ಬೆಂಗಳೂರು, (ಏ.23): ಇದೇ ಏಪ್ರಿಲ್ 28ರಿಂದ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಗಳನ್ನು ಕಾಲೇಜುಗಳ ಹಂತದಲ್ಲೇ ನಡೆಸಲು ಪಿಯು ಬೋರ್ಡ್ ಇಂದು (ಶುಕ್ರವಾರ) ಮಾರ್ಗಸೂಚಿ ಬಿಡುಗಡೆಗೊಳಿಸಿದೆ. 

ಈ ಪರೀಕ್ಷೆಗಳು ಎ.28ರಿಂದ ಮೇ 18ರ ವರೆಗೆ ನಡೆಯಲಿದ್ದು, ಕಾಲೇಜು ಹಂತದಲ್ಲೇ ನಡೆಸುವಂತೆ ಪ್ರಾಂಶುಪಾಲರಿಗೆ ನಿರ್ದೇಶನ ನೀಡುವಂತೆ ಸುತ್ತೋಲೆಯಲ್ಲಿ ಇಲಾಖೆಯ ಉಪ ನಿರ್ದೇಶಕರಿಗೆ ಸೂಚಿಸಿದೆ. ಎಲ್ಲ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಬೇಕು.

ಅವರಿಗೆ ಕೊರೋನಾ ಪರೀಕ್ಷೆಯ ವರದಿ ಕಡ್ಡಾಯವಲ್ಲ. ಆದರೆ ಥರ್ಮಲ್‌ ಸ್ಕ್ಯಾನಿಂಗ್‌ ಕಡ್ಡಾಯವಾಗಿದೆ. ಈ ಮಾಹಿತಿಯನ್ನು ಎಲ್ಲ ವಿದ್ಯಾರ್ಥಿಗಳಿಗೆ ತಲುಪುವಂತೆ ನೋಡಿಕೊಳ್ಳುವುದು ಪ್ರಾಂಶುಪಾಲರ ಜವಾಬ್ದಾರಿಯಾಗಿದೆ ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿದೆ.

1ರಿಂದ 9ನೇ ತರಗತಿ ಪರೀಕ್ಷೆ: ಕೊನೆಗೂ ಅಂತಿಮ ನಿರ್ಧಾರ ಪ್ರಕಟಿಸಿದ ಸರ್ಕಾರ

ವಾರಾಂತ್ಯಗಳಲ್ಲಿ ಕರ್ಫ್ಯೂ ಇರುವ ಕಾರಣ ಶನಿವಾರ ಮತ್ತು ಭಾನುವಾರ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸುವಂತಿಲ್ಲ. ಆರೋಗ್ಯ ಇಲಾಖೆ ನೀಡಿರುವ ಕೊರೊನಾ ತಡೆ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಪಿಯು ಬೋರ್ಡ್ ಬಿಡುಗಡೆ ಮಾಡಿರುವ ಮಾರ್ಗಸೂಚಿಯಲ್ಲಿ ತಿಳಿಸಿದೆ.

 ಮೇ 4ರವರೆಗೆ ಪಿಯುಸಿ ಭೌತಿಕ ತರಗತಿಗಳು ಸ್ಥಗಿತಗೊಳ್ಳಲಿದ್ದು, ಪ್ರಥಮ, ದ್ವಿತೀಯ ಪಿಯು ತರಗತಿಗಳಿಗೆ ಆನ್‌ಲೈನ್‌ ಕ್ಲಾಸ್‌ ಮಾತ್ರ ನಡೆಯಲಿದೆ. ದ್ವಿತೀಯ ಪಿಯು ಪೂರ್ವ ಸಿದ್ಧತೆ ಪರೀಕ್ಷೆಗಳೂ ಸ್ಥಗಿತಗೊಳ್ಳಲಿದ್ದು, ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಪ್ರಶ್ನೆ ಪತ್ರಿಕೆಗಳಾಗಿ ವಿದ್ಯಾರ್ಥಿಗಳಿಗೆ ನೀಡಲು ಪದವಿ ಪೂರ್ವ ಶಿಕ್ಷಣ ಇಲಾಖೆ ಕಾಲೇಜುಗಳಿಗೆ ನಿರ್ದೇಶನ ನೀಡಿದೆ.