2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶವನ್ನು ನಿಗದಿಗಿಂತ ಒಂದು ದಿನ ಮುಂಚಿತವಾಗಿ ಪ್ರಕಟಿಸಲಾಗಿದೆ. ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್‌, ಮೊಬೈಲ್ ಆ್ಯಪ್, ಹಾಗೂ SMS ಮೂಲಕ ಪರಿಶೀಲಿಸಬಹುದು. ಈ ವರ್ಷ ಮೊದಲ ಬಾರಿಗೆ ಡಿಜಿಲಾಕರ್ ಮೂಲಕ ಅಂಕಪಟ್ಟಿ ಡೌನ್‌ಲೋಡ್ ಮಾಡಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ.

ಬೆಂಗಳೂರು: 2025-26ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ನಿಗದಿತ ವೇಳಾಪಟ್ಟಿಗಿಂತ ಒಂದು ದಿನ ಮೊದಲೇ ಪ್ರಕಟಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಿರ್ಧರಿಸಿದ್ದು, ಅದರಂತೆ ಗುರುವಾರ ಮಧ್ಯಾಹ್ನ 12 ಗಂಟೆಗೆ ಫಲಿತಾಂಶವನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರಕಟಿಸಿದ್ದಾರೆ. 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶವು ಶೇ. 94.10 ದಾಖಲಾಗಿದೆ. ದಕ್ಷಿಣ ಕನ್ನಡ ಫಸ್ಟ್, ಉಡುಪಿ ದ್ವಿತೀಯ ಮತ್ತು ಉತ್ತರ ಕನ್ನಡ ತೃತೀಯ ಸ್ಥಾನ ಪಡೆದಿದ್ದು, ಕಲಬುರ್ಗಿ ಕೊನೆಯ ಸ್ಥಾನ ಪಡೆದಿದೆ.

Add Asianetnews Kannada as a Preferred SourcegooglePreferred

ಕಳೆದ ವರ್ಷ ಶೇ. 66.14 ದಾಖಲಾಗಿತ್ತು. ಈ ಬಾರಿ ಫಲಿತಾಂಶ ಏರಿಕೆಯಾಗಿದೆ. ಇದಕ್ಕೂ ಮುನ್ನ ವೆಬ್‌ಸೈಟ್‌ನಲ್ಲಿ 11.50ಕ್ಕೆ ಫಲಿತಾಂಶ ಪ್ರಕಟವಾಗಿ, ಮಕ್ಕಳಿಗೆ ಎಸ್‌ಎಂಎಸ್‌ ಮೂಲಕ ತಲುಪಿತ್ತು. ಈ ಬಾರಿ ಫಲಿತಾಂಶ ಶೇಕಡಾವಾರು ಹೆಚ್ಚಳವಾಗುವ ನಿರೀಕ್ಷೆ ಇತ್ತು. ಅದಕ್ಕಾಗಿ ಶಿಕ್ಷಣ ಇಲಾಖೆ ಜಿಲ್ಲಾಮಟ್ಟದಲ್ಲೇ ಸಾಕಷ್ಟು ಪ್ರಯತ್ನಗಳನ್ನು ಮಾಡಿತ್ತು. ಅದರಂತೆ ಐತಿಹಾಸಿಕ ಫಲಿತಾಂಶ ಲಭಿಸಿದೆ. 7,70,209 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. 7,26,704 ವಿದ್ಯಾರ್ಥಿಗಳು ಪಾಸಾಗಿದ್ದಾರೆ ಎಂದು ಶಿಕ್ಷಣ ಸಚಿವರು ಮಾಹಿತಿ ನೀಡಿದ್ದಾರೆ.

ಫಲಿತಾಂಶ ಇಲ್ಲಿ ಪರೀಕ್ಷಿಸಿ

ಈ ವೆಬ್‌ನಲ್ಲಿ ಪರೀಕ್ಷಿಸಿ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶವು https://karresults.nic.in ವೆಬ್‌ಸೈಟ್‌ನಲ್ಲಿ ಪ್ರಕಟವಾಗಲಿದೆ. ಜತೆಗೆ karnatakaOne ಮೊಬೈಲ್‌ ಆ್ಯಪ್‌ ಮೂಲಕವೂ ಫಲಿತಾಂಶ ಪಡೆಯಬಹುದು. ಜತೆಗೆ ವಿದ್ಯಾರ್ಥಿಗಳ ನೋಂದಾಯಿತ ಮೊಬೈಲ್‌ ಸಂಖ್ಯೆಗೆ ವಾಟ್ಸಾಪ್‌ ಅಥವಾ ಎಸ್ಎಂಎಸ್‌ ಸಂದೇಶದ ಮೂಲಕವೂ ಫಲಿತಾಂಶ ಲಭಿಸಲಿದೆ.

ಡಿಜಿಲಾಕರ್‌ಮೂಲಕ ಅಂಕ ಪಟ್ಟಿ

ಈ ವರ್ಷ ಮೊದಲ ಬಾರಿಗೆ ವಿದ್ಯಾರ್ಥಿಗಳ ಫಲಿತಾಂಶದ ಅಂಕಪಟ್ಟಿ ಡಿಜಿಲಾಕರ್‌ ಮೂಲಕ ಏ.23 ರಂದು ಮಧ್ಯಾಹ್ನ 12 ಗಂಟೆಗೆ ಲಭ್ಯವಿದೆ. https://www.digilocker.gov.in ಮೂಲಕ ಅಂಕಪಟ್ಟಿಯನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಡಿಜಿಲಾಕರ್‌ನಿಂದ ಅಂಕ ಪಟ್ಟಿ ಡೌನ್‌ಲೋಡ್‌ ಮಾಡಿಕೊಳ್ಳುವ ಪ್ರಕ್ರಿಯೆಯನ್ನು https://tinyurl.com/mw84wmh9 ಲಿಂಕ್‌ ಬಳಸಿ ತಿಳಿದುಕೊಳ್ಳಬಹುದು.

ಇನ್ನು ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಎಸ್ಸೆಸ್ಸೆಲ್ಸಿ ತೃತೀಯ ಭಾಷೆಗೆ ಹೈಕೋರ್ಟ್‌ ಆದೇಶದಂತೆ ಗ್ರೇಡ್‌ ಬದಲಿಗೆ ಅಂಕಗಳನ್ನೇ ಪರಿಗಣಿಸಿ ಫಲಿತಾಂಶ ಪ್ರಕಟಿಸಿದೆ. ಮಾ.18 ರಿಂದ ಏ.2 ರವರೆಗೆ ನಡೆದಿತ್ತು.