ಬೆಂಗಳೂರು(ಫೆ.05):  ಅತಿ ಹೆಚ್ಚು ವೈರಲ್‌ ಲೋಡ್‌ ಇರುವ ಕೊರೋನಾ ವಾರ್ಡ್‌ ಸೇರಿದಂತೆ ಮನುಷ್ಯರು ಹೋಗಲು ಸುರಕ್ಷಿತವಲ್ಲದ ಸ್ಥಳಗಳಿಗೆ ತೆರಳಿ ಸರಳವಾಗಿ ಕೆಲಸ ಮಾಡಬಲ್ಲ ರಿಮೋಟ್‌ ನಿಯಂತ್ರಿತ ‘ರೋಬೋಟ್‌ ಮಾನವ’ನನ್ನು ಐಐಎಸ್‌ಸಿ ವಿದ್ಯಾರ್ಥಿಗಳು ಆವಿಷ್ಕರಿಸಿದ್ದಾರೆ.

‘ಆಶಾ’ ಹೆಸರಿನ ಈ ರೋಬೋಟ್‌ ರಿಮೋಟ್‌ ಮಾರ್ಗದರ್ಶನದ ಮೂಲಕ ಕೆಲಸ ಮಾಡುತ್ತದೆ. ಅಷ್ಟೇ ಅಲ್ಲ ಪ್ರಾಥಮಿಕ ಸಂಭಾಷಣೆಯನ್ನೂ ಮಾಡಬಲ್ಲ ರೊಬೋಟ್‌ ಅದಕ್ಕೆ ಅನುಗುಣವಾಗಿ ಮುಖದ ಹಾವಭಾವಗಳನ್ನು ಬದಲಿಸಬಲ್ಲದು. ಇದೇ ಕಾರಣಕ್ಕೆ ಏರೋ ಇಂಡಿಯಾ ವಸ್ತು ಪ್ರದರ್ಶನ ಕೇಂದ್ರದಲ್ಲಿ ರೊಬೋಟ್‌ ಆಕರ್ಷಕ ಬಿಂದುವಾಗಿ ಬದಲಾಗಿದೆ.

ಐಐಎಸ್ಸಿ ವತಿಯಿಂದಲೇ ಸ್ಥಾಪಿಸಲಾಗಿರುವ ಆರ್ಟ್‌ಪಾರ್ಕ್ ಕಂಪನಿ ತಾಂತ್ರಿಕ ಸಹಯೋಗದಲ್ಲಿ ಐಐಎಸ್ಸಿಯ ಐದು ಮಂದಿ ವಿದ್ಯಾರ್ಥಿಗಳು ರೋಬೋಟ್‌ ಅಭಿವೃದ್ಧಿಪಡಿಸಿದ್ದಾರೆ. ಈ ಬಗ್ಗೆ ವಿವರಣೆ ನೀಡಿದ ತಾಂತ್ರಿಕ ಸಹಾಯಕ ವಿ.ಪಿ.ವರುಣ್‌, ಕೊರೋನಾ ವಾರ್ಡ್‌ನಲ್ಲಿನ ರೋಗಿಗಳಿಗೆ ಶುಶ್ರೂಷೆ ಮಾಡಲು ಸಹಾಯಕಿಯಾಗಿ, ವೃದ್ಧಾಶ್ರಮಗಳಲ್ಲಿ ಸೇವೆ ಸಲ್ಲಿಸಲು, ಸಬ್‌ಮೆರಿನ್‌ ಹಾಗೂ ಸ್ಪೇಸ್‌ ಮಿಷನ್ಸ್‌ಗಳಲ್ಲಿ ಆರೋಗ್ಯ ಸಹಾಯಕಿಯಾಗಿ ಕೆಲಸ ಮಾಡಲು ಹಾಗೂ ರಿಮೋಟ್‌ ಆಧಾರಿತ ಸ್ವಾಗತಕಾರಣಿಯಾಗಿ ಕೆಲಸ ಮಾಡಲ್ಲದು. ವ್ಯಕ್ತಿಯೊಂದಿಗೆ ದಿನನಿತ್ಯ ಬಳಕೆಯ ಪ್ರಾಥಮಿಕ ಸಂಭಾಷಣೆ ನಡೆಸಬಲ್ಲದು. ಮನುಷ್ಯರ ಮುಖ ಭಾವಗಳನ್ನು ಅನುಕರಿಸಬಲ್ಲದು ಎಂದರು ಹೇಳಿದರು.

ಹುಬ್ಬಳ್ಳಿ: ಕೊರೋನಾ ಸೋಂಕಿತರಿಗೆ ಹಣ್ಣು, ಆಹಾರ ವಿತರಿಸಲು ರೊಬೋಟಿಕ್‌ ಬಳಕೆ

ಡ್ರೋನ್‌ ಚಾರ್ಜ್‌ ಮಾಡುವ ಪೋರ್ಟ್‌

ಡ್ರೋನ್‌ಗಳ ಬ್ಯಾಟರಿ ಕಡಿಮೆ ಅವಧಿಗೆ ಖಾಲಿಯಾಗುವ ಹಿನ್ನೆಲೆಯಲ್ಲಿ ಡ್ರೋನ್‌ ತನ್ನ ಬ್ಯಾಟರಿಯನ್ನು ಸ್ವಯಂಚಾಲಿತವಾಗಿ ಚಾರ್ಜ್‌ ಮಾಡಿಕೊಳ್ಳಲು ಅನುವಾಗುವ ವಿಶಿಷ್ಟ ಚಾರ್ಜಿಂಗ್‌ ಪೋರ್ಟನ್ನೂ ಸಹ ಐಐಎಸ್ಸಿ ವಿದ್ಯಾರ್ಥಿಗಳು ಆವಿಷ್ಕರಿಸಿದ್ದಾರೆ.

ಡ್ರೋನ್‌ನ ಲ್ಯಾಂಡಿಂಗ್‌ ಲೆಗ್ಸ್‌ಗಳನ್ನು (ಕಾಲು) ಮಾತ್ರ ಬದಲಿಸಿ ಈ ಪೋರ್ಟ್‌ನಿಂದ ಚಾರ್ಜ್‌ ಮಾಡಬಹುದು. ಪೋರ್ಟ್‌ ಮೇಲೆ ಡ್ರೋನ್‌ ಕೂತ ತಕ್ಷಣ ಕಾಲುಗಳ ಮೂಲಕ ಡ್ರೋನ್‌ನ ಬ್ಯಾಟರಿ ಚಾರ್ಜ್‌ ಆಗುತ್ತದೆ. ಪೋರ್ಟ್‌ಗೆ ವಿದ್ಯುತ್‌ನಿಂದ ಮೊದಲೇ ಚಾರ್ಜ್‌ ಮಾಡಿ ಇಡಲಾಗುತ್ತದೆ. ಡ್ರೋನ್‌ ಅದರ ಮೇಲೆ ಕುಳಿತಾಗ ಚಾರ್ಜ್‌ ಆಗುತ್ತದೆ. ರಾತ್ರಿ ವೇಳೆ ಗಸ್ತು ತಿರುಗುವ ಸುರಕ್ಷತಾ ಡ್ರೋನ್‌ಗಳಿಗೆ ಇದು ಉಪಯುಕ್ತ ಎಂದು ವರುಣ್‌ ಹೇಳಿದರು.