ಉಮೇಶ್ ಪಾಲ್ ಕಿಡ್ನ್ಯಾಪ್ ಕೇಸ್: ಯುಪಿ ಗ್ಯಾಂಗ್‌ಸ್ಟರ್ ಅತೀಕ್ ಅಹಮದ್‌ಗೆ ಜೀವಾವಧಿ ಶಿಕ್ಷೆ
2006ರ ಉಮೇಶ್ ಪಾಲ್ ಅಪಹರಣ ಪ್ರಕರಣದಲ್ಲಿ ದರೋಡೆಕೋರ ಅತೀಕ್ ಅಹ್ಮದ್ ಮತ್ತು ಆತನ ಸಹೋದರ ಖಾಲಿದ್ ಅಜೀಂ ತಪ್ಪಿತಸ್ಥರೆಂದು ಪ್ರಯಾಗ್‌ರಾಜ್ ನ್ಯಾಯಾಲಯ ತೀರ್ಪು ನೀಡಿದೆ.
ಹೊಸದಿಲ್ಲಿ (ಮಾರ್ಚ್ 28, 2023): ಕಳೆದ ಕೆಲ ದಿನಗಳಿಂದ ದೇಶಾದ್ಯಂತ ಭಾರಿ ಕುತೂಹಲ ಮೂಡಿಸಿದ್ದ ಉತ್ತರ ಪ್ರದೇಶದ ಗ್ಯಾಂಗ್‌ಸ್ಟರ್ ಅತೀಕ್ ಅಹ್ಮದ್ ಮೇಲಿನ ಕೇಸ್‌ನಲ್ಲಿ ನ್ಯಾಯಾಲಯ ತೀರ್ಪು ನೀಡಿದೆ. 2006ರ ಉಮೇಶ್ ಪಾಲ್ ಅಪಹರಣ ಪ್ರಕರಣದಲ್ಲಿ ಗ್ಯಾಂಗ್‌ಸ್ಟರ್ ಅತೀಕ್ ಅಹ್ಮದ್ ತಪ್ಪಿತಸ್ಥರೆಂದು ಪ್ರಯಾಗ್‌ರಾಜ್ ನ್ಯಾಯಾಲಯ ತೀರ್ಪು ನೀಡಿದೆ. ಇಂದು ಮಧ್ಯಾಹ್ನ 2 ಗಂಟೆಯ ನಂತರ ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ. ಅತೀಕ್ ಅಹ್ಮದ್ ಜತೆಗೆ ಇತರ ಇಬ್ಬರನ್ನು ತಪ್ಪಿತಸ್ಥರು ಎಂದು ನ್ಯಾಯಾಧೀಶ ದಿನೇಶ್ ಚಂದ್ರ ಶುಕ್ಲಾ ಅವರು ತೀರ್ಪು ನೀಡಿದ್ದಾರೆ.
ಅತೀಕ್ ಅಹ್ಮದ್, ವಕೀಲ ಸೌಲತ್ ಹನೀಫ್ ಮತ್ತು ದಿನೇಶ್ ಪಾಸಿ ಅವರನ್ನು ಪ್ರಕರಣದಲ್ಲಿ ತಪ್ಪಿತಸ್ಥರು ಎಂದು ಸರ್ಕಾರಿ ವಕೀಲ ಗುಲಾಬ್ ಚಂದ್ರ ಅಗ್ರಹರಿ ಹೇಳಿದ್ದರೆ. ಆದರೆ, ಅತೀಕ್ ಅಹ್ಮದ್ ಸಹೋದರ ಖಾಲಿದ್ ಅಜೀಂ ಅಲಿಯಾಸ್ ಅಶ್ರಫ್ ಸೇರಿದಂತೆ ಏಳು ಮಂದಿಯನ್ನು ಖುಲಾಸೆಗೊಳಿಸಲಾಗಿದೆ ಎಂದು ಅವರು ಹೇಳಿದರು.
ಈ ಹಿಂದೆ, ಯುಪಿ ಪೊಲೀಸ್ ಕಸ್ಟಡಿಯಲ್ಲಿ ರಕ್ಷಣೆ ನೀಡುವಂತೆ ಅತೀಕ್ ಅಹ್ಮದ್ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು. 2006ರಲ್ಲಿ ಬಿಎಸ್‌ಪಿ ಶಾಸಕ ರಾಜುಪಾಲ್ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿ ಉಮೇಶ್ ಪಾಲ್ ಅವರ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಅತೀಕ್ ಅಹ್ಮದ್ ಮತ್ತು ಆತನ ಸಹೋದರ ಇಂದು ಪ್ರಯಾಗ್‌ರಾಜ್ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಆದರೂ, ಯುಪಿ ಪೋಲೀಸರ ಕಸ್ಟಡಿಯಲ್ಲಿ ತನ್ನ ಜೀವಕ್ಕೆ ಬೆದರಿಕೆ ಇದೆ ಎಂದು ಹೇಳಿಕೊಂಡ ನಂತರ, ರಕ್ಷಣೆಗಾಗಿ ಅಲಹಾಬಾದ್ ಹೈಕೋರ್ಟ್ ಅನ್ನು ಸಂಪರ್ಕಿಸಲು ಅತೀಕ್ ಅಹ್ಮದ್ ಅವರಿಗೆ ಸುಪ್ರೀಂ ಕೋರ್ಟ್ ಪೀಠ ಅನುಮತಿ ನೀಡಿದೆ.
ಇದನ್ನು ಓದಿ: ಯುಪಿಯಲ್ಲಿ ಮತ್ತೊಂದು ಎನ್‌ಕೌಂಟರ್: ಉಮೇಶ್ ಪಾಲ್‌ಗೆ ಮೊದಲು ಗುಂಡು ಹಾರಿಸಿದ್ದ ಆರೋಪಿ ಗುಂಡೇಟಿಗೆ ಬಲಿ
"ಇದು ಈ ನ್ಯಾಯಾಲಯವು ಮಧ್ಯಪ್ರವೇಶಿಸುವ ಪ್ರಕರಣವಲ್ಲ. ಹೈಕೋರ್ಟ್‌ಗೆ ಸೂಕ್ತ ಅರ್ಜಿಯನ್ನು ಸಲ್ಲಿಸಲು ಸ್ವಾತಂತ್ರ್ಯ ನೀಡಲಾಗಿದೆ. ಕಾನೂನಿನಡಿಯಲ್ಲಿ ಸೂಚಿಸಲಾದ ಯಾವುದೇ ಪ್ರಕ್ರಿಯೆಯನ್ನು ಅನುಸರಿಸಲಾಗುವುದು" ಎಂದು ಸುಪ್ರೀಂ ಕೋರ್ಟ್ ಪೀಠವು ಸುದ್ದಿ ಸಂಸ್ಥೆ ಪಿಟಿಐ ಉಲ್ಲೇಖಿಸಿ ಹೇಳಿದೆ.
ಗುಜರಾತ್‌ನಿಂದ 24 ಗಂಟೆಗಳ ಪ್ರಯಾಣದ ನಂತರ, ಅತೀಕ್ ಅಹ್ಮದ್ ಮತ್ತು ಅವರ ಸಹೋದರನನ್ನು ಸೋಮವಾರ ಭಾರಿ ಭದ್ರತೆಯ ನಡುವೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿರುವ ನೈನಿ ಕೇಂದ್ರ ಕಾರಾಗೃಹಕ್ಕೆ ಕರೆತರಲಾಯಿತು.
ಇದನ್ನೂ ಓದಿ: 'ಮಾಫಿಯಾದವರನ್ನ ಹೂತುಹಾಕ್ತೇನೆ..' ಯುಪಿ ವಿಧಾನಸಭೆಯಲ್ಲಿ 'ಉಗ್ರಂ ವೀರಂ' ಆದ ಯೋಗಿ ಆದಿತ್ಯನಾಥ್!
ಈ ಮಧ್ಯೆ, ಉಮೇಶ್ ಪಾಲ್ ಅಪಹರಣ ಪ್ರಕರಣದ ವಿಚಾರಣೆ ನಿಗದಿಯಾಗಿದ್ದ ಪ್ರಯಾಗ್‌ರಾಜ್‌ನ ಸ್ಥಳೀಯ ನ್ಯಾಯಾಲಯದ ಹೊರಗೆ ದೊಡ್ಡ ಜನಸಂದಣಿ ಕಂಡುಬಂದಿತು. ಭಾರಿ ಭದ್ರತೆಯ ನಡುವೆ ಅತೀಕ್ ಅಹ್ಮದ್ ಅವರನ್ನು ನ್ಯಾಯಾಲಯಕ್ಕೆ ಕರೆತರಲಾಯಿತು. ರಸ್ತೆಯ ಇಕ್ಕೆಲಗಳಲ್ಲಿ ಜನಸಂದಣಿ ಸೇರುತ್ತಿರುವಾಗ ದೊಡ್ಡ ವ್ಯಾನ್‌ಗಳಲ್ಲಿ ಗ್ಯಾಂಗ್‌ಸ್ಟರ್ - ರಾಜಕಾರಣಿಯನ್ನು ಪೊಲೀಸರು ಕರೆದೊಯ್ದಿದ್ದಾರೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಸಹ ವೈರಲ್ ಆಗಿದೆ.
2005ರಲ್ಲಿ ಬಿಎಸ್‌ಪಿ ಶಾಸಕ ರಾಜು ಪಾಲ್ ಕೊಲೆಯಾಗಿದ್ದರು. ಉಮೇಶ್ ಪಾಲ್ ಎಂಬುವರು ಕೊಲೆಗೆ ನಾನೇ ಸಾಕ್ಷಿ ಎಂದು ಪೊಲೀಸರಿಗೆ ದೂರು ನೀಡಿದ್ದರು. 2006ರಲ್ಲಿ ಅತೀಕ್ ಅಹ್ಮದ್ ಅವರ ಒತ್ತಡಕ್ಕೆ ಮಣಿದು ಪೊಲೀಸರಿಗೆ ನೀಡಿದ ಹೇಳಿಕೆಯನ್ನು ಹಿಂಪಡೆಯಲು ನಿರಾಕರಿಸಿದಾಗ ಗನ್ ತೋರಿಸಿ ತನ್ನನ್ನು ಅಪಹರಿಸಲಾಗಿತ್ತು ಎಂದು ಉಮೇಶ್ ಪಾಲ್ ಆರೋಪಿಸಿದ್ದಾರೆ. ಈ ಸಂಬಂಧ ಪೊಲೀಸರು ಅತೀಕ್ ಅಹ್ಮದ್, ಆತನ ಸಹೋದರ ಮತ್ತು ಇತರ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.
ಇದನ್ನೂ ಓದಿ: ಹತ್ರಾಸ್ ಗ್ಯಾಂಗ್‌ರೇಪ್, ಕೊಲೆ ಕೇಸ್: ಮೂವರನ್ನು ಖುಲಾಸೆಗೊಳಿಸಿದ ಕೋರ್ಟ್; ಒಬ್ಬರು ಮಾತ್ರ ದೋಷಿ
2007 ರಲ್ಲಿ ಉಮೇಶ್ ಪಾಲ್ ಅವರನ್ನು ಪ್ರಯಾಗ್‌ರಾಜ್‌ನಲ್ಲಿರುವ ಅವರ ನಿವಾಸದ ಹೊರಗೆ ಗುಂಡಿಕ್ಕಿ ಕೊಲ್ಲಲಾಗಿತ್ತು.