* 5ನೇ ಅವಿನ್ಯೂ ಮಾಲ್‌ನ ಸ್ಟೇರ್ ಕೇಸ್‌ನ ಕಿಟಕಿಯಿಂದ ಬಿದ್ದು ಘಟನೆ* ಸಹಪಾಠಿಯ ಕಾಲು ಮುರಿತ* ಬ್ರಿಗೇಡ್ ರಸ್ತೆಯ ಮಾಲ್‌ನಲ್ಲಿ ದುರಂತ
ಬೆಂಗಳೂರು(ಮೇ.22): ನಗರದ ಬ್ರಿಗೇಡ್ ರಸ್ತೆಯ ಮಾಲ್‌ವೊಂದರ ಎರಡನೇ ಮಹಡಿ ಕಿಟಿಕಿಯಿಂದ ಆಕಸ್ಮಿಕವಾಗಿ ಆಯತಪ್ಪಿ ಕೆಳಗೆ ಬಿದ್ದು ವಿದ್ಯಾರ್ಥಿನಿ ಮೃತಪಟ್ಟು, ಆಕೆಯ ಸಹಪಾಠಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶನಿವಾರ ನಡೆದಿದೆ.
ಫ್ರೇಜರ್ ಟೌನ್ ನಿವಾಸಿ ಲಿಯಾ ರೆಗೀನಾ (19) ಮೃತ ದುರ್ದೈವಿ. ಈ ಘಟನೆಯಲ್ಲಿ ಗಾಯಗೊಂಡಿರುವ ಮೃತಳ ಸಹಪಾಠಿ ಫ್ರೀಜ್ ಪೀಟರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆತನ ಎರಡು ಕಾಲುಗಳು ಮುರಿದಿವೆ. ಬ್ರಿಗೇಡ್ ರಸ್ತೆಯ 5ನೇ ಅವಿನ್ಯೂ ಮಾಲ್‌ಗೆ ಶನಿವಾರ ಮಧ್ಯಾಹ್ನ ಲಿಯಾ ಹಾಗೂ ಪೀಟರ್ ತೆರಳಿದ್ದಾಗ ಈ ಘಟನೆ ನಡೆದಿದೆ.
ಆಂಧ್ರಪ್ರದೇಶ ಮೂಲದ ಪೀಟರ್, ಎಚ್‌ಎಎಲ್ ಸಮೀಪ ಪಿಜಿಯಲ್ಲಿ ನೆಲೆಸಿದ್ದಾನೆ. ಲಿಯಾ ತಾಯಿ ಸ್ಪಾ ಮಾಲಿಕರಾಗಿದ್ದು, ಫ್ರೇಜರ್ ಟೌನ್‌ನಲ್ಲಿ ಕುಟುಂಬದ ಜತೆ ಆಕೆ ವಾಸವಾಗಿದ್ದರು. ನಗರದ ಖಾಸಗಿ ಕಾಲೇಜಿನಲ್ಲಿ ಎರಡನೇ ವರ್ಷದ ಬಿಕಾಂನಲ್ಲಿ ಲಿಯಾ ಹಾಗೂ ಪೀಟರ್ ಓದುತ್ತಿದ್ದರು. ವಾರಾಂತ್ಯದ ಹಿನ್ನೆಲೆಯಲ್ಲಿ ಶನಿವಾರ ಮಧ್ಯಾಹ್ನ 1ರ ಸುಮಾರಿಗೆ ಬ್ರಿಗೇಡ್ ರಸ್ತೆಯ 5ನೇ ಅವಿನ್ಯೂ ಮಾಲ್‌ಗೆ ಇಬ್ಬರು ಬಂದಿದ್ದಾರೆ. ಆ ವೇಳೆ ಎರಡನೇ ಮಹಡಿಗೆ ತೆರಳುವಾಗ ಸ್ಟೇರ್ ಕೇಸ್‌ನ ಕಿಟಕಿಯಿಂದ ಆಯತಪ್ಪಿ ಇಬ್ಬರು ಕೆಳಗೆ ಬಿದ್ದಿದ್ದಾರೆ. ಕೂಡಲೇ ಗಾಯಾಳುಗಳನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಘಟನೆಯಲ್ಲಿ ತಲೆಗೆ ಗಂಭೀರ ಪೆಟ್ಟಾಗಿ ತೀವ್ರ ರಕ್ತಸ್ರಾವದಿಂದ ಲಿಯಾ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾಳೆ. ಪೀಟರ್ ಪ್ರಾಣಪಾಯದಿಂದ ಸುರಕ್ಷಿತವಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Chitradurga: ಸಾವಿರ ರೂಪಾಯಿಗೆ ಶುರುವಾದ ಸ್ನೇಹಿತರಿಬ್ಬರ ಗಲಾಟೆ ಕೊಲೆಯಲ್ಲಿ ಅಂತ್ಯ!
ಈ ಘಟನೆ ಸಂಬಂಧ ಮೃತಳ ತಾಯಿ ಲಿಯಾ ನೀಡಿದ ದೂರಿನ ಮೇರೆಗೆ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
1.5 ಅಡಿ ಅಗಲದ ಕಿಟಕಿ ಬಳಿ ಕುಳಿತು ಮಾತು?
ಅವಿನ್ಯೂ ಮಾಲ್‌ನ ಎರಡನೇ ಮಡಿಯ ಸ್ಟೇರ್ ಕೇಸ್‌ನ ಕಿಟಕಿ ಸುಮಾರು 1.5 ಅಡಿ ಅಗಲ ಹಾಗೂ 3.5 ಅಡಿ ಉದ್ದ ಇದೆ. ಇದಕ್ಕೆ ಫೈಬರ್ ಗ್ಲಾಸ್ ಅಳವಡಿಸಲಾಗಿದೆ. ಇಷ್ಟು ಚಿಕ್ಕ ಜಾಗದಿಂದ ಲಿಯಾ ಹಾಗೂ ಪೀಟರ್ ದಿಢೀರ್ ಕೆಳಗೆ ಬಿದ್ದಿರುವುದು ಅನುಮಾನಕ್ಕೆ ಕಾರಣವಾಗಿದೆ. ಕಿಟಕಿ ಬಳಿ ಕುಳಿತು ಇಬ್ಬರು ಮಾತನಾಡುವಾಗ ಆಯತಪ್ಪಿ ಕೆಳಗೆ ಬಿದ್ದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
