ಚೆನ್ನೈ, (ಮೇ.15): ತಮಿಳುನಾಡಿನ ಕಡಲೂರು ಜಿಲ್ಲೆಯಲ್ಲಿ ಗಂಡನನ್ನು ಕೊಲೆ ಮಾಡಿದ ಆರೋಪದ ಮೇಲೆ 34 ವರ್ಷದ ಮಹಿಳೆ ಮತ್ತು 23 ವರ್ಷದ ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ. 

ಶ್ರೀಧರನ್ ಹತ್ಯೆಯಾದ ವ್ಯಕ್ತಿ. ತನಿಖೆ ನಡೆಸಿದ ಪೊಲೀಸರು 10 ತಿಂಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣ ಈಗ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಮಹಿಳೆ ಹಾಗೂ ಆಕೆಯ ಪ್ರಿಯಕರನನ್ನು ಬುಧವಾರ ಬಂಧಿಸಿದ್ದಾರೆ. ಬಂಧಿತರನ್ನು ರಾಮಪುರದ ಸುಧಾ ಮತ್ತು ಆಕೆಯ ಪ್ರಿಯಕರ ಶಿವರಾಜ್ ಎಂದು ಗುರುತಿಸಲಾಗಿದೆ.  

ಕಳೆದ ವರ್ಷ ಜುಲೈ 13 ರಂದು ಓಮಂಗಲಂ ಪೊಲೀಸ್ ಠಾಣೆ ವ್ಯಾಪ್ತಿಯ ಗೋಡಂಬಿ ತೋಪಿನಲ್ಲಿ ಗುರುತಿಸಲಾಗದ ಸ್ಥಿತಿಯಲ್ಲಿದ್ದ ಸುಟ್ಟ ಮೃತದೇಹ ಕಂಡುಬಂದಿದೆ. ಕೂಡಲೇ ಗ್ರಾಮದ ಆಡಳಿತಾಧಿಕಾರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಕೈಗೊಂಡಿದ್ದರು. ವಿವಿಧ ಹಂತಗಳಲ್ಲಿ ತನಿಖೆ ನಡೆಸಿದ ಬಳಿಕ 10 ತಿಂಗಳ ನಂತರ ಕೊಲೆ ರಹಸ್ಯ ಬೆಳಕಿಗೆ ಬಂದಿದೆ. 

ಶ್ರೀಧರನ್ ಪೆರಂಬಲೂರಿನ ಖಾಸಗಿ ಕಾಲೇಜಿನಲ್ಲಿ ಬಸ್ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಶಿವರಾಜ್ ಕೂಡ ಅಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದು ಒಂದೇ ಹಳ್ಳಿಯವರಾದ ಇವರ ನಡುವೆ ಗೆಳೆತನ ಇತ್ತು. 

ಶಿವರಾಜ್  ಆಗಾಗ ಶ್ರೀಧರನ್ ಮನೆಗೆ ಬಂದು ಹೋಗುತ್ತಿದ್ದ . ಹಾಗೇ ಶಿವರಾಜ್‌ನ ಕಣ್ಣು ಶ್ರೀಧರನ್ ಪತ್ನಿ ಸುಧಾ ಮೇಲೆ ಬಿದ್ದು, ಅದು ಸರಸ ಸಲ್ಲಾಪದವರೆಗೂ ಬೆಳೆದಿದೆ. 

ಹೀಗೆ ಒಂದು ದಿನ ಮನೆಯಲ್ಲಿ ಯಾರು ಇಲ್ಲದ ವೇಳೆ ಶಿವರಾಜ್ ಹಾಗೂ ಶ್ರೀಧರ್ ಪತ್ನಿ ಸುಧಾ ಸರಸವಾಡುತ್ತಿರುವಾಗ ಸಿಕ್ಕಿಬಿದ್ದಿದ್ದಾರೆ. ಇದರಿಂದ  ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಕಂಡು ಕೋಪಗೊಂಡು ಶ್ರೀಧರನ್ ಥಳಿಸಿದ್ದಾರೆ.

 ಈ ವೇಳೆ ಬೆಲ್ಟ್ ನಿಂದ ಕುತ್ತಿಗೆ ಬಿಗಿದು ಶ್ರೀಧರನ್ ಕೊಲೆ ಮಾಡಿದ ಸುಧಾ ಮತ್ತು ಶಿವರಾಜ್ ಮೃತದೇಹವನ್ನು ಬೆಡ್ ಶೀಟ್ ನಲ್ಲಿ ಸುತ್ತಿ ಮಂಚದ ಕೆಳಗೆ ಬಚ್ಚಿಟ್ಟಿದ್ದಾರೆ. ಬಳಿಕ ರಾತ್ರಿ ಕಾರ್ ನಲ್ಲಿ ಮೃತದೇಹವನ್ನು  ಗೋಡಂಬಿ ತೋಪಿನಲ್ಲಿ ಪೆಟ್ರೋಲ್ ನಿಂದ ಬೆಂಕಿ ಹಚ್ಚಿ ಸುಟ್ಟಿದ್ದಾರೆ.

ಕೊನೆಗೆ ಓಮಂಗಲಂ ಠಾಣೆ ಪೊಲೀಸರು ನಿರಂತರ ತನಿಖೆ ಕೈಗೊಂಡು ಕೊಲೆ ರಹಸ್ಯ ಬಯಲಿಗೆಳೆದಿದ್ದು, ಇದೀಗ ಸುಧಾ ಮತ್ತು ಆಕೆಯ ಪ್ರಿಯಕರ ಜೈಲು ಸೇರಿದ್ದಾರೆ.