5 ನೇ ಕ್ಲಾಸ್‌ವರೆಗೆ ಆನ್‌ಲೈನ್‌ ಪಾಠ ನಿಷಿದ್ಧ | ಎಲ್‌ಕೆಜಿಯಿಂದ 5ನೇ ಕ್ಲಾಸ್‌ವರೆ​ಗೆ ಆನ್‌ಲೈನ್‌, ಆಫ್‌ಲೈನ್‌ ಪಾಠ ರದ್ದು | ಶುಲ್ಕವನ್ನೂ ವಸೂಲಿ ಮಾಡುವಂತಿಲ್ಲ: ಸರ್ಕಾ​ರ ಆದೇಶ

ಬೆಂಗಳೂರು (ಜೂ. 16): ರಾಜ್ಯದಲ್ಲಿ ಎಲ್‌ಕೆಜಿಯಿಂದ ಐದನೇ ತರಗತಿವರೆಗೂ ಆನ್‌ಲೈನ್‌ ಶಿಕ್ಷಣ ನಿರ್ಬಂಧಿಸಿ ರಾಜ್ಯ ಸರ್ಕಾರ ಸೋಮವಾರ ಅಧಿಕೃತ ಆದೇಶ ಹೊರಡಿಸಿದೆ.

ತನ್ಮೂಲಕ ರಾಜ್ಯ ಪಠ್ಯಕ್ರಮ, ಐಸಿಎಸ್‌ಇ, ಸಿಬಿಎಸ್‌ಇ, ಅನುದಾನಿತ ಸೇರಿದಂತೆ ರಾಜ್ಯದ ಯಾವುದೇ ಶಾಲೆಗಳು ಎಲ್‌ಕೆಜಿಯಿಂದ ಐದನೇ ತರಗತಿವರೆಗೆ ಆನ್‌ಲೈನ್‌/ಆಫ್‌ಲೈನ್‌ ತರಗತಿಗಳನ್ನು ನಡೆಸಬಾರದು ಮತ್ತು ಆನ್‌ಲೈನ್‌ ಬೋಧನೆ ಹೆಸರಿನಲ್ಲಿ ಶುಲ್ಕ ವಸೂಲಿ ಮಾಡುವಂತಿಲ್ಲ.

ಜೂ.10ರಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌ ರಾಜ್ಯದಲ್ಲಿ ಆನ್‌ಲೈನ್‌ ತರಗತಿಗಳನ್ನು ರದ್ದುಗೊಳಿಸುವ ಬಗ್ಗೆ ಮಾಧ್ಯಮ ಹೇಳಿಕೆ ನೀಡಿದ್ದರು. ಆದರೂ ಖಾಸಗಿ ಶಾಲೆಗಳು ಆನ್‌ಲೈನ್‌ ತರಗತಿಗಳನ್ನು ನಡೆಸುವುದನ್ನು ಮಾತ್ರ ನಿಲ್ಲಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸೋಮವಾರ ಅಧಿಕೃತ ಆದೇಶ ಹೊರಡಿಸಿದೆ.

ಆದೇಶದಲ್ಲಿ ಸರ್ಕಾರದ ಮುಂದಿನ ಮಾರ್ಗಸೂಚಿ ಪ್ರಕಟವಾಗುವವರೆಗೂ ರಾಜ್ಯದ ಯಾವುದೇ ಶಾಲೆಯು ಆನ್‌ಲೈನ್‌ ಅಥವಾ ಆಫ್‌ಲೈನ್‌ ಬೋಧನೆ ಮಾಡುವಂತಿಲ್ಲ. ಇನ್ನು ಸಮೂಹ ಮಾಧ್ಯಮಗಳು, ತಂತ್ರಜ್ಞಾನ ಆಧಾರಿತ ಬೋಧನೆಯನ್ನು ಅಳವಡಿಸಿಕೊಳ್ಳುವ ಕುರಿತು ಸರ್ಕಾರ ಮಾರ್ಗಸೂಚಿ ರೂಪಿಸುವ ಪ್ರಕ್ರಿಯೆಯಲ್ಲಿ ತೊಡಗಿದೆ. ಶೀಘ್ರವೇ ಈ ಮಾರ್ಗಸೂಚಿ ಹೊರಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

6 ರಿಂದ 10 ತರಗತಿಗೆ ಸಮಿತಿ ರಚನೆ

6ರಿಂದ 10ನೇ ತರಗತಿವರೆಗೆ ಆನ್‌ಲೈನ್‌ ಶಿಕ್ಷಣವನ್ನು ವಯೋಮಾನಕ್ಕೆ ಅನುಗುಣವಾಗಿ ವೈಜ್ಞಾನಿಕವಾಗಿ ಅಳವಡಿಸಿಕೊಳ್ಳಲು ಮಾರ್ಗಸೂಚಿ ಸಿದ್ಧಪಡಿಸುವುದಕ್ಕಾಗಿ ರಾಷ್ಟ್ರೀಯ ಶಿಕ್ಷಣ ನೀತಿ ಸಮಿತಿ ಸದಸ್ಯ ಕಾರ್ಯದರ್ಶಿಗಳಾದ ಪ್ರೊ.ಎಂ.ಕೆ. ಶ್ರೀಧರ್‌ ನೇತೃತ್ವದಲ್ಲಿ ತಜ್ಞರ ಸಮಿತಿ ರಚನೆ ಮಾಡಲಾಗಿದೆ. ಹತ್ತು ದಿನಗಳಲ್ಲಿ ವರದಿ ನೀಡುವಂತೆ ಅದಕ್ಕೆ ಸೂಚಿಸಲಾಗಿದೆ. ಜೂ.10ರಂದೇ ಸಚಿವರು ಸಮಿತಿ ರಚಿಸಿರುವುದಾಗಿ ತಿಳಿಸಿದ್ದರು.

ಸಮಿತಿಯಲ್ಲಿ ಹಿರಿಯ ಶಿಕ್ಷಣ ತಜ್ಞರಾದ ಪ್ರೊ. ಗುರುರಾಜ ಕರ್ಜಗಿ, ಡಾ.ವಿ.ಪಿ. ನಿರಂಜನಾರಾಧ್ಯ, ಅಜೀಂ ಪ್ರೇಮ್‌ಜಿ ಪ್ರತಿಷ್ಠಾನದ ಪ್ರತಿನಿಧಿಗಳಾದ ಹೃಷಿಕೇಶ್‌, ನಿಮ್ಹಾನ್ಸ್‌ ಸಂಸ್ಥೆಯ ಮಕ್ಕಳ ಮಾನಸಿಕ ತಜ್ಞರು, ಅರ್ಲಿ ಚೈಲ್ಡ್‌ ಹುಡ್‌ ಸಂಘಟನೆಯ ಪ್ರತಿನಿಧಿಗಳು, ಖಾಸಗಿ ಶಾಲಾ ಆಡಳಿತ ಮಂಡಳಿಗಳ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಇದ್ದಾರೆ.

6 ರಿಂದ 10ನೇ ತರಗತಿವರೆಗೆ ಆನ್‌ಲೈನ್‌ ಶಿಕ್ಷಣವನ್ನು ವಯೋಮಾನಕ್ಕೆ ಅನುಗುಣವಾಗಿ ವೈಜ್ಞಾನಿಕವಾಗಿ ಅಳವಡಿಸಿಕೊಳ್ಳಲು ಮಾರ್ಗಸೂಚಿ ರಚಿಸುವುದು. ಎಲ್‌ಕೆಜಿಯಿಂದ ಐದನೇ ತರಗತಿ ವರೆಗೆ ಆನ್‌ಲೈನ್‌ ಹೊರತುಪಡಿಸಿ ಸಮೂಹ ಮಾಧ್ಯಮಗಳು, ತಂತ್ರಜ್ಞಾನ ಆಧಾರಿತ ಬೋಧನೆ ಅಳವಡಿಸಿಕೊಳ್ಳುವ ಕುರಿತ ಮಾರ್ಗಸೂಚಿ ರಚನೆ ಮಾಡುವ ಜವಾಬ್ದಾರಿಯನ್ನು ಸಮಿತಿಗೆ ನೀಡಲಾಗಿದೆ.