂತಿವೆ.
ಮುದಗಲ್: 108 ಆಂಬ್ಯುಲೆನ್ಸ್ನಲ್ಲೇ ಮುದ್ದಾದ ಮಗುವಿಗೆ ಜನ್ಮ ನೀಡಿದ ತಾಯಿ..!
ರಾಯಚೂರಿನ ಪಿಯು ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳೇಷ್ಟು?
ರಾಯಚೂರು ಜಿಲ್ಲೆಯಾದ್ಯಂತ 185 ಪಿಯು ಕಾಲೇಜಿನಲ್ಲಿ ಪ್ರಥಮ ಪಿಯುಸಿಯಲ್ಲಿ 21,123 ಮಕ್ಕಳು ಅಭ್ಯಾಸ ಮಾಡುತ್ತಿದ್ರೆ, ದ್ವಿತೀಯ ಪಿಯುಸಿಯಲ್ಲಿ 19,400 ಮಕ್ಕಳು ಇದ್ದಾರೆ. ಹೆಣ್ಣು ಮಕ್ಕಳ ಸಂಖ್ಯೆ 19,758 ಇದ್ರೆ ಗಂಡು ಮಕ್ಕಳು 20,765 ಇದ್ದಾರೆ. ಸರ್ಕಾರಿ ಪದವಿ ಪೂರ್ವ ಕಾಲೇಜು ಒಟ್ಟು 43 ಇದ್ದು 39 ಪ್ರಾಂಶುಪಾಲರ ಹುದ್ದೆಗಳು ಮಂಜೂರು ಆಗಿವೆ. ಸದ್ಯ ಜಿಲ್ಲೆಯಾದ್ಯಂತ ಕೇವಲ 6 ಜನರು ಮಾತ್ರ ಪ್ರಾಂಶುಪಾಲರು ಕಾರ್ಯನಿರ್ವಹಿಸುತ್ತಿದ್ದಾರೆ. 369 ಉಪನ್ಯಾಸಕರ ಪೈಕಿ 261 ಉಪನ್ಯಾಸಕರು ಇದ್ದು, 108 ಉಪನ್ಯಾಸಕರ ಹುದ್ದೆಗಳು ಖಾಲಿಯಿವೆ. ಸಿ ಗ್ರೂಪ್ ಹುದ್ದೆಗಳು 41 ಇರಬೇಕು, ಅದರಲ್ಲಿ 20 ಜನರ ಮಾತ್ರ ಇದ್ದು 21 ಹುದ್ದೆಗಳು ಖಾಲಿ ಇವೆ. ಡಿ ದರ್ಜೆ ಹುದ್ದೆಗಳು 37ರ ಪೈಕಿ 30 ಹುದ್ದೆಗಳು ಖಾಲಿಯಿವೆ. 486 ಹುದ್ದೆಗಳ ಪೈಕಿ 295 ಹುದ್ದೆಗಳು ಮಾತ್ರ ಭರ್ತಿ ಆಗಿವೆ. ಇನ್ನುಳಿದ 192 ಹುದ್ದೆಗಳು ಖಾಲಿ ಇವೆ. ಇನ್ನೂ ಅನುದಾನಿತ ಕಾಲೇಜುಗಳ ವಿಚಾರಕ್ಕೆ ಬರುವುದಾದರೇ ಇಡೀ ಜಿಲ್ಲೆಯಲ್ಲಿ 8 ಅನುದಾನಿತ ಪದವಿಪೂರ್ವ ಕಾಲೇಜುಗಳು ಇವೆ. 4 ಪ್ರಾಂಶುಪಾಲರ ಹುದ್ದೆಗಳು ಮಂಜೂರು ಆಗಿವೆ. ನಾಲ್ಕು ಹುದ್ದೆಗಳು ಖಾಲಿಯಿವೆ. 69 ಉಪನ್ಯಾಸಕರ ಪೈಕಿ 25 ಉಪನ್ಯಾಸಕರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನುಳಿದ 44 ಉಪನ್ಯಾಸಕರ ಹುದ್ದೆಗಳು ಖಾಲಿಯಿವೆ. 44 ಸಿ ಗ್ರೂಪ್ ಹುದ್ದೆಗಳು ಭರ್ತಿ ಮಾಡಬೇಕು. ಆದ್ರೆ ಕೇವಲ 9 ಹುದ್ದೆಗಳು ಮಾತ್ರ ಭರ್ತಿ ಮಾಡಿ 35 ಹುದ್ದೆಗಳು ಹಾಗೇ ಖಾಲಿಯಿವೆ. ಒಟ್ಟು 117 ಹುದ್ದೆಗಳ ಪೈಕಿ 34 ಹುದ್ದೆಗಳಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನುಳಿದ 83 ಹುದ್ದೆಗಳು ಖಾಲಿಯಿವೆ.
ಒಟ್ಟಿನಲ್ಲಿ ಸರ್ಕಾರ ಕೂಡಲ್ಲೇ ರಾಯಚೂರು ಪದವಿ ಪೂರ್ವ ಶಿಕ್ಷಣ ಇಲಾಖೆ ಕಡೆ ಗಮನಹರಿಸಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮಕೈಗೊಂಡು ಸರ್ಕಾರಿ ಪಿಯು ಕಾಲೇಜುಗಳ ಉಳಿವಿಗಾಗಿ ಕಾರ್ಯನಿರ್ವಹಿಸಬೇಕಾಗಿದೆ. ಒಂದು ವೇಳೆ ಸರ್ಕಾರ ಪಿಯು ಇಲಾಖೆ ಕಡೆ ಗಮನ ನೀಡದೇ ಹೋದ್ರೆ, ಮುಂದಿನ ದಿನಗಳಲ್ಲಿ ರಾಯಚೂರು ಜಿಲ್ಲೆಯಲ್ಲಿ ಸರ್ಕಾರಿ ಪಿಯು ಕಾಲೇಜುಗಳ ಕಟ್ಟಡಗಳು ಮಾತ್ರ ಕಾಣಬಹುದಾಗಿದೆ.