ಬೆಂಗಳೂರು (ಅ.17):  ಮಾದಕ ವಸ್ತು ಮಾರಾಟ ಜಾಲ ಪ್ರಕರಣ ಸಂಬಂಧ ಸಿಸಿಬಿ ವಿಚಾರಣೆಗೆ ಪ್ರಮುಖ ಆರೋಪಿಯಾಗಿರುವ ಆದಿತ್ಯ ಆಳ್ವನ ಸೋದರಿ ಹಾಗೂ ಬಾಲಿವುಡ್‌ ನಟ ವಿವೇಕ್‌ ಒಬೆರಾಯ್‌ ಪತ್ನಿ ಪ್ರಿಯಾಂಕಾ ಆಳ್ವ ಶುಕ್ರವಾರ ಗೈರಾಗಿದ್ದಾರೆ.

 ತಮ್ಮ ಸೋದರನಿಗೆ ಆಶ್ರಯ ನೀಡಿದ ಆರೋಪ ಎದುರಿಸುತ್ತಿರುವ ಪ್ರಿಯಾಂಕಾ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟಿಸ್‌ ನೀಡಿತ್ತು. ಮುಂಬೈನ ಜುಹು ಪ್ರದೇಶದಲ್ಲಿರುವ ಅವರ ಮನೆ ಮೇಲೆ ಗುರುವಾರ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ಕೂಡ ಮಾಡಿದ್ದರು.

ನಟ ವಿವೇಕ್ ಒಬೆರಾಯ್ ಮನೆಗೆ ಬೆಂಗಳೂರು ಪೊಲೀಸ್‌ ದಾಳಿ..!  

ಈ ವೇಳೆ ನೋಟಿಸ್‌ ಸ್ವೀಕರಿಸಲು ನಿರಾಕರಿಸಿದ ಪ್ರಿಯಾಂಕಾ ಅವರಿಗೆ ವ್ಯಾಟ್ಸ್‌ ಆ್ಯಪ್‌ ಮೂಲಕ ಸಿಸಿಬಿ ಅಧಿಕಾರಿಗಳು ನೋಟಿಸ್‌ ಜಾರಿಗೊಳಿಸಿದ್ದರು. ಹೀಗಿದ್ದರೂ ಅವರು ವಿಚಾರಣೆಗೆ ಗೈರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಚಾರಣೆ ಗೈರಿಗೆ ನಿಖರ ಕಾರಣವನ್ನು ಪ್ರಿಯಾಂಕಾ ಆಳ್ವ ತಿಳಿಸಿಲ್ಲ. 

ಹೀಗಾಗಿ ಅವರಿಂದ ಪ್ರಕರಣದಲ್ಲಿ ಹೇಳಿಕೆ ದಾಖಲಿಸಿಕೊಳ್ಳಬೇಕಿದೆ. ಅಗತ್ಯವಾಗಿ ನೀವು ತನಿಖಾಧಿಕಾರಿಗಳ ಮುಂದೆ ಹಾಜರಾಗಿ ವಿವರಣೆ ನೀಡಬೇಕು ಎಂದು ಮತ್ತೆ ನೋಟಿಸ್‌ ನೀಡಲಾಗುತ್ತದೆ. ಆಗಲೂ ಪ್ರಿಯಾಂಕಾ ಗೈರಾದರೆ ಕಾನೂನು ರೀತ್ಯ ಕ್ರಮ ಜರುಗಿಸಲಾಗುತ್ತದೆ ಎಂದು ಸಿಸಿಬಿ ಅಧಿಕಾರಿಗಳು ಹೇಳಿದ್ದಾರೆ.