ನವದೆಹಲಿ(ಜೂ.27): 10 ಹಾಗೂ 12ನೇ ತರಗತಿಯ ಬಾಕಿಯುಳಿದ ಪರೀಕ್ಷೆಗಳ ಫಲಿತಾಂಶವನ್ನು ಈ ಹಿಂದಿನ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಯಾವ ವಿಷಯಗಳಲ್ಲಿ ಉತ್ತಮ ಅಂಕ ಪಡೆದಿದ್ದಾರೋ ಆ ವಿಷಯಗಳನ್ನು ಪರಿಗಣಿಸಿ ನೀಡಲು ಕೇಂದ್ರೀಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (ಸಿಬಿಎಸ್‌ಇ) ನಿರ್ಧರಿಸಿದೆ.

ಕೊರೋನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಜು.1ರಿಂದ ನಡೆಯಬೇಕಿದ್ದ 10 ಹಾಗೂ 12ನೇ ತರಗತಿಯ ಬಾಕಿಯುಳಿದ ಪರೀಕ್ಷೆಗಳನ್ನು ರದ್ದುಪಡಿಸಿರುವುದಾಗಿ ಗುರುವಾರವಷ್ಟೇ ಸಿಬಿಎಸ್‌ಇ ಸುಪ್ರೀಂಕೋರ್ಟ್‌ಗೆ ತಿಳಿಸಿತ್ತು. ಶುಕ್ರವಾರ ಈ ವಿದ್ಯಾರ್ಥಿಗಳಿಗೆ ಫಲಿತಾಂಶವನ್ನು ಯಾವ ರೀತಿಯಲ್ಲಿ ನೀಡಲಾಗುವುದು ಎಂಬುದನ್ನು ಸುಪ್ರೀಂಕೋರ್ಟ್‌ಗೆ ತಿಳಿಸಿದೆ. ಅದಕ್ಕೆ 4 ರೀತಿಯ ಮಾನದಂಡಗಳನ್ನು ಅನುಸರಿಸುವುದಾಗಿ ಸಿಬಿಎಸ್‌ಇ ಹೇಳಿದ್ದು, ಅವು ಇಂತಿವೆ:

1. ಲಾಕ್‌ಡೌನ್‌ಗಿಂದ ಮುಂಚೆ ಮೂರಕ್ಕಿಂತ ಹೆಚ್ಚು ವಿಷಯಗಳ ಪರೀಕ್ಷೆಗೆ ಹಾಜರಾಗಿರುವ ವಿದ್ಯಾರ್ಥಿಗಳಿಗೆ ಅವರು ಆ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆದ ಮೂರು ವಿಷಯಗಳ ಅಂಕಗಳನ್ನು ಆಧರಿಸಿ ಬಾಕಿ ವಿಷಯಗಳಿಗೆ ಅಂಕ ನೀಡಲಾಗುವುದು.

2. ಲಾಕ್‌ಡೌನ್‌ಗಿಂತ ಮುಂಚೆ ಮೂರು ವಿಷಯಗಳ ಪರೀಕ್ಷೆಗೆ ಮಾತ್ರ ಹಾಜರಾಗಿದ್ದ ವಿದ್ಯಾರ್ಥಿಗಳಿಗೆ ಅವರು ಆ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆದ ಎರಡು ವಿಷಯಗಳ ಅಂಕಗಳನ್ನು ಆಧರಿಸಿ ಬಾಕಿ ವಿಷಯಗಳಿಗೆ ಅಂಕ ನೀಡಲಾಗುವುದು.

3. ದೆಹಲಿಯಲ್ಲಿ ಸಿಎಎ ವಿರುದ್ಧ ಪ್ರತಿಭಟನೆ ಜೋರಾಗಿದ್ದಾಗ 12ನೇ ಕ್ಲಾಸ್‌ನ ಕೆಲ ಪರೀಕ್ಷೆಗಳನ್ನು ರದ್ದುಪಡಿಸಲಾಗಿತ್ತು. ಅಂತಹ ವಿದ್ಯಾರ್ಥಿಗಳಿಗೆ ಅವರು ಬರೆದ ಪರೀಕ್ಷೆಗಳು ಮತ್ತು ಆಂತರಿಕ ಪರೀಕ್ಷೆಗಳ ಆಧಾರದ ಮೇಲೆ ಬಾಕಿಯುಳಿದ ವಿಷಯಗಳ ಫಲಿತಾಂಶ ನೀಡಲಾಗುವುದು.

4. ಕೆಲವೇ ಕೆಲವು 12ನೇ ತರಗತಿಯ ವಿದ್ಯಾರ್ಥಿಗಳು ಒಂದು ಅಥವಾ ಎರಡು ಪರೀಕ್ಷೆಗೆ ಮಾತ್ರ ಹಾಜರಾಗಿದ್ದರು. ಅವರಿಗೆ ಆ ಪರೀಕ್ಷೆಗಳಲ್ಲಿ ಪಡೆದ ಅಂಕ ಹಾಗೂ ಆಂತರಿಕ, ಪ್ರಾಯೋಗಿಕ ಮತ್ತು ಪ್ರಾಜೆಕ್ಟ್ ಅಸೆಸ್‌ಮೆಂಟ್‌ ಅಂಕಗಳ ಆಧಾರದಲ್ಲಿ ಬಾಕಿ ವಿಷಯಗಳ ಫಲಿತಾಂಶ ನೀಡಲಾಗುವುದು.

ಈ ಫಲಿತಾಂಶವನ್ನು ಜು.15ರ ವೇಳೆಗೆ ಪ್ರಕಟಿಸಲಾಗುವುದು. ಅಂಕಗಳು ತೃಪ್ತಿ ತಂದಿಲ್ಲ ಎನ್ನುವ 12ನೇ ಕ್ಲಾಸ್‌ ವಿದ್ಯಾರ್ಥಿಗಳಿದ್ದರೆ ಅವರಿಗೆ ಮುಂದೆ ಪರಿಸ್ಥಿತಿ ತಿಳಿಯಾದ ನಂತರ ಮರುಪರೀಕ್ಷೆ ನಡೆಸಲಾಗುವುದು. ಆ ಪರೀಕ್ಷೆಯ ಅಂಕವೇ ಅವರಿಗೆ ಅಂತಿಮವಾಗಿರುತ್ತದೆ. 10ನೇ ಕ್ಲಾಸ್‌ಗೆ ಮರುಪರೀಕ್ಷೆ ನಡೆಸುವುದಿಲ್ಲ. ಜು.15ರ ವೇಳೆಗೆ ಪ್ರಕಟಿಸುವ ಫಲಿತಾಂಶದ ಆಧಾರದ ಮೇಲೆ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯಬಹುದು ಎಂದು ಸಿಬಿಎಸ್‌ಇ ತಿಳಿಸಿದೆ.

ಕೊರೋನಾ ಹಿನ್ನೆಲೆಯಲ್ಲಿ ಸಿಬಿಎಸ್‌ಇ ಪರೀಕ್ಷೆಗಳನ್ನು ರದ್ದುಪಡಿಸಬೇಕೆಂದು ಕೆಲವರು ಸುಪ್ರೀಂಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆಯ ವೇಳೆ ಪರೀಕ್ಷೆ ರದ್ದುಪಡಿಸುವ ಹಾಗೂ ಫಲಿತಾಂಶ ಪ್ರಕಟಿಸುವ ನಿರ್ಧಾರವನ್ನು ಸಿಬಿಎಸ್‌ಇ ಪ್ರಕಟಿಸಿದೆ.

ಗುರುವಾರ ಸಿಬಿಎಸ್‌ಇ ಜೊತೆಗೆ ಐಸಿಎಸ್‌ಇ ಕೂಡ ಬಾಕಿ ಪರೀಕ್ಷೆಗಳನ್ನು ರದ್ದುಪಡಿಸಿರುವುದಾಗಿ ಹೇಳಿತ್ತು. ಆದರೆ, ಫಲಿತಾಂಶ ನೀಡುವ ವಿಧಾನದ ಬಗ್ಗೆಯಾಗಲೀ, ಫಲಿತಾಂಶದ ದಿನಾಂಕದ ಬಗ್ಗೆಯಾಗಲೀ ಐಸಿಎಸ್‌ಇ ಯಾವುದೇ ಮಾಹಿತಿ ನೀಡಿಲ್ಲ.