ಬೆಂಗಳೂರು(ಜ.13):  ರಾಜ್ಯದಲ್ಲಿ ಜನವರಿ 15 ರಿಂದ ಪದವಿ, ಸ್ನಾತಕೋತ್ತರ, ಪಾಲಿಟೆಕ್ನಿಕ್‌ ಹಾಗೂ ಎಂಜಿನಿಯರಿಂಗ್‌ ಕಾಲೇಜುಗಳು ಪೂರ್ಣ ಪ್ರಮಾಣದಲ್ಲಿ ಆರಂಭಗೊಳ್ಳಲಿರುವ ಹಿನ್ನೆಲೆಯಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಉನ್ನತ ಶಿಕ್ಷಣ ಇಲಾಖೆ ಮಾರ್ಗಸೂಚಿ ಜಾರಿ ಮಾಡಿದೆ.

ನ. 17ರಿಂದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಕಾಲೇಜು ಆರಂಭಿಸಿದಾಗ ನೀಡಲಾಗಿದ್ದ ಮಾರ್ಗಸೂಚಿಗಳನ್ನೇ ಇತರೆ ಎಲ್ಲಾ ವಿದ್ಯಾರ್ಥಿಗಳಿಗೂ ವಿಸ್ತರಿಸಲಾಗಿದ್ದು, ಶಿಕ್ಷಣ ಸಂಸ್ಥೆಗಳು, ಬೋಧಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಡ್ಡಾಯವಾಗಿ ಪಾಲಿಸಬೇಕೆಂದು ಸೂಚಿಸಲಾಗಿದೆ.

ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್: ಸಿಲಬಸ್ , ಶುಲ್ಕ ಬಗ್ಗೆ ಸುರೇಶ್ ಕುಮಾರ್ ಮಹತ್ವದ ಹೇಳಿಕೆ

ಮಾರ್ಗಸೂಚಿಯಲ್ಲಿ ತರಗತಿಗೆ ಬರಲು ವಿದ್ಯಾರ್ಥಿಗಳು ಪೋಷಕರ ಅನುಮತಿ ಪತ್ರ ತರುವುದು ಕಡ್ಡಾಯ. ಆದರೆ ಕೋವಿಡ್‌ ಪರೀಕ್ಷೆ ಕಡ್ಡಾಯವಲ್ಲ. ತರಗತಿಗೆ ಬರಲಿಚ್ಛಿಸದವರು ಆನ್‌ಲೈನ್‌ ತರಗತಿ ಮುಂದುವರೆಸಬಹುದು. ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಕಾಲೇಜಿನ ಕೊಠಡಿಗಳ ಸಂಖ್ಯೆಗೆ ಅನುಗುಣವಾಗಿ ಆಸನದ ವ್ಯವಸ್ಥೆ ಮಾಡಬೇಕು. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರೆ ತಂಡ ರಚಿಸಿ ಪಾಳಿ ಆಧಾರದಲ್ಲಿ ತರಗತಿ ನಡೆಸಬೇಕು. ಸಾಮಾಜಿಕ ಅಂತರ, ಮಾಸ್ಕ್‌ ಧರಿಸುವುದು ಕಡ್ಡಾಯ.

ಅಧ್ಯಾಪಕರು ಮುಂದಿನ ಒಂದು ತಿಂಗಳ ಕಾಲ ಪ್ರತಿ ತರಗತಿಯ ಬೋಧನಾ ಸಾಮಗ್ರಿಗಳನ್ನು ವಿದ್ಯಾರ್ಥಿಗಳಿಗೆ ವಾಟ್ಸಾಪ್‌, ಇ ಮೇಲ್‌ ಅಥವಾ ಟೆಲಿಗ್ರಾಂ ಮೂಲಕ ಕಳಿಸಬೇಕು. ವಿಡಿಯೋ ಪಾಠಗಳು, ಪವರ್‌ ಪಾಯಂಟ್‌ ಪ್ರೆಸೆಂಟೇಶನ್‌, ಇ-ಪುಸ್ತಕ, ಇ-ನೋಟ್ಸ್‌, ಆಡಿಯೋ ಪುಸ್ತಕ ಇತರೆ ಅಧ್ಯಯನ ಸಾಮಗ್ರಿಯನ್ನು ಕಡ್ಡಾಯವಾಗಿ ಕಾಲೇಜ್‌ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಮಾರ್ಗಸೂಚಿ ಪಾಲಿಸಿ ಗ್ರಂಥಾಲಯ, ಕ್ಯಾಂಟೀನ್‌ ಆರಂಭಿಸಬಹುದು. ಎನ್‌ಎಸ್‌ಎಸ್‌ ಹಾಗೂ ಎನ್‌ಸಿಸಿ ಚಟುವಟಿಕೆಗಳನ್ನು ನಡೆಸಬಹುದು ಎಂದು ತಿಳಿಸಲಾಗಿದೆ.