ಬೆಂಗಳೂರು (ಫೆ.02):  ದೈಹಿಕ ಶಿಕ್ಷಕರನ್ನು, ಸಹ ಶಿಕ್ಷಕರೆಂದು ಪರಿಗಣಿಸುವ ಜೊತೆಗೆ ಮುಖ್ಯೋಪಾಧ್ಯಾಯರ ಹುದ್ದೆಗೂ ಪರಿಗಣಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶಕುಮಾರ್‌ ಹೇಳಿದರು.

ಬಿಜೆಪಿ ಸದಸ್ಯ ಚಿದಾನಂದ ಎಂ. ಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದ ಪ್ರೌಢಶಿಕ್ಷಣ ಶಾಲೆಗಳಲ್ಲಿ 3997 ಗ್ರೇಡ್‌-1ದೈಹಿಕ ಶಿಕ್ಷಕರು ಕತ್ಯವ್ಯ ನಿರ್ವಹಿಸುತ್ತಿದ್ದಾರೆ. ಈ ದೈಹಿಕ ಶಿಕ್ಷಣ ಶಿಕ್ಷಕರ ವೃಂದ ಮತ್ತು ನೇಮಕಾತಿಗೆ ಸಂಬಂಧಿಸಿ ಪ್ರೊ. ಎಲ್‌.ಆರ್‌. ವೈದ್ಯನಾಥನ್‌ ವರದಿಯ 14 ಶಿಫಾರಸುಗಳ ಪೈಕಿ 13 ಅಂಶಗಳನ್ನು ಜಾರಿಗೊಳಿಸಲಾಗಿದೆ. ಉಳಿದ ಒಂದು ಅಂಶವಾದ ದೈಹಿಕ ಶಿಕ್ಷಣ ಶಿಕ್ಷಕರುಗಳ ಪದನಾಮವನ್ನು ‘ಸಹ ಶಿಕ್ಷಕರು’ (ದೈಹಿಕ ಶಿಕ್ಷಣ) ಎಂದು ಪರಿಗಣಿಸಿ, ಸಹ ಶಿಕ್ಷಕರಿಗೆ ದೊರೆಯುವ ಎಲ್ಲ ರೀತಿಯ ಸೌಲಭ್ಯ ನೀಡುವ ಬಗ್ಗೆ ಇರುವ ಪ್ರಸ್ತಾವನೆ ಜಾರಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಆರ್ಥಿಕ ಇಲಾಖೆಗೂ ಪ್ರಸ್ತಾವನೆ ಕಳಿಸಲಾಗಿದೆ ಎಂದರು.

ರಾಜ್ಯದಲ್ಲಿ ಶಾಲೆ ಪ್ರಾರಂಭಿಸುವಂತೆ ಶಿಕ್ಷಣ ಸಚಿವರಿಗೆ ಬಂತು ಮನವಿ..! .

ಶಾಲಾ ಕಟ್ಟಡ ಎನ್‌ಒಸಿ :  ಖಾಸಗಿ ಶಾಲಾ ಕಟ್ಟಡಗಳು ಸುರಕ್ಷತೆ ಬಗ್ಗೆ ಲೋಕೋಪಯೋಗಿ ಮತ್ತು ಅಗ್ನಿಶಾಮಕ ವಿಭಾಗದಿಂದ ಪಡೆಯುವ ನಿರಾಕ್ಷೇಪಣ ಪತ್ರದ ಅವಧಿಯನ್ನು ಕ್ರಮವಾಗಿ ಐದು ಹಾಗೂ 2 ವರ್ಷಕ್ಕೆ ಹೆಚ್ಚಿಸಲಾಗಿದೆ ಎಂದು ಸಚಿವ ಎಸ್‌. ಸುರೇಶಕುಮಾರ್‌ ಕಾಂಗ್ರೆಸ್‌ನ ಗೋವಿಂದರಾಜ್‌ ಅವರ ಪ್ರಶ್ನೆಗೆ ಉತ್ತರಿಸಿದರು.

ಈ ನಿಯಮವನ್ನು ಸುಪ್ರೀಂ ಕೋರ್ಟ್‌ ಆದೇಶದ ಅನ್ವಯ ಜಾರಿಗೆ ತರಲಾಗಿದೆ. ಆದರೆ ಹಲವು ದಶಕಗಳ ಹಿಂದೆ ಆರಂಭವಾಗಿರುವ ಶಾಲೆಗಳಿಗೆ ಈ ನಿಯಮದಿಂದ ಎದುರಾಗಿರುವ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಗೋವಿಂದರಾಜ್‌, ನಿರಾಕ್ಷೇಪಣ ಪತ್ರವನ್ನು ಬೇರೆ ಬೇರೆ ಇಲಾಖೆಯಿಂದ ಪಡೆಯುವ ಬದಲು ಪ್ರತ್ಯೇಕ ಪ್ರಾಧಿಕಾರ ಮಾಡಿದರೆ ಅನುಕೂಲವಾಗುವುದು ಎಂದು ಸಲಹೆ ನೀಡಿದಾಗ,ಪರಿಶೀಲನೆ ನಡೆಸುವುದಾಗಿ ಸಚಿವರು ಪ್ರತಿಕ್ರಿಯಿಸಿದರು.