ನವದೆಹಲಿ(ಏ.02): ಕೋವಿಡ್‌-19 ಕಾರಣದಿಂದಾಗಿ ಪರೀಕ್ಷೆ ಬರೆಯದ ಹೊರತಾಗಿಯೂ, 1ರಿಂದ 8ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳನ್ನು ಪಾಸ್‌ ಮಾಡುವುದಾಗಿ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್‌ಇ) ತಿಳಿಸಿದೆ.

1 ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಮಾಡದೆಯೇ ಮುಂದಿನ ತರಗತಿಗೆ ತೇರ್ಗಡೆಗೊಳಿಸಬೇಕು ಎಂದು ಕೇಂದ್ರ ಸರ್ಕಾರ ನ ನಿರ್ದೇಶನ ನೀಡಿದ ಬೆನ್ನಲ್ಲೇ ಸಿಬಿಎಸ್‌ಇ ಈ ನಿರ್ಧಾರ ಪ್ರಕಟಿಸಿದೆ. 9 ಮತ್ತು 11ನೇ ತರಗತಿ ವಿದ್ಯಾರ್ಥಿಗಳನ್ನು ಅವರ ಶಾಲಾ ಮೌಲ್ಯಮಾಪನದ ಗ್ರೇಡ್‌ಗಳನ್ನು ಆಧಾರದ ಮೇಲೆ ಮುಂದಿನ ತರಗತಿಗಳಿಗೆ ಪರಿಗಣಿಸಲಾಗುತ್ತದೆ. ಅಲ್ಲದೆ, ಪಾಸ್‌ ಆಗದ 9 ಮತ್ತು 11ನೇ ತರಗತಿ ವಿದ್ಯಾರ್ಥಿಗಳು ಆನ್‌ಲೈನ್‌ ಅಥವಾ ಆಫ್‌ಲೈನ್‌ ಪರೀಕ್ಷೆ ಬರೆಯಬಹುದು ಎಂದು ಸಿಬಿಎಸ್‌ಇ ಹೇಳಿದೆ.

ಈ ಬಗ್ಗೆ ಬುಧವಾರ ಸರಣಿ ಟ್ವೀಟ್‌ ಮಾಡಿದ ಕೇಂದ್ರ ಮಾನವ ಸಂಪನ್ಮೂಲಗಳ ಅಭಿವೃದ್ಧಿ ಸಚಿವ ರಮೇಶ್‌ ಪೋಖ್ರಿಯಲ್‌ ಅವರು, ‘ಕೊರೋನಾ ಕಾರಣದಿಂದಾಗಿ ಪರೀಕ್ಷೆ ನಡೆಸುವುದು ಅಸಾಧ್ಯ. ಹೀಗಾಗಿ, 1ರಿಂದ 8ನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗೆ ಪಾಸ್‌ ಮಾಡಿ’ ಎಂದು ಸೂಚಿಸಿದ್ದರು.