ಬೆಂಗಳೂರು(ಸೆ.04): ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ ರಾಜ್ಯದಲ್ಲಿನ ಎಲ್ಲಾ ಸರ್ಕಾರಿ ಶಾಲೆಗಳಲ್ಲೂ ಪೂರ್ವ ಪ್ರಾಥಮಿಕ ಶಿಕ್ಷಣ (ಎಲ್‌ಕೆಜಿ, ಯುಕೆಜಿ) ಪ್ರಾರಂಭಿಸಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಮೊದಲ ಹಂತದಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ 276 ಸರ್ಕಾರಿ ಕರ್ನಾಟಕ ಪಬ್ಲಿಕ್‌ ಶಾಲೆಗಳಲ್ಲಿ (ಕೆಪಿಎಸ್‌) ಎಲ್‌ಕೆಜಿ, ಯುಕೆಜಿ ಶಿಕ್ಷಣ ತರಗತಿಗಳನ್ನು ಪ್ರಾರಂಭಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲೂ ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ಪ್ರಾರಂಭಿಸುವ ಕುರಿತು ಚರ್ಚೆ ನಡೆಯಿತು. ಈ ವೇಳೆ ಮೂಲ ಸೌಕರ್ಯ, ನುರಿತ ಶಿಕ್ಷಕರ ಕೊರತೆ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಬಹುದು. ಹೀಗಾಗಿ 276 ಪಬ್ಲಿಕ್‌ ಶಾಲೆಗಳಲ್ಲಿ (ಸರ್ಕಾರಿ ಆಂಗ್ಲ ಹಾಗೂ ಕನ್ನಡ ಮಾಧ್ಯಮ ಶಾಲೆಗಳಲ್ಲಿ) ಪ್ರಾರಂಭಿಸಲು ನಿರ್ಧರಿಸಲಾಯಿತು.

ಬಗ್ಗೆ ಸಭೆ ಬಳಿಕ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ ರಾಜ್ಯದ ಎಲ್ಲಾ ಶಾಲೆಗಳಲ್ಲೂ ಎಲ್‌ಕೆಜಿ, ಯುಕೆಜಿ ಪ್ರಾರಂಭಿಸುವ ಸರ್ಕಾರ ಚಿಂತನೆ ನಡೆಸಿದೆ. ಆದರೆ ಪ್ರಸಕ್ತ ವರ್ಷದಿಂದ 276 ಸರ್ಕಾರಿ ಪಬ್ಲಿಕ್‌ ಶಾಲೆಗಳಲ್ಲಿ ಮಾತ್ರ ಎಲ್‌ಕೆಜಿ, ಯುಕೆಜಿ ತರಗತಿ ಪ್ರಾರಂಭಿಸಲು ಅನುಮತಿ ನೀಡಲಾಗಿದೆ ಎಂದು ಹೇಳಿದರು.

ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್....!

ಮಕ್ಕಳಿಗೆ ಶಿಕ್ಷಣ ನೀಡಲು ಡಿಇಡಿ, ಬಿಇಡಿ ಆದವರಿಗೆ ಮಾಂಟೆಸ್ಸರಿ ತರಬೇತಿ ನೀಡಲಾಗುತ್ತಿದೆ. ಈ ಶಿಕ್ಷಕರಿಗೆ 7,500 ರು. ಮತ್ತು ಮಕ್ಕಳನ್ನು ನೋಡಿಕೊಳ್ಳುವ ಆಯಾಗಳಿಗೆ 5 ಸಾವಿರ ರು. ಗೌರವ ಸಂಭಾವನೆ ನೀಡಲು ತೀರ್ಮಾನಿಸಿದ್ದು, ಸರ್ಕಾರಿ ಶಾಲಾ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಸರ್ಕಾರ ಈ ತೀರ್ಮಾನ ಮಾಡಿದೆ ಎಂದು ಮಾಹಿತಿ ನೀಡಿದರು.

ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ. ಕುಮಾರಸ್ವಾಮಿ ಅವರು ಪ್ರತಿ ಹೋಬಳಿಗೊಂದರಂತೆ 276 ಮಾದರಿ ಕರ್ನಾಟಕ ಪಬ್ಲಿಕ್‌ ಶಾಲೆಗಳನ್ನು ಸ್ಥಾಪಿಸಿದ್ದರು. ಈ ವೇಳೆ 1ರಿಂದ 12ನೇ ತರಗತಿವರೆಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುವುದನ್ನು ತಪ್ಪಿಸಲು ಮುಂದಿನ ಶೈಕ್ಷಣಿಕ ವರ್ಷದಿಂದ ಎಲ್‌ಕೆಜಿ, ಯುಕೆಜಿ ತರಗತಿಗಳಿಗೂ ಚಾಲನೆ ನೀಡಲಾಗುವುದು ಎಂದು ಘೋಷಿಸಿದ್ದರು. ಇದೀಗ ನೂತನ ಸರ್ಕಾರ ಅನುಷ್ಠಾನಕ್ಕೆ ತಂದಿದೆ.

ಡಿಜಿಟಲ್‌ ಕಲಿಕೆ:

ಇದೇ ವೇಳೆ ಸರ್ಕಾರದ ಅಡಿ ಬರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಇಂಜಿನಿಯರಿಂಗ್‌ ಹಾಗೂ ಸರ್ಕಾರಿ ಪಾಲಿಟೆæಕ್ನಿಕ್‌ ಕಾಲೇಜುಗಳಲ್ಲಿ 35 ಕೋಟಿ ರು. ವೆಚ್ಚದಲ್ಲಿ ಡಿಜಿಟಲ್‌ ಲರ್ನಿಂಗ್‌ ಕೋರ್ಸ್‌ ಆರಂಭಿಸಲು ನಿರ್ಧರಿಸಲಾಗಿದೆ. 2020-21ನೇ ಶೈಕ್ಷಣಿಕ ಸಾಲಿನಲ್ಲಿ ಡಿಜಿಟಲ್‌ ಕಲಿಕೆಯನ್ನು ಪಠ್ಯದ ಒಂದು ಭಾಗವಾಗಿ 230 ಪಿ.ಯು ಕಾಲೇಜು, 87 ಪಾಲಿಟೆಕ್ನಿಕ್‌, 14 ಸರ್ಕಾರಿ ಇಂಜನಿಯರಿಂಗ್‌ ಕಾಲೇಜುಗಳಲ್ಲಿ ಕಲಿಸಲಾಗುವುದು ಎಂದು ಹೇಳಿದರು.

ಅರಕೇರಾ ಹೊಸ ತಾಲೂಕು -ಸಂಪುಟ ಸಭೆ ಅನುಮೋದನೆ

ಬೆಂಗಳೂರು: ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕು ಅರಕೇರಾ ಗ್ರಾಮ ಪಂಚಾಯಿತಿಯನ್ನು ತಾಲೂಕು ಆಗಿ ರಚನೆ ಮಾಡಲು ರಾಜ್ಯ ಸಚಿವ ಸಂಪುಟ ಗುರುವಾರ ಒಪ್ಪಿಗೆ ನೀಡಿದೆ. ಜತೆಗೆ ಶಿವಮೊಗ್ಗ ಜಿಲ್ಲೆಯ ಸೊರಬ ಪಟ್ಟಣ ಪಂಚಾಯಿತಿಯನ್ನು ಪುರಸಭೆಯನ್ನಾಗಿ, ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಲೋಕಾಪುರ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಲು ಒಪ್ಪಿಗೆ ನೀಡಿದೆ.