ಬೆಂಗಳೂರು, (ಮೇ.16): ಉನ್ನತ ಶಿಕ್ಷಣದ ಪರೀಕ್ಷೆ ಕುರಿತಂತೆ ಜೂನ್‌ ಮೊದಲ ವಾರದಲ್ಲಿ ನಿರ್ಧಾರ ಪ್ರಕಟಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ ಸ್ಪಷ್ಟಪಡಿಸಿದ್ದಾರೆ.

ಕೊರೋನಾ ಕುರಿತ ಕರ್ನಾಟಕ ಸರ್ಕಾರದ ಉಪಕ್ರಮಗಳ ಕುರಿತು ‘ಸಮರ್ಥ ಭಾರತ’ ಫೇಸ್‌ಬುಕ್‌ ಪೇಜ್‌ನ ಲೈವ್‌ ಕಾರ್ಯಕ್ರಮದಲ್ಲಿ ಶನಿವಾರ ಪಾಲ್ಗೊಂಡ ಅವರು ಈ ವಿಷಯ ಪ್ರಕಟಿಸಿದರು. 

ಹೊಸ ರೀತಿಯಲ್ಲಿ ಶಾಲೆಗಳು ಆರಂಭದ ಬಗ್ಗೆ ಇದ್ದ ಗೊಂದಲಗಳಿಗೆ ತೆರೆ ಎಳೆದ ಶಿಕ್ಷಣ ಇಲಾಖೆ

 ಪರೀಕ್ಷೆ ಕುರಿತಂತೆ ಜೂನ್‌ ಮೊದಲ ವಾರದಲ್ಲಿ ನಿರ್ಧಾರ ಪ್ರಕಟಿಸಲಾಗುವುದು. ಆದ್ದರಿಂದ ಎಲ್ಲ ವಿದ್ಯಾರ್ಥಿಗಳು ಆನ್‌ಲೈನ್‌/ಆಫ್‌ಲೈನ್‌ ತರಗತಿ ಮೂಲಕ ಅಭ್ಯಾಸ ಪೂರ್ಣಗೊಳಿಸುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ.

 ಪರೀಕ್ಷೆಗಳು ಯಾವಾಗ, ಹೇಗೆ ನಡೆಸಬೇಕು ಎಂಬ ವಿಚಾರವಾಗಿ ವಿಶ್ವವಿದ್ಯಾಲಯಗಳ ಕುಲಪತಿಗಳ ಜತೆ ಐದು ಬಾರಿ ವೀಡಿಯೋ ಕಾನ್ಫರೆನ್ಸ್ ನಡೆಸಿದ್ದೇನೆ. ಪರೀಕ್ಷೆ ಬಗ್ಗೆ ವಿದ್ಯಾರ್ಥಿಗಳು ತಲೆಕೆಡಿಸಿಕೊಳ್ಳುವುದು ಬೇಡ. ಲಾಕ್‌ಡೌನ್‌ ಅವಧಿಯಲ್ಲಿ ಆನ್‌ಲೈನ್‌ ತರಗತಿಗಳಿಗೆ ಹಾಜರಾಗಿ, ಪಠ್ಯಕ್ರಮದ ಅಭ್ಯಾಸ ಮಾಡಿ. ನೆಟ್‌ವರ್ಕ್‌ ಸಮಸ್ಯೆ ಇರುವವರು ವೀಡಿಯೋಗಳನ್ನು ಡೌನ್‌ಲೋಡ್‌ ಮಾಡಿ ವೀಕ್ಷಿಸಿ ಎಂದರು.

ಕಾಲೇಜಿಗೆ ಹೋಗುವ ಬದಲು ಇರುವ ಸ್ಥಳದಿಂದಲೇ ಅಭ್ಯಾಸ ಮಾಡಿ ಜ್ಞಾನರ್ಜನೆಗೆ ಮೊದಲ ಆದ್ಯತೆ ಕೊಟ್ಟಾಗ ಪರೀಕ್ಷೆ ಎದುರಿಸುವುದು ಕಷ್ಟವಾಗದು. ಜೂನ್‌ ಮೊದಲ ವಾರದಲ್ಲಿ ಪರೀಕ್ಷೆ ಪೂರ್ಣ ವಿವರನ್ನು ನೇರವಾಗಿ ಹಂಚಿಕೊಳ್ಳುತ್ತೇನೆ. ವಿದ್ಯಾರ್ಥಿಗಳ ಹಿತ ಕಾಯುವುದು ನಮ್ಮ ಜವಾಬ್ದಾರಿ. ಈ ನಿಟ್ಟಿನಲ್ಲಿ ಎಲ್ಲ ಅಗತ್ಯ ಕ್ರಮ ವಹಿಸಲಾಗುವುದು ಎಂದು ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರು.