ಬೆಂಗಳೂರು(ಆ.13):  ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೊರಬಿದ್ದ ಬೆನ್ನಲ್ಲೆ ಪ್ರಸಕ್ತ ಸಾಲಿನ ಪ್ರಥಮ ಪಿಯುಸಿ ಪ್ರವೇಶಕ್ಕೆ ದಾಖಲಾತಿ ಪ್ರಕ್ರಿಯೆ ಆರಂಭಿಸುವ ಸಂಬಂಧ ಪದವಿ ಪೂರ್ವ ಶಿಕ್ಷಣ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಕೊರೋನಾ ಭೀತಿಯಿಂದಾಗಿ ಕಾಲೇಜುಗಳು ಆನ್‌ಲೈನ್‌ ಮೂಲಕ ಅರ್ಜಿ ವಿತರಿಸುವ ಮತ್ತು ಸ್ವೀಕರಿಸಬಹುದು. ಇಲ್ಲದಿದ್ದರೆ ಸಾಮಾಜಿಕ ಅಂತರ ಕಾಯ್ದುಕೊಂಡು ಅರ್ಜಿ ನೀಡಬೇಕು. ಆ.13ರಿಂದ ಪ್ರವೇಶ ಪ್ರಕ್ರಿಯೆ ಆರಂಭಿಸಬಹುದು. ಕಾಲೇಜುಗಳು ಸೂಚನಾ ಫಲಕಗಳಲ್ಲಿ ಇಲಾಖೆಯಿಂದ ಅನುಮತಿ ಪಡೆದ ಸಂಯೋಜನೆವಾರು ಪ್ರವೇಶಗಳ ಮಾಹಿತಿ, ದಾಖಲಾತಿ ಶುಲ್ಕಗಳ ವಿವರ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಪೂರ್ಣ ವಿವರಗಳನ್ನು ಪ್ರಕಟಿಸಬೇಕು. ಇದರ ಮಾಹಿತಿಯನ್ನು ಜಿಲ್ಲಾ ಉಪನಿರ್ದೇಶಕರಿಗೆ ಕಳುಹಿಸಬೇಕು. ಆ. 13ರಿಂದ ನಾಲ್ಕು ದಿನ ಮಾತ್ರ ಅರ್ಜಿಗಳನ್ನು ವಿತರಿಸಬೇಕು ಎಂದು ತಿಳಿಸಿದೆ.

ಪಿಯುಸಿ ಪರೀಕ್ಷೆಯಲ್ಲಿ ಪಡೆದದ್ದು 98 ಅಂಕ, ಅಂಕ​ಪ​ಟ್ಟಿ​ಯಲ್ಲಿ ಬಂದಿದ್ದು 20 ಅಂಕ!

ವಿಸ್ತರಣೆ:

2019​-20ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆಗಳ ಮರು ಮೌಲ್ಯಮಾಪನಕ್ಕೆ ಹಾಗೂ ಮರು ಎಣಿಕೆಗೆ ಅರ್ಜಿ ಸಲ್ಲಿಸಲು ನಿಗದಿ ಪಡಿಸಿದ್ದ ದಿನಾಂಕವನ್ನು ಆ.14ರವರೆಗೆ ವಿಸ್ತರಿಸಲಾಗಿದೆ. ದ್ವಿತೀಯ ಪಿಯು ಪೂರಕ ಪರೀಕ್ಷೆ ಸೆಪ್ಟಂಬರ್‌ 7ರಿಂದ 18ರವರೆಗೆ ನಡೆಸಲಾಗುವುದು. ಪರೀಕ್ಷೆ ಸಿದ್ದತೆಗಾಗಿ ರಾಜ್ಯದ ಎಲ್ಲ ರೀತಿಯ ಪದವಿ ಪೂರ್ವ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು (ಕೊರೋನಾ ಕಾರ್ಯದಲ್ಲಿ ನಿಯೋಜಿತಗೊಂಡವರನ್ನು ಹೊರತು ಪಡಿಸಿ) ಕಾರ್ಯ ನಿರತ ದಿನಗಳಲ್ಲಿ ಕಾಲೇಜುಗಳಿಗೆ ಆಗಮಿಸಬೇಕು ಎಂದು ಇಲಾಖೆ ನಿರ್ದೇಶಕರು ಸೂಚಿಸಿದ್ದಾರೆ.

ಅರ್ಜಿ ಆಹ್ವಾನ:

ಪದವಿ ಪೂರ್ವ ಶಿಕ್ಷಣ ಇಲಾಖೆ ಹೊಸದಾಗಿ ಪಿಯು ಕಾಲೇಜು ಆರಂಭಿಸಲು ಆಸಕ್ತ ಟ್ರಸ್ಟ್‌ಗಳಿಂದ ಅರ್ಜಿ ಆಹ್ವಾನಿಸಿದೆ. ಇಲಾಖೆ ವೆಬ್‌ಸೈಟ್‌ನಲ್ಲಿ ದೊರೆಯುವ ಅರ್ಜಿಗಳನ್ನು ಭರ್ತಿ ಮಾಡಿ ಆ.21 ರೊಳಗೆ ಆನ್‌ಲೈನ್‌ನಲ್ಲಿ ಸಲ್ಲಿಸಬೇಕು. ಈಗಾಗಲೇ ಅರ್ಜಿ ಸಲ್ಲಿಸಿದವರು ಪುನಃ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಹೆಚ್ಚಿನ ಮಾಹಿತಿಗೆ ಇಲಾಖೆ ವೆಬ್‌ಸೈಟ್‌ ನೋಡಬಹುದು.