ಎನ್‌.ಎಲ್‌. ಶಿವಮಾದು

ಬೆಂಗಳೂರು(ಜೂ.17): ರಾಜ್ಯದಲ್ಲಿ ಆನ್‌ಲೈನ್‌ ತರಗತಿಗಳು ಬೇಕೋ ಬೇಡವೋ ಎಂಬ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲಿಯೇ ಶಿಕ್ಷಣ ಇಲಾಖೆ ಸಂಗ್ರಹಿಸಿರುವ ಮಾಹಿತಿಯಲ್ಲಿ ರಾಜ್ಯದ 95 ಲಕ್ಷ ವಿದ್ಯಾರ್ಥಿಗಳ ಪೈಕಿ 58 ಲಕ್ಷ ವಿದ್ಯಾರ್ಥಿಗಳು ಸ್ಮಾರ್ಟ್‌ ಪೋನ್‌ ಬಳಸುತ್ತಿರುವ ಮಾಹಿತಿ ಲಭ್ಯವಾಗಿದೆ.

ಸದ್ಯ ರಾಜ್ಯ ಸರ್ಕಾರವು ಎಲ್‌ಕೆಜಿ, ಯುಕೆಜಿ ಮತ್ತು 1ರಿಂದ 5ನೇ ತರಗತಿವರಿಗೆ ಆನ್‌ಲೈನ್‌ ತರಗತಿ ನಡೆಸುವುದನ್ನು ರದ್ದುಗೊಳಿಸಿದೆ. 6ರಿಂದ 10ನೇ ತರಗತಿವರೆಗೆ ವಯೋಮಾನಕ್ಕೆ ಅನುಗುಣವಾಗಿ ವೈಜ್ಞಾನಿಕವಾಗಿ ಆನ್‌ಲೈನ್‌ ಶಿಕ್ಷಣವನ್ನು ಅಳವಡಿಸಿಕೊಳ್ಳಲು ತಜ್ಞರ ಸಮಿತಿ ರಚಿಸಿದ್ದು, ಸಮಿತಿಯು ಮಾರ್ಗಸೂಚಿ ಸಿದ್ಧಪಡಿಸುತ್ತಿದೆ. ಇಂತಹ ಸಮಯದಲ್ಲಿ ಆನ್‌ಲೈನ್‌ ತರಗತಿಗಳನ್ನು ಆರಂಭಿಸಿದರೆ ವಿದ್ಯಾರ್ಥಿಗಳಿಗೆ ಯಾವ ರೀತಿ ತಲುಪಿಸುವುದು ಎಂಬ ಚಿಂತೆ ಸರ್ಕಾರಕ್ಕೆ ಇದ್ದೇ ಇದೆ.

ಒಂದು ವೇಳೆ ಆನ್‌ಲೈನ್‌ ಶಿಕ್ಷಣ ನೀಡುವ ಅನಿವಾರ್ಯ ಪರಿಸ್ಥಿತಿ ಎದುರಾದರೆ ಮಕ್ಕಳನ್ನು ತಲುಪುವ ಮಾರ್ಗದ ಪ್ರಶ್ನೆ ಎದುರಾದ ಹಿನ್ನೆಲೆಯಲ್ಲಿ ಎಷ್ಟುಮಕ್ಕಳು ಸ್ಮಾರ್ಟ್‌ ಫೋನ್‌ ಬಳಸುತ್ತಿದ್ದಾರೆ ಎಂಬ ಮಾಹಿತಿ ಕಲೆಹಾಕಲಾಗಿದೆ.

ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯು ಪ್ರತಿ ವರ್ಷ ವಿದ್ಯಾರ್ಥಿಗಳ ಸಾಧನಾ ಟ್ರ್ಯಾಕಿಂಗ್‌ ವ್ಯವಸ್ಥೆ (ಸ್ಯಾಟ್ಸ್‌)ನಲ್ಲಿ ವಿದ್ಯಾರ್ಥಿಗಳ ಮಾಹಿತಿ ಸಂಗ್ರಹಿಸುತ್ತಿದೆ. ಒಂದರಿಂದ ಹತ್ತನೇ ತರಗತಿಯಲ್ಲಿ ಓದುತ್ತಿರುವ ರಾಜ್ಯದ 95 ಲಕ್ಷ ವಿದ್ಯಾರ್ಥಿಗಳ ಪೈಕಿ 58 ಲಕ್ಷ ವಿದ್ಯಾರ್ಥಿಗಳಲ್ಲಿ ಸ್ಮಾರ್ಟ್‌ ಫೋನ್‌ ಬಳಸುತ್ತಿರುವ ಮಾಹಿತಿ ಲಭ್ಯವಾಗಿದೆ. ಈ ಮಾಹಿತಿಯನ್ನು ಶಾಲಾ ಹಂತದಲ್ಲಿಯೇ ಶಿಕ್ಷಕರ ಮೂಲಕ ಸಂಗ್ರಹಿಸಲಾಗಿದೆ. 95 ಲಕ್ಷದಲ್ಲಿ ಈ ವರೆಗೆ 92 ಲಕ್ಷ ವಿದ್ಯಾರ್ಥಿಗಳ ಮಾಹಿತಿ ಸಂಗ್ರಹಿಸಲಾಗಿದ್ದು, ಈ ಪೈಕಿ 58 ಲಕ್ಷ ವಿದ್ಯಾರ್ಥಿಗಳಲ್ಲಿ ಸ್ಮಾರ್ಟ್‌ ಮೊಬೈಲ್‌ ಇದ್ದು, 20 ಲಕ್ಷ ವಿದ್ಯಾರ್ಥಿಗಳಲ್ಲಿ ಕೀ ಪ್ಯಾಡ್‌ ಮೊಬೈಲ್‌ಗಳಿರುವುದಾಗಿ ಮಾಹಿತಿ ತಿಳಿದು ಬಂದಿದೆ.

18 ಲಕ್ಷ ಸರ್ಕಾರಿ ಶಾಲೆ ಮಕ್ಕಳು ಸ್ಮಾರ್ಟ್‌:

ಅದೇ ರೀತಿ ರಾಜ್ಯದ 42 ಲಕ್ಷ ಸರ್ಕಾರಿ ಶಾಲೆ ಮಕ್ಕಳ ಪೈಕಿ 39 ಲಕ್ಷ ವಿದ್ಯಾರ್ಥಿಗಳಿಂದ ಮಾಹಿತಿ ಸಂಗ್ರಹಿಸಲಾಗಿದೆ. 18 ಲಕ್ಷ ವಿದ್ಯಾರ್ಥಿಗಳಲ್ಲಿ ಸ್ಮಾರ್ಟ್‌ ಪೋನ್‌ ಹಾಗೂ ಮೂರು ಲಕ್ಷ ವಿದ್ಯಾರ್ಥಿಗಳಲ್ಲಿ ಕೀ ಪ್ಯಾಡ್‌ ಮೊಬೈಲ್‌ ಬಳಸುತ್ತಿರುವ ಮಾಹಿತಿ ಲಭ್ಯವಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಮಕ್ಕಳು, ಪೋಷಕರ ಬಳಿ ಫೋನ್‌

ಫೋನ್‌ ಬಳಕೆಯಲ್ಲಿ ಖಾಸಗಿ ಶಾಲೆಗಳ ಮಕ್ಕಳಲ್ಲಿ ಬಹುತೇಕ ಮಕ್ಕಳು ಸ್ಮಾರ್ಟ್‌ ಪೋನ್‌ ಬಳಸುತ್ತಿದ್ದಾರೆ. ಬೆರಳೆಣಿಕೆ ಮಂದಿಯಲ್ಲಿ ಮಾತ್ರ ಪೋಷಕರ ಮೊಬೈಲ್‌ಗಳಿವೆ. ಆದರೆ, ಸರ್ಕಾರಿ ಶಾಲೆಗಳಲ್ಲಿ ವ್ಯತಿರಿಕ್ತವಾಗಿದ್ದು, ಹೆಚ್ಚಿನ ಫೋನ್‌ಗಳು ಪೋಷಕರದ್ದಾಗಿವೆ. ಕಡಿಮೆ ಪ್ರಮಾಣದ ಸರ್ಕಾರಿ ಮಕ್ಕಳಲ್ಲಿ ಸ್ಮಾರ್ಟ್‌ ಫೋನ್‌ಗಳಿವೆ. ಆದರೆ, ಪೋಷಕರು ಮತ್ತು ಮಕ್ಕಳಲ್ಲಿ ಯಾವ ಪ್ರಮಾಣದಲ್ಲಿ ಸ್ಮಾರ್ಟ್‌ ಫೋನ್‌ ಬಳಕೆಯಲ್ಲಿದೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ದೀಕ್ಷಾ ಆ್ಯಪ್‌ ಬಳಕೆ

ಈಗಾಗಲೇ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (ಎಂಎಚ್‌ಆರ್‌ಡಿ) ಸಿದ್ಧಪಡಿಸಿರುವ ‘ದೀಕ್ಷಾ ಆ್ಯಪ್‌’ ಅನ್ನು ಲಕ್ಷಾಂತರ ವಿದ್ಯಾರ್ಥಿಗಳು ಬಳಸುತ್ತಿದ್ದಾರೆ. 6 ರಿಂದ 10 ನೇ ತರಗತಿಯ ಗಣಿತ, ವಿಜ್ಞಾನ ಮತ್ತು ಇಂಗ್ಲಿಷ್‌ ವಿಷಯದ ಪಠ್ಯಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಆ್ಯಪ್‌ನಲ್ಲಿರುವ ಕ್ಯುಆರ್‌ (ಕ್ವಿಕ್‌ ರೆಸ್ಪಾನ್ಸ್‌) ಕೋಡ್‌ ಮೂಲಕ ಪಡೆದುಕೊಳ್ಳುತ್ತಿದ್ದಾರೆ. ಇದಕ್ಕಾಗಿ ವಿದ್ಯಾರ್ಥಿಗಳು ಸ್ಮಾರ್ಟ್‌ ಪೋನ್‌ ಬಳಸುತ್ತಿದ್ದಾರೆ ಎಂದು ಇಲಾಖೆ ಮೂಲಗಳು ತಿಳಿಸಿವೆ.