ಬೆಂಗಳೂರು[ಮಾ.12]: ಮಧುಮೇಹದಿಂದ ಬಳಲುತ್ತಿರುವ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷಾ ಕೇಂದ್ರಗಳಿಗೆ ಇನ್ಸುಲಿನ್‌ನಂತಹ ವೈದ್ಯಕೀಯ ಸಲಕರಣೆಗಳನ್ನು ಕೊಂಡೊಯ್ಯಲು ಹಾಗೂ ಶ್ರವಣದೋಷವುಳ್ಳ ವಿದ್ಯಾರ್ಥಿಗಳಿಗೆ ಸಂಜ್ಞಾ ಭಾಷೆ ಅರಿತ ವಿಶೇಷ ಶಿಕ್ಷಕರನ್ನು ಒದಗಿಸಲು ಅವಕಾಶ ಕಲ್ಪಿಸಲಾಗಿದೆ.

ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡುತ್ತಿರುವ ಕೆಲವು ವಿದ್ಯಾರ್ಥಿಗಳು ಮಧುಮೇಹ-1ರಿಂದ ಬಳಲುತ್ತಿದ್ದಾರೆ. ಅಂತಹ ವಿದ್ಯಾರ್ಥಿಗಳಿಗೆ ಸಕ್ಕರೆ ಅಂಶ ನಿಯಂತ್ರಿಸುವ ಇನ್ಸುಲಿನ್‌ ಪಂಪ್‌ ಸೇರಿದಂತೆ ಮಾತ್ರೆಯನ್ನು ಪರೀಕ್ಷಾ ಕೇಂದ್ರಗಳಿಗೆ ಕೊಂಡೊಯ್ಯಲು ಅನುಮತಿ ನೀಡಬೇಕೆಂದು ವಿದ್ಯಾರ್ಥಿಗಳು ಹಾಗೂ ಪೋಷಕರು ದೂರವಾಣಿ ಮೂಲಕ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಈ ಅವಕಾಶ ಮಾಡಿಕೊಡಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ. ಕೆ.ಜಿ. ಜಗದೀಶ್‌ ತಿಳಿಸಿದ್ದಾರೆ.

ಪರೀಕ್ಷೆ ಬರೆದ ಏಕೈಕ ವಿದ್ಯಾರ್ಥಿನಿ : ಕರ್ತವ್ಯ ನಿರ್ವಹಿಸಿದ್ದು18 ಸಿಬ್ಬಂದಿ

ಪರೀಕ್ಷಾ ಕೇಂದ್ರಗಳ ಅಧೀಕ್ಷಕರಿಗೆ ವಿದ್ಯಾರ್ಥಿಗಳು ಇನ್ಸುಲಿನ್‌ ಕೊಂಡೊಯ್ಯಲು ಮನವಿ ಮಾಡಿದರೆ, ಸಕ್ಕರೆ ಕಾಯಿಲೆ ಕುರಿತು ವೈದ್ಯರ ಸಲಹಾ ಪತ್ರವನ್ನು ಪರಿಶೀಲಿಸಿದ ಬಳಿಕ ಅವಕಾಶ ಕಲ್ಪಿಸುವಂತೆ ಸೂಚನೆ ನೀಡಿದೆ.

ಸಂಜ್ಞಾ ಭಾಷಾ ಶಿಕ್ಷಕ:

ಶ್ರವಣದೋಷವುಳ್ಳ ಮಕ್ಕಳಿಗೆ ಪರೀಕ್ಷಾ ಕೊಠಡಿಯಲ್ಲಿ ಉಂಟಾಗುವ ಸಂದೇಹ/ಗೊಂದಲಗಳಿಗೆ ಸ್ಪಂದಿಸಲು ಸಂಜ್ಞಾ ಭಾಷೆಯನ್ನು ಅರಿತಿರುವ ಹಾಗೂ ವಿದ್ಯಾರ್ಥಿಯು ಬರೆಯುತ್ತಿರುವ ವಿಷಯ ತಜ್ಞರಲ್ಲದ ವಿಶೇಷ ಶಿಕ್ಷಕರನ್ನು ನಿಯೋಜಿಸುವಂತೆ ಅವಕಾಶ ಕಲ್ಪಿಸಿದೆ. ಈ ಸಂಬಂಧ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ವಿದ್ಯಾರ್ಥಿಯ ಪ್ರವೇಶ ಪತ್ರ ಮತ್ತು ವೈದ್ಯಕೀಯ ಪ್ರಮಾಣ ಪತ್ರವನ್ನು ಪರಿಶೀಲಿಸಿ ಶಿಕ್ಷಕರನ್ನು ನಿಯೋಜಿಸುವಂತೆ ಸೂಚಿಸಿದೆ.

ಇಲಾಖೆಯ ಉಪ ನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿರುವ ಪ್ರೌಢಶಾಲಾ ಶಿಕ್ಷಕರಿಗೆ ವಿಷಯವನ್ನು ತಿಳಿಸಬೇಕು ಮತ್ತು ಸಂಬಂಧಪಟ್ಟವಿದ್ಯಾರ್ಥಿಗಳಿಗೆ ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಲು ಶಿಕ್ಷಣ ಇಲಾಖೆ ಆಯುಕ್ತರು ಸೂಚನೆ ನೀಡಿದ್ದಾರೆ.

ಮಾರ್ಚ್ 12ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ