ಬೆಂಗಳೂರು, (ಅ.10): ಕೊರೋನಾ ಭೀತಿ ಹಿನ್ನೆಲೆಯಲ್ಲಿ ಶಾಲೆಗಳ ಪುನಾರಂಭ ಕುರಿತಂತೆ ರಾಜ್ಯದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಮಕ್ಕಳ ರಕ್ಷಣಾ ಹಕ್ಕುಗಳ ಆಯೋಗವೇ ಶಾಲೆಗಳನ್ನು ಆರಂಭಿಸಿ ಎಂದು ಸಲಹೆ ನೀಡಿದೆ. 

ಆದರೆ, ಶಿಕ್ಷಕರಿಗೆ ಮತ್ತು ಶಾಲಾ ವಿದ್ಯಾರ್ಥಿಗಳಲ್ಲಿ ಸೋಂಕು ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇದರಿಂದ ಈ ವರ್ಷ ಶಾಲೆ ಆರಂಭವಾಗದೇ ಬಹುತೇಕ ಅನುಮಾನವಾಗಿದ್ದು, ಮುಂದಿನ ವರ್ಷ ಜನವರಿಯಿಂದ ಶಾಲಾ ಕಾಲೇಜು ಪ್ರಾರಂಭವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

'ವಿದ್ಯಾಗಮ' ಯೋಜನೆ: ಕೊನೆಗೂ ಮಹತ್ವದ ನಿರ್ಧಾರ ಕೈಗೊಂಡ ಸಚಿವ ಸುರೇಶ್ ಕುಮಾರ್

ಡಿಸೆಂಬರ್ ವೇಳೆಗೆ ಕೊರೋನಾ ಒಂದು ಹಂತಕ್ಕೆ ತಲುಪಲಿದೆ. ಸಧ್ಯಕ್ಕೆ ಶಾಲಾ ಕಾಲೇಜು ಆರಂಭಿಸದೇ ಇರೋದು ಒಳಿತು. 50 ವರ್ಷ ಮೇಲ್ಪಟ್ಟ ಶಿಕ್ಷಕರಿಗೂ ವಿನಾಯಿತಿ ಕೊಡಬೇಕು. ಬೇರೆ ಬೇರೆ ಕಾಯಿಲೆಗಳಿಂದ ಶಿಕ್ಷಕರಿಗೂ ರಜೆ ಕೊಡಬೇಕು ಎನ್ನುವ ಹಿರಿಯ ತಜ್ಞ ವೈದ್ಯರು ಶಿಕ್ಷಣ ಇಲಾಖೆಗೆ ಸಲಹೆ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ವರ್ಷ ಶಾಲಾ-ಕಾಲೇಜು ಪ್ರಾರಂಭಿಸದಿರಲು ಚಿಂತನೆ ನಡೆಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. 

ರಾಜ್ಯ ಸರ್ಕಾರ ಶಾಲೆಗಳ ಪುನರಾರಂಭಕ್ಕೆ ಮುಂದಾಗಿತ್ತು. ಇದೇ ಸಂದರ್ಭದಲ್ಲಿ ವಠಾರ ಶಾಲೆಗೂ ಕೊರೋನಾ ವಕ್ಕರಿಸಿ ಆತಂಕ ಸೃಷ್ಟಿಸಿದೆ. ಎಲ್ಲ ಪೋಷಕರ ದುಗುಡ ಮತ್ತಷ್ಟು ಹೆಚ್ಚಾಗಿದೆ. ವಠಾರ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದ ನಾಲ್ವರು ಮಕ್ಕಳಿಗೆ ಕೊರೋನಾ ಪಾಸಿಟಿವ್ ಬಂದಿರುವ ಘಟನೆ ಕಲಬುರ್ಗಿ ಜಿಲ್ಲೆ ಅಫಜಲಪುರ ತಾಲೂಕಿನ ಮಾಶಾಳ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. 

ಬಳಿಕ ಎಚ್ಚೆತ್ತ ಸರ್ಕಾರ ಇದೀಗ ವಿದ್ಯಾಗಮ ಯೋಜನೆಯನ್ನು ಸಹ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಇನ್ನು ಈ ಬಗ್ಗೆ ಎಚ್‌.ಡಿ. ಕುಮಾರಸ್ವಾಮಿ ಪ್ರತಿಕ್ರಿಯಿಸಿ, ಎಲ್ಲಕ್ಕಿಂತಲೂ ಜೀವ ಮುಖ್ಯ. ಈ ವರ್ಷ ಯಾವ ಕಾರಣಕ್ಕೂ ಶಾಲೆಗಳನ್ನು ತೆರೆಯಬೇಡಿ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.