ಬಿಇ, ಬಿ. ಟೆಕ್ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್!
* 7 ಸೆಮಿಸ್ಟರ್‌ಗೇ 160 ಪಾಯಿಂಟ್ ಗಳಿಸಿದವರಿಗೆ 8ನೇ ಸೆಮಿಸ್ಟರ್ ಹಾಜರಿಯಿಂದ ವಿನಾಯಿತಿ
* ಆದರೆ ಪರೀಕ್ಷೆ ಬರೆಯಬೇಕು
* - ಐಐಟಿ ರೀತಿ ವ್ಯವಸ್ಥೆ ಜಾರಿಗೆ ವಿಟಿಯು ನಿಯಮಾವಳಿ ಪ್ರಕಟ
* ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗಲು, ತರಬೇತಿಗೆ ಅನುಕೂಲ
ಬೆಂಗಳೂರು(ಏ.18): ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಮತ್ತು ಅದರ ಸಂಯೋಜಿತ ಎಂಜಿನಿಯರಿಂಗ್ ಕಾಲೇಜುಗಳು ವಿದ್ಯಾರ್ಥಿಗಳಿಗೆ ಐಐಟಿ ಮಾದರಿಯ ವಿಶೇಷ ಸೌಲಭ್ಯ ನೀಡಲು ಮುಂದಾಗಿವೆ.
ಅದು- ಎಂಟು ಸೆಮಿಸ್ಟರ್‌ಗಳ ವ್ಯಾಸಂಗದ ಅವಧಿಯಲ್ಲಿ ಪಡೆಯಬೇಕಾದ 160 ಕ್ರೆಡಿಟ್ ಪಾಯಿಂಟ್‌ಗಳನ್ನು ಏಳನೇ ಸೆಮಿಸ್ಟರ್ ವೇಳೆಗೇ ಪಡೆದುಕೊಂಡರೆ 8ನೇ ಸೆಮಿಸ್ಟರ್‌ನ ತರಗತಿ ಹಾಜರಾತಿ, ಪ್ರಯೋಗಾಲಯ ಸೇರಿದಂತೆ ಇನ್ನಿತರೆ ಯಾವುದೇ ಶೈಕ್ಷಣಿಕ ಚಟುವಟಿಕೆಗೆ ವಿದ್ಯಾರ್ಥಿ ಹಾಜರಾಗುವ ಅಗತ್ಯವಿರುವುದಿಲ್ಲ. ಅಂತಹ ವಿದ್ಯಾರ್ಥಿಗೆ ಅವಧಿಗೂ ಮೊದಲೇ ಬಿಇ, ಬಿಟೆಕ್ ಕೋರ್ಸು ಪೂರ್ಣಗೊಳಿಸಿದ ಪ್ರಮಾಣ ಪತ್ರ ಸಿಗಲಿದೆ.
ಪ್ರತಿಭಾವಂತ ವಿದ್ಯಾರ್ಥಿಗಳು ಈ ರೀತಿ ಅವಧಿಗೆ ಮೊದಲೇ ನಿಗದಿತ ಕ್ರೆಡಿಟ್ ಅಂಕ ಪಡೆದುಕೊಳ್ಳುವುದರಿಂದ ದೊರೆಯುವ ಆರು ತಿಂಗಳು ಕಾಲಾವಕಾಶವು ಹೆಚ್ಚಿನ ವ್ಯಾಸಂಗ ಮಾಡಿ ಮುಂದಿನ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧರಾಗಲು ಅಥವಾ ವೃತ್ತಿ ಜೀವನ ಆರಂಭಿಸಬಯಸುವವರು ತರಬೇತಿ ಪಡೆಯಲು ಅಥವಾ ಕೆಲಸ ಹುಡುಕಲು ನೆರವಾಗಲಿದೆ.
ಐಐಟಿಗಳ ಮಾದರಿಯಲ್ಲಿ ತನ್ನ ವ್ಯಾಪ್ತಿಯ ವಿದ್ಯಾರ್ಥಿಗಳಿಗೂ ಇಂತಹದ್ದೊಂದು ವಿಶೇಷ ಅವಕಾಶವನ್ನು ಕಲ್ಪಿಸಲು ವಿಟಿಯು ಈಗಾಗಲೇ ಮುಂದಾಗಿದೆ. ಈ ಸಂಬಂಧ ನಿಯಮಗಳನ್ನೂ ರೂಪಿಸಿ ಪ್ರಕಟಿಸಿದ್ದು 2021-22ನೇ ಸಾಲಿನಲ್ಲಿ ಪ್ರಥಮ ವರ್ಷದ ಬಿಇ, ಬಿಟೆಕ್ ಪದವಿ ಕೋರ್ಸುಗಳಿಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ಇದು ಅನ್ವಯವಾಗಲಿದೆ ಎಂದು ತಿಳಿಸಿದೆ.
ಈ ಕುರಿತು ‘ಕನ್ನಡಪ್ರಭ’ದೊಂದಿಗೆ ಮಾತನಾಡಿ ವಿವರಣೆ ನೀಡಿದ ವಿಟಿಯು ಕುಲಪತಿ ಪ್ರೊ.ಕರಿಸಿದ್ದಪ್ಪ ಅವರು, ವಿದ್ಯಾರ್ಥಿಗಳಿಗೆ ಪ್ರತಿ ಸೆಮಿಸ್ಟರ್‌ನಲ್ಲಿ ಪಠ್ಯಕ್ರಮ ಓದಿ ಪರೀಕ್ಷೆ ಬರೆದು ಪಡೆಯುವ ಅಂಕಗಳ ಜೊತೆಗೆ ಅವರು ತರಗತಿ, ಪ್ರಯೋಗಾಲಯದ ಹಾಜರಾತಿ, ಫೀಲ್ಡ್ ವರ್ಕ್, ಔಟ್ ರೀಚ್, ಪ್ರಾಜೆಕ್ಟ್ ಕೆಲಸ, ತರಬೇತಿ, ವೈವಾ, ಪ್ರವೃತ್ತಿ, ಸ್ವಯಂ ಅಧ್ಯಯನ ಹೀಗೆ ಒಟ್ಟಾರೆ ಅವರ ಪ್ರತಿಯೊಂದು ಶೈಕ್ಷಣಿಕ ಚಟುವಟಿಕೆಗಳ ಪಾಲ್ಗೊಳ್ಳುವಿಕೆ ಮತ್ತು ಅದರಲ್ಲಿ ತೋರುವ ಉತ್ತಮ ಫಲಿತಾಂಶದ ಆಧಾರದಲ್ಲಿ ಕ್ರೆಡಿಟ್ ಪಾಯಿಂಟ್‌ಗಳನ್ನು ನೀಡಲಾಗುತ್ತದೆ. ಪ್ರತಿ ಸೆಮಿಸ್ಟರ್‌ಗೆ 20ರಿಂದ 28 ಕ್ರೆಡಿಟ್ ಪಾಯಿಂಟ್‌ಗಳನ್ನು ಪಡೆಯಲು ಅವಕಾಶವಿರುತ್ತದೆ. ಆದರೆ, ಕನಿಷ್ಠ 20ರಂತೆ ಒಟ್ಟು ಎಂಟು ಸೆಮಿಸ್ಟರ್‌ನಲ್ಲಿ 160 ಕ್ರೆಡಿಟ್ ಅಂಕಗಳನ್ನು ಪಡೆಯಬೇಕು. ಈ 160 ಅಂಕಗಳನ್ನು ಏಳೇ ಸೆಮಿಸ್ಟರ್‌ಗಳಲ್ಲಿ ಪಡೆದುಕೊಂಡರೆ ಅವರಿಗೆ 8ನೇ ಸೆಮಿಸ್ಟರ್‌ನಲ್ಲಿ ತರಗತಿ ಹಾಜರಾತಿ ಸೇರಿದಂತೆ ಇತರೆ ಯಾವುದೇ ಚಟುವಟಿಕೆಗಳಲ್ಲಿ ಭಾಗಿಯಾಗಲು ವಿನಾಯಿತಿ ಸಿಗುತ್ತದೆ. ಜತೆಗೆ ಪದವಿ ಪೂರೈಸಿದ ಪ್ರಮಾಣ ಪತ್ರ ದೊರೆಯುತ್ತದೆ. ಆಗ ಅವರಿಗೆ ಮುಂದಿನ ಶಿಕ್ಷಣಕ್ಕೆ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧರಾಗುವುದು, ವೃತ್ತಿ ಜೀವನಕ್ಕೆ ಆಸಕ್ತ ಕ್ಷೇತ್ರದಲ್ಲಿ ತರಬೇತಿ ಪಡೆಯುವುದು, ವೃತ್ತಿ ಹುಡುಕುವ ಕಾರ್ಯಗಳಿಗೆ ಸಮಯಾವಕಾಶ ದೊರೆಯುತ್ತದೆ ಎಂದು ತಿಳಿಸಿದರು.
ಆದರೆ, ಈ ವಿದ್ಯಾರ್ಥಿಗಳು ಕೂಡ ತಮ್ಮ ಇತರೆ ಸಹಪಾಠಿಗಳೊಂದಿಗೆ ವರ್ಷದ ಅಂತ್ಯದಲ್ಲಿ 8ನೇ ಸೆಮಿಸ್ಟರ್ ಪರೀಕ್ಷೆ ಬರೆಯಬೇಕು. ಎಲ್ಲರಿಗೂ ಘಟಿಕೋತ್ಸವದಲ್ಲೇ ಪದವಿ ಪ್ರಮಾಣ ಪತ್ರ ನೀಡಲಾಗುತ್ತದೆ. ಇದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಹೇಳಿದರು.
ಕಲಿಕೆಯಲ್ಲಿ ಉತ್ತಮ ಸಾಮರ್ಥ್ಯವಿರುವ ಮಕ್ಕಳಿಗೆ ಅವಧಿಗೂ ಮೊದಲೇ ನಿಗದಿತ ಕ್ರೆಡಿಟ್ ಅಂಕ ಪಡೆಯುವ ಶಕ್ತಿ ಇರುತ್ತದೆ. ಅಂತಹ ಮಕ್ಕಳಿಗೆ ಅನುಕೂಲವಾಗಲೆಂದು ಐಐಟಿ ಮಾದರಿಯಲ್ಲಿ ಚಾಯ್‌್ಸ ಬೇಸ್ಟ್ ಕ್ರೆಡಿಟ್ ಸಿಸ್ಟಮ್ (ಸಿಬಿಸಿಎಸ್) ಪದ್ಧತಿ ಅಡಿಯಲ್ಲಿ 8ನೇ ಸೆಮಿಸ್ಟರ್‌ಗೂ ಮೊದಲೇ ಕೋರ್ಸು ಪೂರ್ಣಗೊಳಿಸಿದ ಪ್ರಮಾಣ ಪತ್ರ ನೀಡುವ ಅವಕಾಶ ಕಲ್ಪಿಸಲಾಗಿದೆ.
- ಪ್ರೊ.ಕರಿಸಿದ್ದಪ್ಪ, ವಿಟಿಯು ಕುಲಪತಿ