ಬೆಂಗಳೂರು (ಜೂ. 30): ವಿಜ್ಞಾನ, ರಾಜ್ಯಶಾಸ್ತ್ರ ಹಾಗೂ ಸಂಗೀತ ಸೇರಿ ಸೋಮವಾರ ರಾಜ್ಯದಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಯಾವುದೇ ಸಮಸ್ಯೆಯಿಲ್ಲದೆ ಸುಸೂತ್ರವಾಗಿ ನಡೆದಿದ್ದು, ಈ ಪರೀಕ್ಷೆಗೆ ಶೇ. 97.93ರಷ್ಟುಮಂದಿ ಹಾಜರಾಗುವ ಮೂಲಕ ಕೊರೋನಾ ಭೀತಿಯ ನಡುವೆಯೂ ವಿದ್ಯಾರ್ಥಿಗಳಿಂದ ಪರೀಕ್ಷೆಗೆ ಉತ್ತಮ ಸ್ಪಂದನೆ ದೊರಕಿದೆ.

ಗಮನಾರ್ಹ ಸಂಗತಿಯೆಂದರೆ, ಸುಮಾರು 7,74,729 ವಿದ್ಯಾರ್ಥಿಗಳು ತೊಡಗಿಕೊಂಡ ಈ ಪರೀಕ್ಷಾ ಪ್ರಕ್ರಿಯೆಯಲ್ಲಿ ಯಾವುದೇ ಕೊರೋನಾ ಭೀತಿ, ಆಶಂಕೆ ಮೂಡದಿರುವುದು. ಈ ನಡುವೆ ರಾಜ್ಯದಲ್ಲಿ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿದ್ದ ಮೂವರನ್ನು ಡಿಬಾರ್‌ ಮಾಡಲಾಗಿದೆ.

ಪರೀಕ್ಷೆ ಬಳಿಕ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌ ಅವರು, ಸೋಮವಾರ ನಡೆದ ವಿಜ್ಞಾನ, ರಾಜ್ಯಶಾಸ್ತ್ರ, ಕರ್ನಾಟಕ ಹಾಗೂ ಹಿಂದೂಸ್ಥಾನಿ ಸಂಗೀತ ಪರೀಕ್ಷೆಗಳು ಯಾವುದೇ ತೊಂದರೆಯಾಗದಂತೆ ಪೂರ್ಣಗೊಂಡಿವೆ. ಒಟ್ಟಾರೆ ನೋಂದಣಿ ಮಾಡಿಕೊಂಡಿದ್ದ 7,91,102 ವಿದ್ಯಾರ್ಥಿಗಳಲ್ಲಿ (ವಿಜ್ಞಾನ-7,90,681, ರಾಜ್ಯಶಾಸ್ತ್ರ-419, ಸಂಗೀತ- 02) ಪೈಕಿ 7,74,729 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ ಎಂದು ತಿಳಿಸಿದರು.

ಕೊರೋನಾ ಸೋಂಕಿತ SSLC ವಿದ್ಯಾರ್ಥಿನಿಗೆ ಡಿಸಿ ಕಾಲ್..!

ಒಟ್ಟಾರೆ ಶೇ.97.93ರಷ್ಟುಮಂದಿ ಹಾಜರಾಗಿದ್ದಾರೆ. 16,373 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಕಳೆದ ವರ್ಷ ಶೇ. 98.69 ಹಾಜರಾತಿ ಇತ್ತು. ಈ ಪೈಕಿ ಮೊದಲ ಬಾರಿಗೆ 7,45,033 ವಿದ್ಯಾರ್ಥಿಗಳು ಹಾಗೂ 20,976 ಖಾಸಗಿ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ. ಕಂಟೈನ್‌ಮೆಂಟ್‌ ಪ್ರದೇಶಗಳ 2942, ಕೋವಿಡೇತರ ಅನಾರೋಗ್ಯ ಕಾರಣಗಳಿಂದ ವಿಶೇಷ ಕೊಠಡಿಗಳಲ್ಲಿ 491 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಧಾರವಾಡದಲ್ಲಿ ಇಬ್ಬರು ಹಾಗೂ ರಾಯಚೂರಿನಲ್ಲಿ ಒಬ್ಬರು ಸೇರಿದಂತೆ ಪರೀಕ್ಷಾ ಅಕ್ರಮದಲ್ಲಿ ತೊಡಗಿದ್ದ ಮೂವರನ್ನು ಡಿಬಾರ್‌ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಕೊರೋನಾ ಪ್ರಕರಣಗಳು ವರದಿಯಾಗಿಲ್ಲ:

ಸೋಮವಾರದ ಪರೀಕ್ಷೆಯಲ್ಲಿ ಕೊರೋನಾ ಪಾಸಿಟಿವ್‌ ಪ್ರಕರಣಗಳ ವರದಿಯಾಗಿಲ್ಲ. ಎರಡನೇ ದಿನದ ಪರೀಕ್ಷಾ ಕೊಠಡಿಯಲ್ಲಿ ಕೊರೋನಾ ಸೋಂಕಿತ ವಿದ್ಯಾರ್ಥಿಯೊಂದಿಗೆ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಎಲ್ಲಾ ಸುರಕ್ಷತಾ ಕ್ರಮಗಳೊಂದಿಗೆ ಪರೀಕ್ಷೆ ಬರೆಯಲು ಸೋಮವಾರ ಅವಕಾಶ ನೀಡಲಾಗಿದೆ. ಆರೋಗ್ಯ ಇಲಾಖೆಯು ಈ ವಿದ್ಯಾರ್ಥಿಗಳಿಗೆ ಮುಂದಿನ ಪರೀಕ್ಷೆಗಳಲ್ಲಿ ಪ್ರತಿ ಡೆಸ್ಕ್‌ಗೆ ಒಬ್ಬ ವಿದ್ಯಾರ್ಥಿಯಂತೆ ಹಾಗೂ ಡೆಸ್ಕ್‌ಗಳ ನಡುವೆ ಆರು ಅಡಿ ಅಂತರ ಕಾಯ್ದುಕೊಳ್ಳುವಂತೆ ಶಿಕ್ಷಣ ಇಲಾಖೆಗೆ ನಿರ್ದೇಶಿಸಿತ್ತು. ಅದನ್ನು ಸೋಮವಾರದ ಪರೀಕ್ಷೆಯಲ್ಲಿ ಪಾಲಿಸಲಾಗಿದೆ. ಮುಂದಿನ ಪರೀಕ್ಷೆಗಳಲ್ಲೂ ಪಾಲಿಸಲಾಗುವುದು ಎಂದರು.

ಹಾಸನ ಜಿಲ್ಲೆಯ ಅರಸೀಕೆರೆಯ ಸೇಂಟ್‌ ಮೇರಿಸ್‌ ಹಾಗೂ ಸರ್ಕಾರಿ ಬಾಲಕರ ಪಿಯು ಕಾಲೇಜು ಕೇಂದ್ರಗಳ ಇಬ್ಬರು ವಿದ್ಯಾರ್ಥಿಗಳ ಪೋಷಕರಿಗೆ ಸೋಮವಾರ ಕೊರೋನಾ ಸೋಂಕು ಪ್ರಕರಣ ದೃಢವಾಗಿರುವ ಹಿನ್ನೆಲೆಯಲ್ಲಿ ಆ ಇಬ್ಬರು ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಅವಕಾಶ ನೀಡಲಿಲ್ಲ. ಈ ವಿದ್ಯಾರ್ಥಿಗಳು ಎಸಿಮ್ಟಮ್ಯಾಟಿಕ್‌ ಆಗಿದ್ದರೂ ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಪೂರಕ ಪರೀಕ್ಷೆಯಲ್ಲಿ ಈ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗುವುದು ಎಂದರು.

SSLC ಪರೀಕ್ಷೆಗೆ ಮಕ್ಕಳನ್ನು ಸಾಗಿಸುತ್ತಿದ್ದ ರಿಕ್ಷಾ ಪಲ್ಟಿ: ನಾಲ್ವರಿಗೆ ಗಾಯ

ಅದೇ ರೀತಿ ಬಾಗಲಕೋಟೆ ನವ ನಗರದ ಪರೀಕ್ಷಾ ಕೇಂದ್ರದಲ್ಲಿ ಗಣಿತ ಪರೀಕ್ಷೆಗೆ (ಜೂ.27) ಕೊಠಡಿ ಮೇಲ್ವಿಚಾರಕಿಗೆ ಸೋಂಕು ದೃಢವಾದ ಹಿನ್ನೆಲೆಯಲ್ಲಿ ಆ ಪರೀಕ್ಷಾ ಕೇಂದ್ರಕ್ಕೆ ಸಂಪೂರ್ಣ ಸಿಬ್ಬಂದಿಯನ್ನು ಬದಲಾಯಿಸಿ, ಪರೀಕ್ಷಾ ಕೇಂದ್ರವನ್ನು ಸ್ಯಾನಿಟೈಸ್‌ ಮಾಡಿಲಾಗಿತ್ತು. ಈ ಕೇಂದ್ರದಲ್ಲಿ ಸೋಮವಾರ ಪರೀಕ್ಷೆ ನಡೆದಿದೆ ಎಂದರು.

ಪರೀಕ್ಷಾ ಸುರಕ್ಷತಾ ಕ್ರಮಗಳನ್ನು ತಿಳಿಯುವುದಕ್ಕಾಗಿ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಿಗೆ ಸೇರಿದ 14 ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಇಲಾಖೆ ಆಯುಕ್ತ ಡಾ. ಕೆ.ಜಿ. ಜಗದೀಶ್‌, ಸಮಗ್ರ ಶಿಕ್ಷಣ ಯೋಜನಾ ನಿರ್ದೇಶಕ ಡಾ. ಎಂ.ಟಿ. ರೇಜು, ರಾಜ್ಯದ ಕೊರೋನಾ ಸಮಿತಿ ಅಧ್ಯಕ್ಷ ಡಾ, ಸುದರ್ಶನ್‌ ಉಪಸ್ಥಿತರಿದ್ದರು.

ಸೋಂಕು ಇರುವ ಮಕ್ಕಳೂ ಪರೀಕ್ಷೆ ಬರೆಯಬಹುದಿತ್ತು

ರಾಜ್ಯದಲ್ಲಿ ಕೊರೋನಾ ಪಾಸಿಟಿವ್‌ ಮಕ್ಕಳು ಕೂಡ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕು. ಆಸ್ಪತ್ರೆ, ಪ್ರತ್ಯೇಕ ಕೊಠಡಿ, ಶಾಲಾ ಆವರಣದಲ್ಲಿ ಪರೀಕ್ಷೆ ಬರೆಸುವುದು ಸೇರಿದಂತೆ ಹಲವಾರು ಸಲಹೆಗಳನ್ನು ನೀಡಲಾಗಿತ್ತು. ಆದರೆ, ರಾಜ್ಯ ಸರ್ಕಾರವು ಕೊರೋನಾ ದೃಢಪಟ್ಟಿರುವ ಮತ್ತು ಗೃಹ ಕ್ವಾರೆಂಟೈನ್‌ನಲ್ಲಿರುವ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಯಲ್ಲಿ ಅವಕಾಶ ನೀಡುವ ನಿರ್ಧಾರ ಕೈಗೊಂಡಿದೆ ಎಂದು ಕೊರೋನಾ ತಜ್ಞರ ಸಮಿತಿ ಅಧ್ಯಕ್ಷರಾದ ಡಾ. ಸುದರ್ಶನ್‌ ತಿಳಿಸಿದ್ದಾರೆ.