ಬ್ಯೂಟಿ ಪಾರ್ಲರ್‌ನಲ್ಲಿ ಐಬ್ರೋ ಮಾಡಿಸಿಕೊಂಡಿದ್ದಕ್ಕೆ ತ್ರಿವಳಿ ತಲಾಕ್ ನೀಡಿದ ಪತಿ!
ಕಾನ್ಪುರದಲ್ಲಿ ಬ್ಯೂಟಿಪಾರ್ಲರ್‌ಗೆ ಹೋಗಿ ಐಬ್ರೋ ಮಾಡಿಸಿಕೊಂಡಿದ್ದಕ್ಕೆ ಪತಿಯೊಬ್ಬ ಪತ್ನಿಗೆ ತ್ರಿವಳಿ ತಲಾಖ್ ನೀಡಿದ ಘಟನೆ ನಡೆದಿದೆ. ಈ ಬಗ್ಗೆ ಯುವತಿ ಅತ್ತೆ-ಮಾವನ ಜೊತೆ ಮಾತನಾಡಿದಾಗ ಅವರೂ ಮಗನಿಗೆ ಬೆಂಬಲ ನೀಡಿದ್ದಾರೆ. ಈ ಸಂಬಂಧ ಐವರ ವಿರುದ್ಧ ಪ್ರಕರಣ ದಾಖಲಾಗಿದೆ.
ನವದೆಹಲಿ (ಅ.31): ಉತ್ತರ ಪ್ರದೇಶದ ಕಾನ್ಪುರದಲ್ಲಿ ವಿಚಿತ್ರ ತಲಾಖ್ ಪ್ರಕರಣವೊಂದು ಬೆಳಕಿಗೆ ಬಂದಿದೆ. ಬ್ಯೂಟಿ ಪಾರ್ಲರ್‌ಗೆ ತೆರಳಿ ಪತ್ನಿ ಐಬ್ರೋ ಮಾಡಿಸಿಕೊಂಡಿದ್ದಾಳೆ ಎನ್ನುವ ಕಾರಣಕ್ಕೆ ವಿಡಿಯೋ ಕಾಲ್‌ನಲ್ಲಿಯೇ ಪತಿಯೊಬ್ಬ ತನ್ನ ಪತ್ನಿಗೆ ತ್ರಿವಳಿ ತಲಾಖ್ ನೀಡಿದ್ದಾರೆ. ಆ ಬಳಿಕ ಮಹಿಳೆ ಹಲವು ಬಾರಿ ತನ್ನ ಪತಿಗೆ ಕರೆ ಮಾಡಿದರೂ ಆತ ಕರೆ ಸ್ವೀಕರಿಸಿಲ್ಲ. 'ನಾನು ನನ್ನ ಪತಿಗೆ ಸಾಕಷ್ಟು ಬಾರಿ ಕರೆ ಮಾಡಿದೆ. ಆದರೆ, ಅವರು ನನ್ನ ಕರೆಯನ್ನೇ ಸ್ವೀಕಾರ ಮಾಡಲಿಲ್ಲ. ಬಳಿಕ ನಾನು ನನ್ನ ಅತ್ತೆ ಹಾಗೂ ಮಾವನಿಗೆ ಕರೆ ಮಾಡಿ ಈ ವಿಚಾರ ತಿಳಿಸಿದೆ. ಅವರೂ ಕೂಡ ಮಗನಿಗೆ ಬೆಂಬಲ ನೀಡಿದರು. ಈ ಕುರಿತಾಗಿ ನಾನು ಪೊಲೀಸ್ ಠಾಣೆಗೆ ದೂರು ನೀಡಲು ತೀರ್ಮಾನಿಸಿದೆ ಎಂದು ಯುವತಿ ಹೇಳಿದ್ದಾಳೆ. ನ್ಯಾಯ ಕೊಡಿಸುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಯಯುವತಿ, ಪತಿ, ಅತ್ತೆ, ಮಾವ ಸೇರಿದಂತೆ ಐವರ ವಿರುದ್ಧ ದೂರು ನೀಡಿದ್ದಾಳೆ. ಕಾನ್ಪುರದ ಕುಲಿ ಬಜಾರ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಇಲ್ಲಿ ವಾಸ ಮಾಡುತ್ತಿದ್ದ ಲಾಲಿ ಗುಲ್ಸಾಬ ಎನ್ನುವ ಮಹಿಳೆ 2022ರ ಜನವರಿ 17 ರಂದು ಪ್ರಯಾಗ್‌ರಾಜ್ ನಿವಾಸಿ ಸಲೀಂನನ್ನು ವಿವಾಹವಾಗಿದ್ದರು.
ಮದುವೆಯಾದ ಬಳಿಕ ಲಾಲಿ ಗುಲ್ಸಾಬ ಕುಟುಂಬವು ಪ್ರಯಾಗರಾಜ್‌ನ ಫುಲ್‌ಪುರದಲ್ಲಿ ವಾಸಿಸುತ್ತಿದೆ. ಆದರೆ, ಸಲೀಂ ಸೌದಿ ಅರೇಬಿಯಾದಲ್ಲಿ ವಾಸ ಮಾಡುತ್ತಿದ್ದು, ಅಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ವರದಕ್ಷಿಣೆಗಾಗಿ ಅತ್ತೆಯಂದಿರು ಕಿರುಕುಳ ನೀಡುತ್ತಿದ್ದಾರೆ ಎಂದು ಲಾಲಿ ಗುಲ್ಸಾಬ ಆರೋಪಿಸಿದ್ದಾರೆ.
ಮಹಿಳೆ ನೀಡಿರುವ ದೂರಿನ ಪ್ರಕಾರ, 2023ರ ಆಗಸ್ಟ್ 30 ರಂದು ಸಲೀಂ ಕೆಲಸಕ್ಕಾಗಿ ಸೌದಿ ಅರೇಬಿಯಾಕ್ಕೆ ಹೋಗಿದ್ದರು. ಆದರೆ, ಮದುವೆಯಾದ ದಿನದಿಂದಲೂ ಅತ್ತ-ಮಾವ ವರದಕ್ಷಿಣೆಗಾಗಿ ಕಿರುಕುಳ ನೀಡಲು ಆರಂಭಿಸಿದ್ದರು. ಕೆಲ ದಿನಗಳ ಹಿಂದೆಯಷ್ಟೇ ಆಕೆ ತನ್ನ ಪೋಷಕರ ಮನೆಗೆ ಬಂದಿದ್ದಳು. ಇಲ್ಲಿಂದ ಕೂಡ ಅದೇ ಸಲೀಂ ಜೊತೆ ವಿಡಿಯೋ ಕಾಲ್ ಮೂಲಕ ಮಾತನಾಡುತ್ತಿದ್ದಳು. ನಂತರ ಅಕ್ಟೋಬರ್ 4 ರಂದು, ಸಲೀಂ ಆಕೆಗೆ ವೀಡಿಯೊ ಕರೆ ಮಾಡಿದ್ದ. ಈ ವೇಳೆ ಪತ್ನಿಯನ್ನು ನೋಡಿದ ಸಲೀಂ, ಐಬ್ರೋ ಮಾಡಿಸಿಕೊಂಡಿದ್ದೀಯಾ ಎಂದು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಗುಲ್ಸಾಬಾ ಹೌದು ಬ್ಯೂಟಿ ಪಾರ್ಲರ್‌ಗೆ ತೆರಳಿ ಐಬ್ರೋ ಮಾಡಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ. ಕೇಳಿದ ತಕ್ಷಣವೇ ಸಲೀಂಗೆ ಕೋಪ ನೆತ್ತಿಗೇರಿದೆ.
'ನನ್ನ ಪತಿ ಸ್ವಲ್ಪ ಹಳೆ ಫ್ಯಾಷನ್‌ನವರು. ನಾನು ಮೇಕಪ್ ಮಾಡುವುದು ಮತ್ತು ಬ್ಯೂಟಿ ಪಾರ್ಲರ್‌ಗೆ ಹೋಗುವುದು ಅವರಿಗೆ ಇಷ್ಟವಿಲ್ಲ. ನಾನು ಐಬ್ರೋ ಮಾಡಿಸಿಕೊಂಡಿದ್ದರಿಂದ ಕೆಲಸ ಸಮಯ ಸಿಟ್ಟಾಗಿರಬಹುದು. ಆಮೇಲೆ ಸರಿ ಆಗುತ್ತಾರೆ ಎಂದು ಭಾವಿಸಿದ್ದೆ. ಆದರೆ, ಅದು ಆಗಲಿಲ್ಲ. ಇನ್ನೊಮ್ಮೆ ಅವರೊಂದಿಗೆ ಮಾತನಾಡಿದಾಗ ಈ ವಿಚಾರವಾಗಿ ಜಗಳ ಆರಂಭಿಸಿ ನಾನು ನಿನಗೆ ತ್ರಿವಳಿ ತಲಾಖ್ ನೀಡುತ್ತಿದ್ದೇನೆ ಎಂದಿದ್ದರು. ಇದಾದ ಬಳಿಕ ಫೋನ್ ಡಿಸ್ಕನೆಕ್ಟ್ ಮಾಡಿದ್ದಾರೆ. ನಾನು ಅವರಿಗೆ ಆ ಬಳಿಕ ಹಲವಾರು ಬಾರಿ ಕರೆ ಮಾಡಿದೆ, ಆದರೆ ಅವನು ನನ್ನ ಕರೆಯನ್ನು ಸ್ವೀಕರಿಸಲಿಲ್ಲ. ನಂತರ ನಾನು ಈ ಬಗ್ಗೆ ನನ್ನ ಅತ್ತೆಯ ಬಳಿ ಮಾತನಾಡಿದಾಗ ಅವರೂ ನನ್ನ ಪತಿಯನ್ನು ಬೆಂಬಲಿಸಲು ಪ್ರಾರಂಭಿಸಿದರು. ನಮ್ಮ ಮಗ ಏನೇ ಮಾಡಿದರೂ ಸರಿ ಎಂದು ಹೇಳಿದ್ದರು.
ಮದುವೆಯಾದ 12 ಗಂಟೆಗಳಲ್ಲಿಯೇ ವರನಿಗೆ ಖುಲಾ ನೀಡಿದ ವಧು!
ಪತ್ನಿಯ ದೂರಿನ ಆಧಾರದ ಮೇಲೆ ಪತಿ, ಆತನ ತಾಯಿ ಸೇರಿದಂತೆ ಐವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಬಸಾಯಿ ನಾಕಾದ ಎಸಿಪಿ ನಿಶಾಂಕ್ ಶರ್ಮಾ ಹೇಳಿದ್ದಾರೆ. ಪ್ರಕರಣದಲ್ಲಿ ತನಿಖೆ ನಡೆಯುತ್ತಿದೆ.
ವಿದೇಶದಿಂದಲೇ ಪತ್ನಿಗೆ ವಾಟ್ಸಾಪ್ ಮೂಲಕ ತ್ರಿವಳಿ ತಲಾಖ್ ನೀಡಿದ ಪತಿ!