ಬೆಂಗಳೂರು[ಫೆ.28]: ರಾಜ್ಯದ ಒಂದು ಸಾವಿರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಕಂಪ್ಯೂಟರ್‌ ವಿತರಿಸಲು ಇಸ್ಫೋಸಿಸ್‌ ಪ್ರತಿಷ್ಠಾನ ಮುಂದೆ ಬಂದಿದ್ದು, ಸದ್ಯದಲ್ಲಿಯೇ ಅಧಿಕೃತವಾಗಿ ಒಪ್ಪಂದಕ್ಕೆ ಸಹಿ ಮಾಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌ ತಿಳಿಸಿದ್ದಾರೆ.

ಈ ಸಂಬಂಧ ಗುರುವಾರ ಇಸ್ಫೋಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಅವರೊಂದಿಗೆ ಮಾತುಕತೆ ನಡೆಸಲಾಗಿದೆ. ನಿರೀಕ್ಷಿತ ಗುಣಮಟ್ಟದ ತಂತ್ರಜ್ಞಾನ ಒದಗಿಸಲು ಕಂಪ್ಯೂಟರ್‌ ಹಾಗೂ ಪೂರಕ ಪರಿಕರಗಳನ್ನು ಪೂರೈಸಲಿದ್ದಾರೆ. ಕಂಪ್ಯೂಟರ್‌ ಒದಗಿಸುವ ಶಾಲೆಗಳಲ್ಲಿ ಪ್ರಸ್ತುತ ಇರುವ ಶೈಕ್ಷಣಿಕ ಸ್ಥಿತಿಗತಿ ಮತ್ತು ಕಂಪ್ಯೂಟರ್‌ಗಳನ್ನು ಪೂರೈಸಿದ ನಂತರದ ಮೂರು ತಿಂಗಳ ಅವಧಿಯ ಶೈಕ್ಷಣಿಕ ಸ್ಥಿತಿಗತಿಯ ಗುಣಮಟ್ಟವನ್ನು ತಿಳಿದು, ಬದಲಾದ ಪರಿಣಾಮವನ್ನು ಅರಿಯಲಾಗುತ್ತದೆ ಎಂದು ಹೇಳಿದರು.

ಕಂಪ್ಯೂಟರ್‌ ಮಾತ್ರವಲ್ಲದೆ, ಸರ್ಕಾರಿ ಪ್ರೌಢಶಾಲಾ ವಿಜ್ಞಾನ ಶಿಕ್ಷಕರಿಗೆ ವಿಶೇಷ ತರಬೇತಿ ನೀಡಲು ಇಸ್ಫೋಸಿಸ್‌ ಪ್ರತಿಷ್ಠಾನದಿಂದ ಮೊದಲ ಹಂತವಾಗಿ ಒಂದು ಕೋಟಿ ರು. ನೀಡುವುದಾಗಿಯೂ ಭರವಸೆ ನೀಡಿದ್ದಾರೆ. ಇಂಗ್ಲಿಷ್‌ ಭಾಷಾ ಬೋಧನೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಉತ್ತಮ ಶಿಕ್ಷಕರನ್ನು ಗುರುತಿಸಿ ಗೌರವಿಸಲು ಕೂಡ ತಿಳಿಸಿದ್ದಾರೆ. ಕೂಡಲೇ ಅಂತಹ ಶಿಕ್ಷಕರ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ಪ್ರತಿಷ್ಠಾನದ ಸಹಯೋಗದಲ್ಲಿ ಹತ್ತು ಕರ್ನಾಟಕ ಪಬ್ಲಿಕ್‌ ಶಾಲೆಗಳಲ್ಲಿ ಗ್ರಂಥಾಲಯ ನಿರ್ಮಿಸಲು ಸಹ ಒಪ್ಪಿಗೆ ನೀಡಿದ್ದಾರೆ ಎಂದು ಸಚಿವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.