Asianet Suvarna News Asianet Suvarna News

ರಾಜ್ಯದಲ್ಲಿ 60,000 ಮಕ್ಕಳು ಕಲಿಕೆಯಿಂದ ದೂರ..!

* 254 ಖಾಸಗಿ ಶಾಲೆಗಳ ಸಮೀಕ್ಷೆಯಲ್ಲಿ ಬಹಿರಂಗ
* ಎಲ್ಲ 18 ಸಾವಿರ ಶಾಲೆ ಸೇರಿಸಿದರೆ ಸಂಖ್ಯೆ ಇನ್ನಷ್ಟು ಅಧಿಕ
* ಶಾಲೆ ಬಿಟ್ಟಮಕ್ಕಳ ಬಗ್ಗೆ ಸರ್ಕಾರ ಸಮೀಕ್ಷೆ ಮಾಡಲಿ
 

60000 Children Away from Learning in Karnataka grg
Author
Bengaluru, First Published Jul 19, 2021, 8:18 AM IST

ಬೆಂಗಳೂರು(ಜು.19): ಕರ್ನಾಟಕ ಖಾಸಗಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ (ಕ್ಯಾಮ್ಸ್‌) ತನ್ನ ವ್ಯಾಪ್ತಿಯ ಕೇವಲ 254 ಶಾಲೆಗಳಲ್ಲಿ ನಡೆಸಿರುವ ಸಮೀಕ್ಷೆಯಲ್ಲಿ ಬರೋಬ್ಬರಿ 65 ಸಾವಿರ ವಿದ್ಯಾರ್ಥಿಗಳು ಕಳೆದ ವರ್ಷ (2020-21) ಕಲಿಕೆಯಿಂದ ದೂರ ಉಳಿದಿರುವ ಆತಂಕದ ಮಾಹಿತಿ ಕಂಡುಬಂದಿದೆ.

ಕೇವಲ 254 ಶಾಲೆಗಳಲ್ಲೇ 65 ಸಾವಿರ ಮಕ್ಕಳು ಕಲಿಕೆಯಿಂದ ಹೊರಗುಳಿದರೆ ಇನ್ನು ಇಡೀ ರಾಜ್ಯದಲ್ಲಿರುವ ಸುಮಾರು 18 ಸಾವಿರ ಖಾಸಗಿ ಶಾಲೆಗಳಲ್ಲಿ ಎಷ್ಟು ಮಕ್ಕಳು ಕಲಿಕೆಯಿಂದ ವಂಚಿತರಾಗಿರಬಹುದು ಎಂಬ ಬಗ್ಗೆ ಶಿಕ್ಷಣ ಇಲಾಖೆಯೇ ಪ್ರಮಾಣಿಕ ಸಮೀಕ್ಷೆ ನಡೆಸಬೇಕು ಎಂದು ಕ್ಯಾಮ್ಸ್‌ ಬಲವಾಗಿ ಆಗ್ರಹಿಸಿದೆ.

ಈ ಸಂಬಂಧ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಕ್ಯಾಮ್ಸ್‌ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್‌, ತಮ್ಮ ಸಂಘಟನೆ ನಡೆಸಿದ ಸಮೀಕ್ಷಾ ವರದಿ ಬಿಡುಗಡೆ ಮಾಡಿ ಅದರಲ್ಲಿ ಕಂಡುಬಂದಿರುವ ಅಂಕಿ ಅಂಶಗಳನ್ನು ವಿವರಿಸಿದರು. ಕೋವಿಡ್‌ ಸಂದರ್ಭದಲ್ಲಿ ಕಳೆದ ವರ್ಷ ಖಾಸಗಿ ಶಾಲೆಗಳಲ್ಲಿ ಬಹಳಷ್ಟು ಸಂಖ್ಯೆಯಲ್ಲಿ ಮಕ್ಕಳು ಶಾಲಾ ಶೈಕ್ಷಣಿಕ ಚಟುವಟಿಕೆಗಳಿಂದ ದೂರ ಉಳಿದಿದ್ದಾರೆ. ಕ್ಯಾಮ್ಸ್‌ ರಾಜ್ಯದ ಒಟ್ಟು 3,655 ಸದಸ್ಯ ಶಾಲೆಗಳನ್ನು ಹೊಂದಿದ್ದು ಈ ಪೈಕಿ ಕೇವಲ 254 ಶಾಲೆಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ 2020-21ನೇ ಸಾಲಿನಲ್ಲಿ ಎಲ್‌ಕೆಜಿಯಿಂದ 10ನೇ ತರಗತಿವರೆಗೆ ದಾಖಲಾತಿ ಪಡೆದಿದ್ದ 1.25 ಲಕ್ಷಕ್ಕೂ ಹೆಚ್ಚು ಮಕ್ಕಳ ಪೈಕಿ 65,745 ಮಕ್ಕಳು ಆನ್‌ಲೈನ್‌ ಸೇರಿದಂತೆ ಯಾವುದೇ ರೀತಿಯ ಕಲಿಕಾ ಚಟುವಟಿಕೆಯಲ್ಲಿ ಭಾಗವಹಿಸದಿರುವುದು ಕಂಡು ಬಂದಿದೆ ಎಂದು ಹೇಳಿದರು.

ಕರ್ನಾಟಕದಲ್ಲಿ ಶಾಲೆ ಪ್ರಾರಂಭ ಯಾವಾಗ? ಸುಳಿವು ಕೊಟ್ಟ ಸುರೇಶ್ ಕುಮಾರ್

1.25 ಲಕ್ಷ ಮಕ್ಕಳ ಪೈಕಿ ಶೇ.45ರಷ್ಟು ಮಕ್ಕಳು ನಿಗದಿತ ಶೇ.100ರಷ್ಟು ಶುಲ್ಕ ಪಾವತಿಸಿದ್ದಾರೆ. ಮಿಕ್ಕವರಲ್ಲಿ ಶೇ.17ರಷ್ಟು ಮಕ್ಕಳು ಶೇ.75ರಷ್ಟು, ಶೇ.12ರಷ್ಟು ಮಕ್ಕಳು ಶೇ.50ರಷ್ಟು, ಶೇ.17ರಷ್ಟು ಮಕ್ಕಳು ಶೇ.25ರಿಂದ 50ರಷ್ಟು ಮತ್ತು ಶೇ.9ರಷ್ಟು ಮಕ್ಕಳು ಶೇ.25ಕ್ಕಿಂತ ಕಡಿಮೆ ಶುಲ್ಕ ಪಾವತಿಸಿದ್ದಾರೆ ಎಂದು ಅವರು ಹೇಳಿದರು.

ಶಾಲೆಗಳ ಆರ್ಥಿಕ ನಷ್ಟ ಏರಿಕೆ: 

ಸಮೀಕ್ಷೆ ನಡೆಸಿದ ಶಾಲೆಗಳಲ್ಲಿ 2019-20ರಲ್ಲಿ 36 ಸಾವಿರ ಮಕ್ಕಳಿಂದ 31.62 ಕೋಟಿ ರು.ನಷ್ಟು ಶುಲ್ಕ ಬಾಕಿ ಉಳಿಸಿಕೊಂಡಿರುವುದು ಕಂಡು ಬಂತು. ನಂತರದ ವರ್ಷದಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ಮತ್ತಷ್ಟು ಕುಸಿದ ಕಾರಣ ಈ ನಷ್ಟದ ಪ್ರಮಾಣ 41.34 ಕೋಟಿ ರು.ಗಳಿಗೆ ಹೆಚ್ಚಳವಾಗಿದೆ. ಕಳೆದ ವರ್ಷ ಸರ್ಕಾರ ಶೇ.30ರಷ್ಟು ಶುಲ್ಕ ಕಡಿತಮಾಡಿದ್ದರಿಂದ ಖಾಸಗಿ ಶಾಲೆಗಳು ಭಾರೀ ಆರ್ಥಿಕ ನಷ್ಟಕ್ಕೆ ಒಳಗಾಗಿದ್ದು, ಶಾಲಾ ವಾಹನ ಲೋನ್‌, ಇತರೆ ಸಾಲಗಳ ಕಂತು ಪಾವತಿಸಲಾಗದೆ ಹಲವು ತಿಂಗಳ ಕಂತು ಬಾಕಿ ಉಳಿಸಿಕೊಂಡಿವೆ. ಶಿಕ್ಷಕರಿಗೆ ವೇತನ ನೀಡಲಾಗದೆ ಶೇ.50ರಷ್ಟು ಸಿಬ್ಬಂದಿ ಕಡಿತಗೊಳಿಸಿವೆ. ಇದೆಲವೂ ಸಮೀಕ್ಷೆಯಲ್ಲಿ ಕಂಡುಬಂದಿದೆ ಎಂದು ತಿಳಿಸಿದರು.

ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಸರ್ಕಾರ ಬೇಕಿದ್ದರೆ ಒಟ್ಟಾರೆ ಖಾಸಗಿ ಶಾಲೆಗಳಲ್ಲಿ ಕಲಿಕೆಯಿಂದ ದೂರ ಉಳಿದ ಮಕ್ಕಳು, ಶಾಲೆಗಳ ಆರ್ಥಿಕ ನಷ್ಟದ ಸಮೀಕ್ಷೆ ನಡೆಸಲಿ. ಅದಕ್ಕೆ ತಕ್ಕಂತೆ ಶಾಲೆಗಳಿಗೂ ಆರ್ಥಿಕ ಪ್ಯಾಕೇಜ್‌ ನೀಡಬೇಕು. ಈ ಬಾರಿ ಯಾವುದೇ ರೀತಿಯಲ್ಲೂ ಶುಲ್ಕ ಕಡಿತಗೊಳಿಸಬಾರದು. ಎಲ್ಲ ಮಕ್ಕಳಿಗೂ ದಾಖಲಾತಿ ಹಾಗೂ ಶುಲ್ಕ ಪಾವತಿ ಕಡ್ಡಾಯಗೊಳಿಸಬೇಕು ಎಂದು ಒತ್ತಾಯಿಸಿದರು.
 

Follow Us:
Download App:
  • android
  • ios