ಬೆಂಗಳೂರು(ಏ.07): ಲಾಕ್‌ಡೌನ್‌ ಮುಗಿದ ಬಳಿಕ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಒಂದು ವಾರ ಕಾಲ ಪುನರ್‌ ಮನನ ತರಗತಿಗಳನ್ನು ನಡೆಸಿ ನಂತರ ಪರೀಕ್ಷೆಗಳನ್ನು ನಡೆಸಲಾಗುವುದು. ಯಾವುದೇ ಕಾರಣಕ್ಕೂ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು 7, 8, 9ನೇ ತರಗತಿ ಮಾದರಿಯಲ್ಲಿ ಉತ್ತೀರ್ಣ ಮಾಡುವುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌ ಹೇಳಿದ್ದಾರೆ.

‘ಸುವರ್ಣನ್ಯೂಸ್‌’ ಸುದ್ದಿವಾಹಿನಿಯಲ್ಲಿ ಸೋಮವಾರ ‘ಹಲೋ ಮಿನಿಸ್ಟರ್‌- ಕಿಕ್‌ಔಟ್‌ ಕೊರೋನಾ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಪರೀಕ್ಷಾ ಮೂಡ್‌ನಿಂದ ಹೊರಗೆ ಹೋಗಬಾರದು ಎಂಬ ಕಾರಣಕ್ಕಾಗಿ ಪುನರ್‌ ಮನನ ಕಾರ್ಯಕ್ರಮ ನಡೆಸಲಾಗುತ್ತಿದೆ. ಈ ಬಗ್ಗೆ ಈಗಾಗಲೇ ಶಿಕ್ಷಕರ ಮೂಲಕ ವಾಟ್ಸ್‌ಆ್ಯಪ್‌ ಮೂಲಕ ಮಾರ್ಗದರ್ಶನ ನೀಡಲಾಗುತ್ತಿದೆ ಎಂದು ಹೇಳಿದರು.

ರಾಜ್ಯದಲ್ಲಿ ಹಂತ ಹಂತವಾಗಿ ಲಾಕ್‌ಡೌನ್ ತೆರವು ಸಾಧ್ಯತೆ

ಏ.14ರ ಬಳಿಕ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷಾ ದಿನಾಂಕಗಳನ್ನು ಪ್ರಕಟಿಸಲಾಗುತ್ತದೆ. ಸಾಮಾಜಿಕ ತಾಣಗಳಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಕೂಡ 7,8,9ನೇ ತರಗತಿ ಪರೀಕ್ಷೆಗಳ ರೀತಿಯಲ್ಲಿ ಉತ್ತೀರ್ಣ ಮಾಡುತ್ತಾರೆ ಎಂಬ ಗಾಳಿ ಸುದ್ದಿ ಹರಡುತ್ತಿದೆ. ಆದರೆ, ಯಾವುದೇ ಕಾರಣಕ್ಕೂ ಆ ರೀತಿ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಲಾಕ್‌ಡೌನ್‌ ಬಗ್ಗೆ 13ರೊಳಗೆ ತೀರ್ಮಾನ:

ರಾಜ್ಯದಲ್ಲಿ ಕೆಲವು ಜನರು ಕೊರೋನಾ ಲಾಕ್‌ಡೌನ್‌ ಗಂಭೀರವಾಗಿ ಪರಿಗಣಿಸದೆ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ. ಜನರು ಸಹಕರಿಸಿದಷ್ಟುಬೇಗ ಲಾಕ್‌ಡೌನ್‌ ತೆರವುಗೊಳಿಸಲಾಗುತ್ತದೆ. ರಾಜ್ಯದಲ್ಲಿ ಏ.14ರ ನಂತರ ಏನು ಮಾಡಬೇಕು ಎಂಬ ಚಿಂತನೆ ನಡೆಸುತ್ತಿದ್ದೇವೆ. ಏ.12ರಿಂದ 13ರೊಳಗೆ ಮುಂದಿನ ನಿರ್ಧಾರಗಳ ಸಂಪೂರ್ಣ ಚಿತ್ರಣ ಸಿಗಲಿದೆ ಎಂದು ಹೇಳಿದರು.

ರಜೆ ವೇಳೆ ಫೀ ಕಟ್ಟಿಸಿಕೊಂಡ್ರೆ ಕೇಸು:

ಶಾಲೆಗಳಿಗೆ ರಜೆ ನೀಡಿರುವುದರಿಂದ ಯಾವುದೇ ರೀತಿಯಲ್ಲಿ ಶುಲ್ಕವನ್ನು ಪೋಷಕರಿಂದ ಪಾವತಿ ಮಾಡಿಸಿಕೊಳ್ಳುವಂತಿಲ್ಲ. ಒಂದು ವೇಳೆ ಶುಲ್ಕ ಪಾವತಿಸಿ ಮಾಡಿಸಿಕೊಂಡರೆ ಅಥವಾ ಮುಂದಿನ ಶೈಕ್ಷಣಿಕ ವರ್ಷದ ದಾಖಲಾತಿ ಮಾಡಿಕೊಂಡರೆ ಕ್ರಿಮಿನಲ್‌ ಪ್ರಕರಣ ದಾಖಲಿಸಿಕೊಳ್ಳಲಾಗುತ್ತದೆ. ಖಾಸಗಿ ಶಾಲೆಗಳಿಗೆ ಆರ್‌ಟಿಇ ಶುಲ್ಕ ಬಿಡುಗಡೆ ಸಂಬಂಧ ಆರ್ಥಿಕ ಇಲಾಖೆ ಜೊತೆ ಚರ್ಚಿಸಲಾಗಿದೆ. ಸದ್ಯದಲ್ಲಿಯೇ ಮುಖ್ಯಮಂತ್ರಿಗಳು ಸರ್ಕಾರದ ನಿರ್ಧಾರ ಪ್ರಕಟಿಸಲಿದ್ದಾರೆ ಎಂದು ತಿಳಿಸಿದರು.

SSLC ಹೊರತುಪಡಿಸಿ ಪರೀಕ್ಷೆ ಇಲ್ಲದೇ ಎಲ್ಲಾ ವಿದ್ಯಾರ್ಥಿಗಳು ಪಾಸ್..!

ಮುಸ್ಲಿಂ ಮುಖಂಡರು ಜಾಗೃತಿ ಮೂಡಿಸಿ

ತಬ್ಲೀಘಿ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡು ರಾಜ್ಯಕ್ಕೆ ಹಿಂತಿರುಗಿಸುವವರನ್ನು ಪತ್ತೆ ಹಚ್ಚಲು ಮತ್ತು ಮುಸ್ಲಿಂ ಸಮುದಾಯದ ಬಗ್ಗೆ ಜನರಲ್ಲಿ ಉಂಟಾಗುತ್ತಿರುವ ವಿವಿಧ ಭಾವನೆಗಳ ಕುರಿತು ಸ್ಪಂದಿಸಲು ಮುಸ್ಲಿಂ ಸಮುದಾಯದ ಮುಖಂಡರು ನೇತೃತ್ವ ವಹಿಸಬೇಕು ಎಂದು ಸಚಿವ ಎಸ್‌. ಸುರೇಶ್‌ಕುಮಾರ್‌ ಮನವಿ ಮಾಡಿದರು.

ಆಶಾ ಕಾರ್ಯಕರ್ತೆಯರು ವೈದ್ಯಕೀಯ ತಪಾಸಣೆಗೆ ತೆರಳಿದ ವೇಳೆ ಎನ್‌ಆರ್‌ಸಿ ಮಾಹಿತಿ ಸಂಗ್ರಹಕ್ಕೆ ಬಂದಿದ್ದಾರೆಂದು ಹಲ್ಲೆ ನಡೆಸುವುದು, ಆಸ್ಪತ್ರೆಗಳಲ್ಲಿ ವಿಚಿತ್ರವಾಗಿ ವರ್ತಿಸುವುದರ ಬಗ್ಗೆ ಮತ್ತು ಸಮಾಜದಲ್ಲಿ ಸಮುದಾಯದ ಬಗ್ಗೆ ಉಂಟಾಗುತ್ತಿರುವ ಭಾವನೆ ಕುರಿತು ಜನಜಾಗೃತಿ ಮೂಡಿಸಬೇಕಿದೆ ಎಂದರು. ಈ ವರೆಗೆ ತಬ್ಲೀಘಿ ಜಮಾತ್‌ ಸಭೆಯಲ್ಲಿ ಪಾಲ್ಗೊಂಡಿದ್ದ 300 ಜನರ ಮಾದರಿ ಸಂಗ್ರಹಿಸಲಾಗಿದೆ. ಈ ಪೈಕಿ 18 ಜನರದ್ದು ಪಾಸಿಟಿವ್‌ ಬಂದಿದೆ. ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ ಬಳಿಕ ಅಂತಿಮವಾಗಿ ಎಷ್ಟುಜನರಿಗೆ ಪಾಸಿಟಿವ್‌ ಇದೆ ಎಂಬುದು ತಿಳಿಯಲಿದೆ ಎಂದರು.