ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ| ಕ್ಷುಲ್ಲಕ ವಿಚಾರವಾಗಿ ಇಬ್ಬರ ಮಧ್ಯೆ ಜಗಳ| ಕಟ್ಟಿಗೆಯಿಂದ ಮನಬಂದಂತೆ ಬಡಿದು ಆಕೆಯನ್ನು ಹತ್ಯೆಗೈದ ವೈಕ್ತಿ| ಘಟನೆ ಬಳಿಕ ಪರಾರಿಯಾದ ಆರೋಪಿ| 

ಬೆಂಗಳೂರು(ಮಾ.24): ವೈಯಕ್ತಿಕ ವಿಚಾರವಾಗಿ ಮಹಿಳಾ ಕೂಲಿ ಕಾರ್ಮಿಕರೊಬ್ಬರನ್ನು ಸ್ನೇಹಿತ ಕಟ್ಟಿಗೆಯಿಂದ ಹೊಡೆದು ಹತ್ಯೆಗೈದು ಪರಾರಿಯಾಗಿರುವ ಘಟನೆ ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಶಾಂತಿಪುರ ಸಮೀಪದ ನಾಯ್ಡು ಲೇಔಟ್‌ ನಿವಾಸಿ ಫಿರ್ಮಾ (38) ಹತ್ಯೆಯಾದ ದುರ್ದೈವಿ. ಈ ಕೃತ್ಯ ಎಸಗಿ ಪರಾರಿಯಾಗಿರುವ ಮೆಹಬೂಬ್‌ ಪತ್ತೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಎರಡು ದಿನಗಳ ಹಿಂದೆ ಫಿರ್ಮಾ ಮನೆಗೆ ಬಂದಿದ್ದಾಗ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬೆಂಗಳೂರು; ಗಂಡನ ಕೊಲೆಗೆ ಪತ್ನಿ-ಪುತ್ರನೇ ಸುಪಾರಿ ಕೊಟ್ಟರು..

ಯಾದಗಿರಿ ಜಿಲ್ಲೆಯ ಫಿರ್ಮಾ, ತಮ್ಮ ಮಕ್ಕಳ ಜತೆ ನಾಯ್ಡು ಲೇಔಟ್‌ ನೆಲೆಸಿದ್ದರು. ಕೂಲಿ ಕೆಲಸ ಮಾಡುತ್ತಿದ್ದ ಆಕೆಗೆ ಹಲವು ವರ್ಷಗಳಿಂದ ಮೆಹಬೂಬ್‌ ಜತೆ ಸ್ನೇಹವಿತ್ತು. ಈ ಗೆಳೆತನದಲ್ಲೇ ಆಗಾಗ್ಗೆ ಅವರ ಮನೆಗೆ ಬಂದು ಆತ ಹೋಗುತ್ತಿದ್ದ. ಅಂತೆಯೇ ಶನಿವಾರ ರಾತ್ರಿ ಯಾದಗಿರಿಯಿಂದ ಬಂದಿದ್ದ ಮೆಹಬೂಬ್‌, ಗೆಳತಿಯ ಮನೆಯಲ್ಲಿ ತಂಗಿದ್ದ. ಕ್ಷುಲ್ಲಕ ವಿಚಾರವಾಗಿ ಭಾನುವಾರ ಬೆಳಗ್ಗೆ ಆ ಇಬ್ಬರ ಮಧ್ಯೆ ಜಗಳ ಶುರುವಾಗಿದೆ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಕಟ್ಟಿಗೆಯಿಂದ ಮನಬಂದಂತೆ ಬಡಿದು ಆಕೆಯನ್ನು ಹತ್ಯೆಗೈದು ಆರೋಪಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.