ಸೈನಿಕ ಶಾಲೆಗೆ ಬೇಕಾದ ಭೂಮಿ ಹಾಗೂ ಅನುದಾನ ಸರ್ಕಾರ ನೀಡಲಿದೆ. ಇದರ ನಿರ್ವಹಣೆಯನ್ನು ಸೇನೆಯು ನಿರ್ವಹಿಸಲಿದೆ| ಈ ಶಾಲೆಗಳಲ್ಲಿ ಶೇ.50ರಷ್ಟು ಪ್ರವೇಶಾತಿಯನ್ನು ಪರಿಶಿಷ್ಟ ಜಾತಿ, ಪಂಗಡದವರಿಗೆ ಕಡ್ಡಾಯ| ರಾಜ್ಯದಲ್ಲಿ ತಲಾ 20-25 ಕೋಟಿ ರು. ವೆಚ್ಚದಲ್ಲಿ 173 ವಸತಿ ಶಾಲಾ ಸಂಕೀರ್ಣ ನಿರ್ಮಾಣಕ್ಕೆ ಚಾಲನೆ|
ಬೆಂಗಳೂರು(ಫೆ.04): ಬೆಳಗಾವಿ, ವಿಜಯಪುರದ ಸೈನಿಕ ಶಾಲೆ ಮಾದರಿಯಲ್ಲಿ ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ಸೈನಿಕ ಶಾಲೆ ತೆರೆಯಲು ಉದ್ದೇಶಿಸಲಾಗಿದೆ ಎಂದು ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಹೇಳಿದರು.
ಕಾಂಗ್ರೆಸ್‌ನ ಅರವಿಂದಕುಮಾರ್ ಅರಳಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸೈನಿಕ ಶಾಲೆಗೆ ಬೇಕಾದ ಭೂಮಿ ಹಾಗೂ ಅನುದಾನವನ್ನು ಸರ್ಕಾರ ನೀಡಲಿದೆ. ಇದರ ನಿರ್ವಹಣೆಯನ್ನು ಸೇನೆಯು ನಿರ್ವಹಿಸಲಿದೆ. ಈ ಶಾಲೆಗಳಲ್ಲಿ ಶೇ.50ರಷ್ಟು ಪ್ರವೇಶಾತಿಯನ್ನು ಪರಿಶಿಷ್ಟ ಜಾತಿ, ಪಂಗಡದವರಿಗೆ ಕಡ್ಡಾಯವಾಗಿ ನೀಡಬೇಕು ಎಂದರು.
ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆಗೆ ಸಿಬ್ಬಂದಿ ಕೊರತೆ
ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಗಿರಿಜನ ಉಪಯೋಜನೆ ಅಡಿ ಮೀಸಲಿಟ್ಟಅನುದಾನವನ್ನು ಸಂಪೂರ್ಣವಾಗಿ ಅದೇ ಸಮುದಾಯಕ್ಕೆ ಬಳಸಬೇಕು. ಅಷ್ಟೇ ಅಲ್ಲ ಅನುದಾನವನ್ನು ಈ ವರ್ಗಗಳು ವಾಸಿಸುವ ಮನೆಗಳಿಂದ ಶಾಲೆ, ಮಾರುಕಟ್ಟೆ, ದೇವಾಲಯದವರೆಗೆ ರಸ್ತೆ ನಿರ್ಮಿಸಲು ಅವಕಾಶ ನೀಡಲಾಗಿದೆ. ಅದರೆ ಯಾವುದೇ ಕೆಲಸ ಮಾಡದೆ ಬೋಗಸ್ ಬಿಲ್ ಸೃಷ್ಟಿಸಿ ಹಣ ಪಡೆದುಕೊಂಡಿದ್ದರೆ ಉನ್ನತ ಅಧಿಕಾರಿಗಳಿಂದ ತನಿಖೆ ಮಾಡಿಸಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿ ತಲಾ 20-25 ಕೋಟಿ ರು. ವೆಚ್ಚದಲ್ಲಿ 173 ವಸತಿ ಶಾಲಾ ಸಂಕೀರ್ಣ ನಿರ್ಮಾಣಕ್ಕೆ ಚಾಲನೆ ನೀಡಲಾಗಿದ್ದು, ಇದಕ್ಕಾಗಿ 2400 ಕೋಟಿ ರು. ಬಿಡುಗಡೆ ಮಾಡಲಾಗಿದೆ. ಶೇ. 50 ರಷ್ಟು ಕಾಮಗಾರಿ ಪೂರ್ಣವಾಗಿದೆ ಎಂದ ಸಚಿವರು, ರಾಜ್ಯದಲ್ಲಿರುವ 684 ವಸತಿ ಶಾಲೆಗಳ ಪೈಕಿ 300ಕ್ಕೂ ಹೆಚ್ಚು ಶಾಲೆಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ ಎಂದು ಸದಸ್ಯರ ಪ್ರಶ್ನೆಗೆ ಉತ್ತರಿಸಿದರು. ಪ್ರತಿಪಕ್ಷದ ನಾಯಕ ಎಸ್.ಆರ್. ಪಾಟೀಲ್, ಕಾಂಗ್ರೆಸ್ ಸದಸ್ಯ ಸಿ.ಎಂ. ಇಬ್ರಾಹಿಂ, ಬಿಜೆಪಿಯ ಎಚ್. ವಿಶ್ವನಾಥ್ ಪೂರಕ ಪ್ರಶ್ನೆ ಕೇಳಿದರು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 4, 2021, 7:57 AM IST