ಬೆಂಗಳೂರು(ಆ.26):  ದೇಶದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರುವ ಮೂಲಕ ಲಾರ್ಡ್‌ ಮೆಕಾಲೆ ತಳಹದಿಯ ಶಿಕ್ಷಣ ವ್ಯವಸ್ಥೆಗೆ ವಿದಾಯ ಹೇಳುವ ಕಾಲ ಸಮೀಪಿಸುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ತಿಳಿಸಿದ್ದಾರೆ.

ಬೆಂಗಳೂರು ವಿಶ್ವವಿದ್ಯಾನಿಲಯ ಹಮ್ಮಿಕೊಂಡಿರುವ ‘ರಾಷ್ಟ್ರೀಯ ಶಿಕ್ಷಣ ನೀತಿ’ ಕಾರ್ಯಾಗಾರದ ಎರಡನೇ ದಿನವಾದ ಮಂಗಳವಾರ ನಡೆದ ಸಂವಾದದಲ್ಲಿ ‘ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಪಠ್ಯಕ್ರಮ ಹಾಗೂ ಬೋಧನಾ ಕ್ರಮಗಳ ಕುರಿತು ಶಿಕ್ಷಣ ನೀತಿಯಲ್ಲಿ ಪ್ರತಿಪಾದಿಸುವ ಅಂಶ’ ಕುರಿತು ಮಾತನಾಡಿದರು.

ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗೆ ನಾಂದಿ ಹಾಡಿದ್ದು, ವಿದ್ಯಾರ್ಥಿಗಳ ಜ್ಞಾನಾರ್ಜನೆ, ತರ್ಕಬದ್ಧ ಆಲೋಚನೆ ಮತ್ತು ಸಾಮಾಜಿಕ ನೈಪುಣ್ಯತೆಯನ್ನು ಪ್ರೇರೇಪಿಸುವಲ್ಲಿ ಹೊಸ ದಿಕ್ಕನ್ನು ಸೃಷ್ಟಿಸಲಿದೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕರ್ನಾಟಕ ರಾಜ್ಯದ ಸಾಂಸ್ಕೃತಿಕ ಅವಶ್ಯಕತೆಗಳಿಗೆ ಅನುಗುಣವಾಗಿ ಅಳವಡಿಸಿಕೊಳ್ಳುವ ಪ್ರಯತ್ನಕ್ಕೆ ಚಾಲನೆ ನೀಡಲಾಗಿದ್ದು, ಈಗಾಗಲೇ ಕರಡು ನೀತಿ ರೂಪಿಸಲಾಗಿದೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಹಾಗೂ ಉನ್ನತ ಶಿಕ್ಷಣ ಇಲಾಖೆಗಳು ಜಂಟಿಯಾಗಿ ಹೊಸ ನೀತಿಯ ಅನುಷ್ಠಾನಕ್ಕೆ ಮುಂದಾಗಲಿವೆ ಎಂದು ಹೇಳಿದರು.

ನೂತನ ರಾಷ್ಟ್ರೀಯ ಶಿಕ್ಷಣ ನೀತಿ: ರಾಜ್ಯದಲ್ಲೇ ಮೊದಲು ಜಾರಿ

ಕ್ರೀಡಾ ಸಂಯೋಜಿತ ಶಿಕ್ಷಣ, ಕಥಾ ನಿರೂಪಣಾ ಕಲಿಕೆಯಂತಹ ವಿಶಿಷ್ಟ ಕಲಿಕಾ ಉಪಕ್ರಮಗಳು ಸೇರಿದಂತೆ ಸಮಗ್ರ ಕಲಿಕೆಗೆ ನೂತನ ಶಿಕ್ಷಣ ನೀತಿ ಇಂಬು ನೀಡಲಿದ್ದು, ವಿದ್ಯಾರ್ಥಿಯ ಆಸಕ್ತಿದಾಯಕ ವಿಷಯಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳಲು ನೆರವಾಗಲಿದೆ. ಶಾಲಾ ಶಿಕ್ಷಣದ ಕಲಿಕೆಯ ಅಂತ್ಯದ ವೇಳೆಗೆ ವಿದ್ಯಾರ್ಥಿಗೆ ಕೌಶಲ್ಯ ದೊರೆತು ಅವನನ್ನು ಗಟ್ಟಿಗೊಳಿಸಲಿದೆ. ವಿದ್ಯಾರ್ಥಿಗಳು ಸ್ವಯಂಪ್ರೇರಣೆಯಿಂದ ಕಲಿಯಲು ಈ ನೀತಿಯ ಅಂಶಗಳು ಸಹಾಯ ಮಾಡಲಿವೆ. ಅವಶ್ಯಕತೆ ಇರುವುದನ್ನು ಕಲಿಯಲು ಮತ್ತು ಆರನೇ ತರಗತಿಯಿಂದಲೇ ವೃತ್ತಿಪರವಾದ ಶಿಕ್ಷಣ ನೀಡಿ ಅವರನ್ನು ಸ್ವಾವಲಂಬಿಯನ್ನಾಗಿ ರೂಪಿಸಲು ಹೊಸ ನೀತಿ ಸಹಕಾರಿಯಾಗಲಿದೆ ಎಂದು ಹೇಳಿದರು.

ಸಂವಾದದಲ್ಲಿ ರಾಷ್ಟ್ರೀಯ ಕಾನೂನು ಶಾಲೆಯ ನಿವೃತ್ತ ಮುಖ್ಯಸ್ಥ ಪ್ರೊ. ವೆಂಕಟರಾವ್‌, ಪುಣೆಯ ಡಿಫೆನ್ಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಅಡ್ವಾನ್ಸ್‌ಡ್‌ ಟೆಕ್ನಾಲಜಿ ಸಂಸ್ಥೆಯ ಮಾಜಿ ಮುಖ್ಯಸ್ಥರಾದ ಪ್ರೊ.ಪಟ್ನಾಯಕ್‌, ಚೆನ್ನೈನ ಅಣ್ಣಾ ವಿವಿ ಕುಲಪತಿ ಪ್ರೊ.ಸೂರಪ್ಪ, ಬೆಂಗಳೂರು ವಿವಿ ಕುಲಪತಿ, ಪ್ರೊ. ವೇಣುಗೋಪಾಲ್‌, ಮಾಜಿ ಕುಲಪತಿ ಪ್ರೊ. ತಿಮ್ಮೇಗೌಡ ಉಪಸ್ಥಿತರಿದ್ದರು.