ಧಾರವಾಡ[ಅ.30]: ಸ್ವಾಭಿಮಾನದಿಂದ ಆಡಳಿತ ನಡೆಸಿದವನು ಟಿಪ್ಪು ಸುಲ್ತಾನ್. ಅವನು ಸ್ವಾತಂತ್ರ್ಯ ಪ್ರೇಮಿ, ಕನ್ನಡದ ಅಭಿಮಾನಿ ಎಂದು ಮಾಜಿ ಸಚಿವ ಎಚ್.ಕೆ. ಪಾಟೀಲ ಅವರು ಹೇಳಿದ್ದಾರೆ.

ನಗರದ ಕೃಷಿ ವಿಶ್ವ ವಿದ್ಯಾಲಯಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ತಂತ್ರಜ್ಞಾನ, ವಿಜ್ಞಾನವನ್ನು ಅಂದಿನ ಸಂದರ್ಭದಲ್ಲೇ ಹೆಚ್ಚು ಅರಿತವರು ಟಿಪ್ಪುಸುಲ್ತಾನ್. ತನ್ನದೇಯಾದ ನಾಡು ಕಟ್ಟಿ ಬೆಳೆಸುವಾಗ ಕೆಲ ವಿವಾದಗಳು ಆಗಿರಬಹುದು. ಆದರೆ, ರಾಜಕೀಯ ಕಾರಣಕ್ಕಾಗಿ ಬಿಜೆಪಿ ಟಿಪ್ಪು ಬಗ್ಗೆ ತೆಗೆದುಕೊಂಡ ನಿರ್ಣಯ ಖಂಡನಾರ್ಹ. ಟಿಪ್ಪು ಜಯಂತಿ ನಿಲ್ಲಿಸುವುದು ಸೂಕ್ತವಾದುದ್ದಲ್ಲ. ಬಿಜೆಪಿ ಸರ್ಕಾರ ವಿವಾದಾತ್ಮಕ ನಿರ್ಣಯಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಬೇಕು ಎಂದ ಅವರು, ಕೇವಲ ರಾಜಕೀಯಕ್ಕೆ ಮಾತ್ರ ಇವರ ಚಿಂತನೆ ಆಗಬಾರದು. ಟಿಪ್ಪು ಬಗ್ಗೆಓದಿಕೊಳ್ಳಬೇಕು ಎಂದು ಹೇಳಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಚಿನ್ನದ ಮೇಲೆ ಕೇಂದ್ರ ಸರ್ಕಾರ ಹಿಡಿತ ಸಾಧಿಸುವ ವಿಚಾರವಾಗಿ ಮಾತನಾಡಿ, ಅದೊಂದು ಸ್ವಾಗತಾರ್ಹ ನಿರ್ಧಾರ. ಚಿನ್ನ-ಬೆಳ್ಳಿ ಯಾವುದೇ ಇರಲಿ ಅಕ್ರಮವಾಗಿ ಹೊಂದಲೇಬಾರದು. ಅಕ್ರಮ ವಸ್ತು ಎಲ್ಲಿದೆ? ಏನಿದೆ ಅದನ್ನು ಹೆಕ್ಕಿ ತರುವ ಕಾರ್ಯಆಗಬೇಕು. ಆದರೆ ಕಾನೂನುಗಳ ತಪ್ಪು ಬಳಕೆ ಆಗಬಾರದು ಎಂದರು.

ಉಪಚುನಾವಣೆಯಲ್ಲಿ ಮಹಾರಾಷ್ಟ್ರ, ಹರಿಯಾಣದ ಹಾಗೆ ಆಶ್ಚರ್ಯಕರ ಫಲಿತಾಂಶ ಬರುತ್ತದೆ. ಪ್ರವಾಹ ಪೀಡಿತ ಪ್ರದೇಶದ ಜನಬಿಜೆಪಿ ಸರ್ಕಾರದ ಬಗ್ಗೆ ಬೇಸತ್ತು ಹೋಗಿದ್ದಾರೆ. ಮಹದಾಯಿ ವಿಷಯದಲ್ಲಿ ಗೋವಾ ಕಾಂಗ್ರೆಸ್‌ ಸುಮ್ಮನಿರಬೇಕೆಂಬ ಶೆಟ್ಟರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದೊಂದು ಬಾಲಿಶವಾದ ಹೇಳಿಕೆ. ಮಹದಾಯಿ ಬಗ್ಗೆ ಬಿಜೆಪಿಯವರಿಗೆ ಸರಿಯಾದ ತಿಳಿವಳಿಕೆಯೇ ಇಲ್ಲ. ಪ್ರಧಾನಿ ಮಹದಾಯಿ ಬಗ್ಗೆ ವಚನ ಕೊಟ್ಟು ಹೋಗಿದ್ದಾರೆ. ಆದರೆ, ಈ ಬಗ್ಗೆ ಪುನಃ ಮಾತನಾಡಲೇಇಲ್ಲ. ಈ ಮೂಲಕ ಮಹದಾಯಿ ವಿಷಯದಲ್ಲಿಅವರು ವಚನ ಭ್ರಷ್ಟರಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯೋತ್ಸವ ಪ್ರಶಸ್ತಿಯನ್ನು ಹೊರನಾಡು, ಗಡಿನಾಡು ಕನ್ನಡಿಗರ ಹೆಸರಿನಲ್ಲಿ ತಮಗೆಯಾರು ಬೇಕೋ ಅವರಿಗೆ ಕೊಟ್ಟಿದ್ದಾರೆ. ಅವರದೇ ಪಕ್ಷದವರು ಇದನ್ನು ಎತ್ತಿ ತೋರಿಸಿದ್ದಾರೆ. ಆಯ್ಕೆ ಸಮಿತಿಯಲ್ಲಿ ಇದ್ದವರೆ ನಾನು ಐದು ಕೊಡಿಸಿದೇನಿ ಅಂತಾ ಹೇಳಿಕೊಂಡಿದ್ದಾರೆ. ಪ್ರಶಸ್ತಿ ಪಡೆದವರ ಬಗ್ಗೆ ನಮಗೆ ಅಗೌರವ ಇಲ್ಲ. ಆದರೆ, ಉತ್ತರ ಕರ್ನಾಟಕಕ್ಕೆ ಇನ್ನೂ ಹೆಚ್ಚಿನ ಪ್ರಶಸ್ತಿ ಬರಬೇಕಿತ್ತು. ಈಗ ಪ್ರಶಸ್ತಿ ಕೊಟ್ಟವರ ಬಗ್ಗೆ ನಮ್ಮ ಅಪವಾದ ಇಲ್ಲ. ಆದರೆ, ಸಮಿತಿಯಲ್ಲಿದ್ದವರು ನಾನು ಐದು ಕೊಡಿಸಿದ್ದೇನೆ ಅಂತಾ ಹೇಳಿ ಕೊಂಡಿರೋದು ಎಷ್ಟು ಸರಿ ಎಂದ ಅವರು, ಇದರ ಬಗ್ಗೆ ಸಮಗ್ರವಾಗಿ ಸಂಸ್ಕೃತಿ ಇಲಾಖೆ ಸಚಿವರು ವಿವರಣೆ ಕೊಡಬೇಕು. ಆ ಐವರು ಯಾರು ಯಾರು ಅನ್ನೋದನ್ನುಸಾರ್ವಜನಿಕವಾಗಿ ಹೇಳಬೇಕು. ಇಲ್ಲದೇ ಹೋದಲ್ಲಿ ಎಲ್ಲ 60 ಪುರಸ್ಕೃತರಿಗೆ ನೋವು ಮಾಡಿದಂತಾಗುತ್ತದೆ. ಒಂದೊಂದಾಗಿ ಸ್ಪಷ್ಟವಾದ ವಿವರಣೆ ಕೊಡಬೇಕು ಎಂದು ಆಗ್ರಹಿಸಿದ್ದಾರೆ.