ಮಹಾಲಕ್ಷ್ಮೀ ಲೇಔಟ್ ನಿವಾಸಿ ಬಿ.ಎನ್ .ಪವಿತ್ರಾ ಅವರು ನೀಡಿದ ದೂರಿನ ಮೇರೆಗೆ ಮೈದುನ ಕುರುಬರಹಳ್ಳಿ ನಿವಾಸಿ ತ್ರಿಮೂರ್ತಿ, ನಾದಿನಿ ಪತಿ ನಂದಿನಿ ಲೇಔಟ್ ನಿವಾಸಿ ನಾಗರಾಜ್ ಹಾಗೂ ಪತಿಯ ಸಂಬಂಧಿ ಸಿದ್ಧರಂಗಸ್ವಾಮಿ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿಸಿದ ಅಧಿಕಾರಿಗಳು

ಬೆಂಗಳೂರು(ಫೆ.04): ಪತಿ ಮೃತದೇಹ ಆಸ್ಪತ್ರೆಯಲ್ಲಿ ಇರುವಾಗಲೇ ತನಗೆ ಜೀವ ಬೆದರಿಕೆ ಹಾಕಿ ಸಹಿ ಪಡೆದು ಕೊಟ್ಯಂತರ ರು. ಮೌಲ್ಯದ ಆಸ್ತಿ ಕಬಳಿಸಿದ್ದಾರೆ ಎಂದು ಪತಿಯ ಸಂಬಂಧಿಕರ ವಿರುದ್ಧ ಆರೋಪಿಸಿರುವ ಮಹಿಳೆಯೊಬ್ಬರು ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮಹಾಲಕ್ಷ್ಮೀ ಲೇಔಟ್ ನಿವಾಸಿ ಬಿ.ಎನ್ .ಪವಿತ್ರಾ ಅವರು ನೀಡಿದ ದೂರಿನ ಮೇರೆಗೆ ಮೈದುನ ಕುರುಬರಹಳ್ಳಿ ನಿವಾಸಿ ತ್ರಿಮೂರ್ತಿ, ನಾದಿನಿ ಪತಿ ನಂದಿನಿ ಲೇಔಟ್ ನಿವಾಸಿ ನಾಗರಾಜ್ ಹಾಗೂ ಪತಿಯ ಸಂಬಂಧಿ ಸಿದ್ಧರಂಗಸ್ವಾಮಿ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬ್ಯಾಂಕಲ್ಲಿ ಸಾಲ ಮಾಡಿ ಸತ್ತರೆ ಏನಾಗುತ್ತೆ?

ಏನಿದು ದೂರು?: 

ದೂರುದಾರೆ ಪವಿತ್ರಾ ನೀಡಿದ ದೂರಿನ ಅನ್ವಯ, ನಾನು 2005ರಲ್ಲಿ ಸೋಮಶೇಖ‌ರ್ ಅವರನ್ನು ವಿವಾಹವಾಗಿದ್ದೆ. ಮದುವೆ ವೇಳೆ ಸೋಮಶೇಖರ್ ಪದವಿಧರನಾಗಿದ್ದು, ಒಳ್ಳೇ ಆಸ್ತಿ ಇದೆ ಎಂದು ಅವರ ಕುಟುಂಬದವರು ಸುಳ್ಳು ಹೇಳಿದ್ದರು. ಮದುವೆ ಬಳಿಕ ಸೋಮಶೇಖರ್ ಲಾರಿ ಚಾಲಕನಾಗಿ ಕೆಲಸ ಮಾಡುವ ವಿಚಾರ ಗೊತ್ತಾಗಿತ್ತು. ಬಳಿಕ ಮೈದುನ, ನಾದಿನಿ, ನಾಗರಾಜ್ ಹಾಗೂ ಸಂಬಂಧಿಕ ಸಿದ್ಧರಂಗಸ್ವಾಮಿ ಸೇರಿಕೊಂಡು ಪತಿ ಸೋಮಶೇಖರ್‌ಗೆ ಸೇರಿದ ಕೋಟ್ಯಂತರ ರು. ಮೌಲ್ಯದ ಆಸ್ತಿ ಕಬಳಿಸಲು ಸಂಚು ರೂಪಿಸಿದ್ದರು. ಹೀಗಾಗಿ ನನ್ನ ಶೀಲದ ಬಗ್ಗೆ ಪತಿಗೆ ಚಾಡಿ ಹೇಳಿ ನನ್ನ ಮೇಲೆ ಹಲ್ಲೆ ಮಾಡುವಂತೆ ಮಾಡುತ್ತಿದ್ದರು. 2017ರಲ್ಲಿ ಪತಿ ಮತ್ತು ನಾನು ಪ್ರತ್ಯೇಕವಾಗಿ ಮನೆ ಕಟ್ಟಿಕೊಂಡು ನೆಲೆಸಿದ್ದೆವು. ನಂತರವೂ ಈ ಮೂವರು ಹಿಂಸೆ ನೀಡುತ್ತಿದ್ದರು. ಆಗ ನಾನು ಇಬ್ಬರು ಮಕ್ಕಳೊಂದಿಗೆ ರಾಜಾಜಿನಗರ ಬಾಡಿಗೆ ಮನೆಯಲ್ಲಿ ಪ್ರತ್ಯೇಕವಾಗಿ ನೆಲೆಸಿದ್ದೆ. ಬಳಿಕ ಪತಿ ನನ್ನ ಹೆಸರಿಗೆ ಕುರುಬರಹಳ್ಳಿಯ 3 ಅಂತಸ್ತಿನ ಮನೆಯನ್ನು ದಾನಪತ್ರ ಮಾಡಿಕೊಟ್ಟಿದ್ದರು. ನಾನು ಮನೆಯಲ್ಲಿ ಇಲ್ಲದಾಗ ಬಂದು ನನ್ನ ಮದುವೆ ಪ್ರಮಾಣ ಪತ್ರ, ಜನನ ಪ್ರಮಾಣ ಪತ್ರ, ಪತಿ ದಾನವಾಗಿದ್ದ ಕೊಟ್ಟಿದ್ದ ಕಟ್ಟಡ ಹಾಗೂ ಕಾರಿನ ದಾಖಲೆಗಳು, ₹15 ಲಕ್ಷ ಮೌಲ್ಯದ ಚಿನ್ನಾಭರಣ ತೆಗೆದುಕೊಂಡು ಹೋಗಿ ಬಚ್ಚಿಟ್ಟಿದ್ದರು.

ಮಂಡ್ಯ: ಆಸ್ತಿಗಾಗಿ ತಂದೆ- ತಾಯಿ ಕೈ ಕಾಲು ಮುರಿದ ಮಗ

ಸಾವಿನ ದಿನವೇ ಸಹಿ ಪಡೆದರು:

ಪತಿಯ ಮೃತದೇಹ ಇನ್ನೂ ಆಸ್ಪತ್ರೆಯಲ್ಲಿ ಇರುವಾ ಗಲೇ ನನ್ನ ಬಳಿ ಬಂದ ಈ ಮೂವರು, ಕುರುಬರಹಳ್ಳಿಯ ಮನೆಯನ್ನು ನಮ್ಮ ಹೆಸರಿಗೆ ಬರೆದುಕೊಡಬೇಕು. ಇಲ್ಲವಾದರೆ, ಸೋಮ ಶೇಖರ್ ಆತ್ಮಹತ್ಯೆಗೆ ನೀನೇ ಕಾರಣ ಎಂದು ಸುಳ್ಳು ಕೇಸ್ ಹಾಕಿಸಿ ಜೈಲಿಗೆ ಕಳುಹಿಸುವುದಾಗಿ ಬೆದರಿಸಿ ₹500 ಮೌಲ್ಯದ ಕರಾರು ಪತ್ರಕ್ಕೆ ಬಲವಂತವಾಗಿ ಸಹಿ ಮಾಡಿಸಿಕೊಂಡಿದ್ದಾರೆ. ಹೀಗಾಗಿ ಈ ಮೂವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪವಿತ್ರಾ ದೂರಿನಲ್ಲಿ ಮನವಿ ಮಾಡಿದ್ದಾರೆ.

ಪತಿಯ ಆತ್ಮಹತ್ಯೆಗೆ ಪ್ರಚೋದನೆ

ಈ ಮೂವರು ಸೋಮಶೇಖರ್‌ಗೆ ಮದ್ಯ ಕುಡಿಸಿ, ನೀನು ಗಂಡಸಾ? ಇನ್ನೂ ಏಕೆ ಬದುಕಿದ್ದೀಯಾ ಎಂದು ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದರು. ಹೀಗಾಗಿ ಪತಿ 3 ಬಾರಿ ಆತ್ಮಹತ್ಯೆಗೂ ಪ್ರಯತ್ನಿಸಿದ್ದರು. 2024ರ ಡಿ.22ರಂದು ಪತಿ ಮದ್ಯ ಸೇವಿಸಿದಾಗ ಜಗಳ ಮಾಡಿ ಪತಿ ಬೆಡ್ ರೂಮ್‌ಗೆ ತೆರಳಿ ಬಾಗಿಲು ಹಾಕಿಕೊಂಡು ನೇಣು ಬಿಗಿದುಕೊಂಡಿದ್ದರು. ನೇಣಿನ ಕುಣಿಕೆಯಿಂದ ಕೆಳಗಿಳಿಸಿ ಆಸ್ಪತ್ರೆಗೆ ದಾಖಲಿಸಿದ್ದೆವು. ಡಿ.23ರಂದು ಚಿಕಿತ್ಸೆ ಫಲಿಸದೆ ಪತಿ ಮೃತಪಟ್ಟಿದ್ದರು. ಆಗ ಈ ಮೂವರೂ ಮಾಧ್ಯಮಗಳನ್ನು ಕರೆಸಿ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದ್ದರು ಎಂದು ಸೋಮಶೇಖರ್ ಪತ್ನಿ ಆರೋಪಿಸಿದ್ದಾರೆ.