ವಿಜಯಪುರ, (ಮಾ. 03): ದ್ವಿತೀಯ ಪಿಯು ಪರೀಕ್ಷೆ ಆರಂಭವಾಗಿ ಗಂಟೆಯೊಳಗೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಆದರೆ ಪರೀಕ್ಷೆ ಆರಂಭವಾದ ಬಳಿಕ ಪ್ರಶ್ನೆ ಪತ್ರಿಕೆ ಆನ್‌ಲೈನ್‌ನಲ್ಲಿ ಬಂದಿರುವ ಕಾರಣ ಅದು ಸೋರಿಕೆ ಅಲ್ಲ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಸ್ಪಷ್ಟನೆ ನೀಡಿದೆ. 

ದ್ವಿತೀಯ ಪಿಯು ಪರೀಕ್ಷೆಯ ಮೊದಲ ದಿನವಾದ ಇಂದು (ಬುಧವಾರ) ಪರೀಕ್ಷೆ ಆರಂಭವಾಗಿ 1 ಗಂಟೆಯ ಬಳಿಕ ವಿಜಯಪುರ ಜಿಲ್ಲೆಯಲ್ಲಿ ಭೌತಶಾಸ್ತ್ರದ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಸುದ್ದಿ ವರದಿಯಾಗಿದೆ. 

ಇಂಡಿ ಪಟ್ಟಣದ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಪಿಯು ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಕೊಠಡಿ ಮೇಲ್ವಿಚಾರಕರು ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ನೀಡಿದ ಬೆನ್ನಲ್ಲೇ ಪರೀಕ್ಷಾರ್ಥಿಯೋರ್ವ ಮೊಬೈಲ್​ನಲ್ಲಿ ಫೋಟೋ ತೆಗೆದು ಲೀಕ್​ ಮಾಡಿದ್ದಾರೆ ಎನ್ನಲಾಗಿದೆ. ಈ ಕೃತ್ಯದಲ್ಲಿ ಕಾಲೇಜು ಸಿಬ್ಬಂದಿಯ ಕೈವಾಡವಿದೆ ಎಂದು ಶಂಕೆ ವ್ಯಕ್ತವಾಗಿದೆ.

ಮಾ.4ರಿಂದ ದ್ವಿತೀಯ ಪಿಯುಸಿ ಪರೀಕ್ಷೆ, ಮಕ್ಕಳಿಗೆ ಶುಭವಾಗಲಿ

ಕಿಟಕಿಯಿಂದ ಪ್ರಶ್ನೆ ಪತ್ರಿಕೆ ಫೋಟೋ
ಪರೀಕ್ಷಾರ್ಥಿ ಮುರುಘೇಂದ್ರ ಹಿರೇಮಠ ಎನ್ನುವಾತ ಪ್ರಶ್ನೆ ಪತ್ರಿಕೆ ಹಿಡಿದು ಕಿಟಕಿಯಿಂದ ಪೊಟೋಗೆ ಅವಕಾಶ ಮಾಡಿಕೊಟ್ಟಿದ್ದಾನೆ ಎಂದು ತಿಳಿದುಬಂದಿದೆ. ಆದ್ರೆ, ಪೋಟೋ ಕ್ಲಿಕ್ಲಿಸಿದ ಕಿಡಿಗೆಡಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಅಲ್ಲದೇ ಪರೀಕ್ಷಾ ಕೇಂದ್ರದ ಸೂಪರ್ ವೈಸರ್ ಅಮಾನತ್ತಿಗೆ ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್ ಸೂಚನೆ ನೀಡಿದ್ದಾರೆ.

ಗೊಂದಲಗಳಿಗೆ ತೆರೆ ಎಳೆದ ಇಲಾಖೆ
ರಾಜ್ಯದಲ್ಲಿ 2 ಲಕ್ಷ ವಿದ್ಯಾರ್ಥಿಗಳು ಭೌತಶಾಸ್ತ್ರ ಪರೀಕ್ಷೆ ಬರೆದಿದ್ದು, ಅವರು ಬರೆಯಲು ಆರಂಭಿಸಿದ ಒಂದು ಗಂಟೆಯ ನಂತರ ಈ ಘಟನೆ ಸಂಭವಿಸಿದೆ. ಹೀಗಾಗಿ ಇದು ಪ್ರಶ್ನೆ ಪತ್ರಿಕೆ ಸೋರಿಕೆ ಅಲ್ಲ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ.

ಪರೀಕ್ಷಾ ಕೇಂದ್ರಗಳಲ್ಲಿ ಮೊಬೈಲ್ ಬಳಕೆ ಮಾಡದಂತೆ ನಿಷೇಧಿಸಿದ ನಿಯಮವೂ ಜಾರಿಯಲ್ಲಿದೆ. ಈ ಬಗ್ಗೆ ವಿದ್ಯಾರ್ಥಿಗಳಲ್ಲಿ ತಿಳಿವಳಿಕೆ ಮೂಡಿಸಲು ಸಾಕಷ್ಟು ಪ್ರಚಾರವನ್ನೂ ಮಾಡಲಾಗಿತ್ತು. ಹೀಗಾಗಿ, ಪ್ರಶ್ನೆ ಪತ್ರಿಕೆಯ ಕೆಲವು ಪುಟಗಳನ್ನು ಮೊಬೈಲ್ ಮೂಲಕ ಫೋಟೊ ತೆಗೆದು ಶೇರ್ ಮಾಡಿದ ಈ ಪ್ರಕರಣವನ್ನು ಪರೀಕ್ಷಾ ಅಕ್ರಮ ಎಂದು ಪರಿಗಣಿಸಲಾಗಿದೆ. 

ಈ ಅಪರಾಧವನ್ನು ಶಿಕ್ಷಣ ಕಾಯಿದೆಯ ಸೆಕ್ಷನ್ 24(ಎ) ಪ್ರಕಾರ ಮತ್ತು ಜಾರಿಯಲ್ಲಿರುವ ಇತರೆ ಕಾನೂನು ಪ್ರಕಾರ ಕ್ರಿಮಿನಲ್ ಅಪರಾಧವೆಂದು ಪರಿಗಣಿಸಲಾಗುತ್ತದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಅಲ್ಲಿನ ಜಿಲ್ಲಾಧಿಕಾರಿ ಮತ್ತು ಎಸ್​ಪಿಗೆ ಸೂಚಿಸಲಾಗಿದೆ.

ಇನ್ನು ಉಳಿದಂತೆ, ಬೇರೆ ಯಾವುದೇ ತೊಂದರೆ ಆಗಿಲ್ಲ. ರಾಜ್ಯದ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿಯೂ ಯಾವುದೇ ತೊಂದರೆ ಇಲ್ಲದೆ ಪರೀಕ್ಷೆ ಸುಗಮವಾಗಿ ನೆರವೇರಿದೆ ಎಂದು ಪಿಯು ಬೋರ್ಡ್ ಪ್ರಕಟಣೆ ಮೂಲಕ ತಿಳಿಸಿದೆ.

#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"