ಕಾಲೇಜು ಹಂತ​ದಲ್ಲೇ ಅ.20ರೊಳಗೆ ಪೂರಕ ಪರೀ​ಕ್ಷೆ| ಪೂರಕ ಪರೀ​ಕ್ಷೆ​ಯಲ್ಲಿ ಫೇಲ್‌ ಆದರೂ ಪಾಸ್‌ ಮಾಡಿ| ಪದ​ವಿ​ಪೂರ್ವ ಶಿಕ್ಷಣ ಇಲಾಖೆ ಸೂಚ​ನೆ| ಅ.20ರೊಳಗೆ ಕಾಲೇಜು ಹಂತದಲ್ಲೇ ಪೂರಕ ಪರೀಕ್ಷೆ ನಡೆಸಿ ಫಲಿತಾಂಶದಲ್ಲಿ ಅವರು ಗಳಿಸಿದ ಅಂಕ ಪರಿಗಣಿಸಬೇಕು| 

ಬೆಂಗ​ಳೂ​ರು(ಅ.10): ಕೋವಿಡ್‌ ಹಿನ್ನೆಲೆಯಲ್ಲಿ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಅ.20ರೊಳಗೆ ಆಯಾ ಕಾಲೇಜು ಹಂತದಲ್ಲೇ ಪೂರಕ ಪರೀಕ್ಷೆ ನಡೆಸಬೇಕು. ಪರೀಕ್ಷೆಯಲ್ಲಿ ಉತ್ತೀರ್ಣವಾಗದವರಿಗೆ ಉತ್ತೀರ್ಣಕ್ಕೆ ಬೇಕಾದ ಗರಿಷ್ಠ ಅಂಕ ನೀಡಿ ಮುಂದಿನ ಶಿಕ್ಷಣಕ್ಕೆ ಅವಕಾಶ ಕಲ್ಪಿಸುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ಸೂಚಿಸಿದೆ.

ಈ ಸಂಬಂಧ ಇಲಾಖೆಯ ಎಲ್ಲಾ ಉಪನಿರ್ದೇಶಕರು, ಕಾಲೇಜುಗಳ ಪ್ರಾಂಶುಪಾಲರಿಗೆ ಸುತ್ತೋಲೆ ನೀಡಿರುವ ಪದವಿ ಪೂರ್ವ ಶಿಕ್ಷಣ ಇಲಾಖೆ ನಿದೇಶಕರು, 2020ರ ಫೆಬ್ರವರಿಯಲ್ಲಿ ನಡೆದ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಗೆ ಗೈರು ಹಾಜರಾದ ಹಾಗೂ ಕಳೆದ ಜುಲೈ 13ಕ್ಕೂ ಮುನ್ನ ಸುತ್ತೋಲೆಯಂತೆ ಪೂರಕ ಪರೀಕ್ಷೆಗೆ ಶುಲ್ಕ ಪಾವತಿಸಿರುವ ಎಲ್ಲ ವಿದ್ಯಾರ್ಥಿಗಳಿಗೂ ಅ.20ರೊಳಗೆ ಕಾಲೇಜು ಹಂತದಲ್ಲೇ ಪೂರಕ ಪರೀಕ್ಷೆ ನಡೆಸಿ ಫಲಿತಾಂಶದಲ್ಲಿ ಅವರು ಗಳಿಸಿದ ಅಂಕ ಪರಿಗಣಿಸಬೇಕು. 

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ; ಬಾಲಕಿಯರದ್ದೇ ಮೇಲುಗೈ!

ಒಂದು ವೇಳೆ ಉತ್ತೀರ್ಣಕ್ಕೆ ಅಗತ್ಯದಷ್ಟು ಅಂಕ ಗಳಿಸದ ವಿದ್ಯಾರ್ಥಿಗಳಿಗೆ ಉತ್ತೀರ್ಣಕ್ಕೆ ಅಗತ್ಯದಷ್ಟು ಅಂಕ ನೀಡಿ ದ್ವಿತೀಯ ಪಿಯುಸಿ ಪ್ರವೇಶಕ್ಕೆ ಅವಕಾಶ ಕಲ್ಪಿಸಬೇಕು. ಈ ಫಲಿತಾಂಶಕ್ಕೆ ಜಿಲ್ಲಾ ಉಪನಿರ್ದೇಶಕರ ಅನುಮೋದನೆ ಪಡೆಯಬೇಕು ಎಂದು ಸೂಚಿಸಿದ್ದಾರೆ.