ಲಕ್ನೋ, (ಮಾ.09): ಮದುವೆಯಾದ ಮೂರೇ ದಿನಕ್ಕೆ  ಪತ್ನಿ ಗರ್ಭಿಣಿಯಾಗಿರುವ ವಿಚಾರ ತಿಳಿದು ಪತಿ ಶಾಕ್ ಆಗಿರುವ ಘಟನೆ ಉತ್ತರ ಪ್ರದೇಶದ ಬುಲಂದ್‍ಶಹರ್ ಜಿಲ್ಲೆಯ ನೈಮಂಡಿ ಚೌಕಿ ಗ್ರಾಮದ ಬೆಳಕಿಗೆ ಬಂದಿದೆ.

ಮದುವೆಯಾದ 3 ದಿನಕ್ಕೆ ಹೊಟ್ಟೆ ನೋವು ಬಂದ ಕಾರಣ ಯುವತಿ ಗರ್ಭಿಣಿ ಎಂಬ ಸತ್ಯಾಂಶ ಹೊರಬಂದಿದೆ.

ಬುಲಂದ್‍ಶಹರ್ ಜಿಲ್ಲೆಯ ನೈಮಂಡಿ ಚೌಕಿ ಗ್ರಾಮದ  ಸಂತೋಷ್ ಕುಮಾರ್  ಎನ್ನುವಾತ ಫೆಬ್ರವರಿ 15 ರಂದು ಮದುವೆಯಾಗಿದ್ದಾನೆ. ವಿವಾಹವಾದ 3ನೇ ದಿನಕ್ಕೆ ಪತ್ನಿ ಹೊಟ್ಟೆ ನೋವಿನಿಂದ ಬಳಲಿದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, 2 ತಿಂಗಳ ಗರ್ಭಿಣಿ ಎಂದು ವೈದ್ಯರು ತಿಳಿಸಿದ್ದಾರೆ.

ಅತ್ತ 3 ಮಕ್ಕಳ ತಾಯಿ ಜೊತೆ 23ರ ಯುವಕ ಪರಾರಿ, ಇತ್ತ ತಾಯಿ-ಮಗ ಬಲಿ

ಈ ವಿಷಯ ತಿಳಿಯುತ್ತಿದ್ದಂತೆಯೇ ಗಂಡನಿಗೆ  ದಿಗ್ಬ್ರಮೆಯಾಗಿದ್ದು, ಮದ್ವೆಯಾಗಿ ಮೂರೇ ದಿನದಲ್ಲಿ 2 ತಿಂಗಳ ಗರ್ಭಿಣಿಯಾಗಲು ಹೇಗೆ ಸಾಧ್ಯ ಎಂದು ಕುಟುಂಬದವರು ತಲೆಕೆಡಿಸಿಕೊಂಡಿದ್ದಾರೆ. 

ನಂತರ ತಾನು ಮೋಸ ಹೋಗಿದ್ದೇನೆ ಎಂದು ಅರಿತುಕೊಂಡ ಪತಿ, ನಡೆದ ಘಟನೆಯ ಬಗ್ಗೆ ಪತ್ನಿಯ ಬಳಿ ಪ್ರಶ್ನಿಸಿದ್ದಾನೆ. ಆಗ ಪತ್ನಿ ಸತ್ಯವನ್ನು ಎಳೆ-ಎಳೆಯಾಗಿ ಬಿಚ್ಚಿಟ್ಟಿದ್ದಾಳೆ.

ಯುವತಿ ಹೇಳಿದ್ದೇನು..?
ಯುವತಿ ಮದುವೆಗೂ ಮುನ್ನ ಬುಲಂದ್‍ಶಹರ್ ಜಿಲ್ಲೆಯ ಸಿಕಂದರಾಬಾದ್‍ನ ಅಲಿಘರ್ ಗ್ರಾಮದ ಯುವಕನನ್ನು ಪ್ರೀತಿಸುತ್ತಿದ್ದಾಗಿ ತಿಳಿಸಿದ್ದಾಳೆ. ಅಲ್ಲದೇ ಇಬ್ಬರು ದೈಹಿಕ ಸಂಪರ್ಕ ಹೊಂದಿದ್ದಾಗಿ ಸತ್ಯ ಬಾಯ್ಬಿಟ್ಟಿದ್ದಾಳೆ.

 ಈ ವಿಷಯ ಮನೆಯಲ್ಲಿ ತಿಳಿಯುತ್ತಿದ್ದಂತೆಯೇ ನಮ್ಮ ಪೋಷಕರು, ನಿಮ್ಮ ಜತೆ ಮದುವೆ ಮಾಡಿದ್ದಾರೆ ಎಂದು ಗಂಡನ ಮುಂದೆ ಹೇಳಿದ್ದಾಳೆ.

ಬಳಿಕ ತಾನು ಮೋಸ ಹೋಗಿದ್ದನ್ನು ಅರಿತುಕೊಂಡ ಪತಿ ನ್ಯಾಯಾಲಯದ ಮೊರೆ ಹೋಗಿದ್ದಾನೆ. ತನ್ನ ಪ್ರೇಮಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ ಬಳಿಕವೂ ಆಕೆ ನನ್ನನ್ನು ಮದುವೆಯಾಗಿದ್ದಾಳೆ. ಜೊತೆಗೆ ಆಕೆಯ ಕುಟುಂಬದವರು ಈ ವಿಚಾರವನ್ನು ಮುಚ್ಚಿಟ್ಟು ಮೋಸ ಮಾಡಿದ್ದಾರೆ ಎಂದು ದೂರು ಸಲ್ಲಿಸಿದ್ದಾನೆ. 

ಇತ್ತ ಯುವತಿ ಕೂಡ ತನ್ನ ಪ್ರಿಯಕರನ್ನು ಮದುವೆಯಾಗುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದು, ತನಗೆ ರಕ್ಷಣೆ ಬೇಕು ಎಂದು ಮನವಿ ಮಾಡಿಕೊಂಡಿದ್ದಾಳೆ. ಪ್ರಕರಣದ ವಿಚಾರಣೆ ನಡೆಸಿರುವ ನ್ಯಾಯಾಲಯ, ಸಮಸ್ಯೆ ಬಗೆಹರಿಯುವವರೆಗೂ ಆಕೆಗೆ ಜಿಲ್ಲಾ ಆಸ್ಪತ್ರೆಯ ಜ್ಯೋತಿ ಕೇಂದ್ರದಲ್ಲಿ ಆಶ್ರಯ ನೀಡುವಂತೆ ಆದೇಶಿಸಿದೆ.