ಬೆತ್ತಲೆ ಫೋಟೋ ವೈರಲ್ ಬೆದರಿಕೆ: ಸ್ನೇಹಿತರ ಕಾಟಕ್ಕೆ ಕಂಗಾಲಾದ ಯುವತಿ..!
ಹಣ, ಒಡವೆ ಪಡೆದರೂ ಪದೇ ಪದೆ ಬ್ಲ್ಯಾಕ್‌ಮೇಲ್| ಸಂತ್ರಸ್ತ ಯುವತಿಯಿಂದ ಪೊಲೀಸರಿಗೆ ದೂರು| ಸ್ನೇಹಿತರಿಬ್ಬರ ಬಂಧಿಸಿದ ಅಮೃತಹಳ್ಳಿ ಪೊಲೀಸರು|
ಬೆಂಗಳೂರು(ಜ.21): ಯುವತಿಯ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ 3 ವರ್ಷಗಳಿಂದ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಅಮೃತಹಳ್ಳಿ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
19 ವರ್ಷದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಈಕೆಯ ಸ್ನೇಹಿತರಾದ ದೇವಸಂದ್ರ ನಿವಾಸಿಗಳಾದ ಬ್ರಿಜ್ ಭೂಷಣ್ ಯಾದವ್ (21) ಮತ್ತು ವಿವೇಕ್ ರೆಡ್ಡಿ (20) ಎಂಬುವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಕೆ.ಆರ್.ಪುರದ ಖಾಸಗಿ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿರುವ ಯುವತಿಗೆ ಆರೋಪಿ ಬ್ರಿಜ್‌ಭೂಷಣ್ ಪರಿಚಯವಾಗಿತ್ತು. ಬಳಿಕ ಇಬ್ಬರು ಸ್ನೇಹಿತರಾಗಿದ್ದರು. ಆರೋಪಿ ಪದೇ ಪದೆ ಸಂತ್ರಸ್ತೆಯ ಮನೆಗೆ ಬರುತ್ತಿದ್ದ. ಅನಂತರ ಯುವತಿ ಆರೋಪಿಯಿಂದ ಅಂತರ ಕಾಯ್ದುಕೊಂಡು, ಮಾತನಾಡುವುದನ್ನು ಬಿಟ್ಟಿದ್ದರು. ಈ ನಡುವೆ ಆರೋಪಿ 2018ರಲ್ಲಿ ‘ನನ್ನ ಬಳಿ ನಿನ್ನ ಬೆತ್ತಲೆ ಫೋಟೋಗಳಿವೆ. ಹಣ, ಚಿನ್ನಾಭರಣ ಕೊಡದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ಆ ಫೋಟೋಗಳನ್ನು ಹಾಕುತ್ತೇನೆ’ ಎಂದು ಬೆದರಿಕೆಯೊಡ್ಡುತ್ತಿದ್ದ. ಇದರಿಂದ ಆತಂಕಗೊಂಡ ಯುವತಿ ಮನೆಯಲ್ಲಿದ್ದ 218 ಗ್ರಾಂ ಚಿನ್ನಾಭರಣ, 75 ಸಾವಿರ ರು. ನಗದು ಕೊಟ್ಟಿದ್ದರು.
ಪತ್ನಿಯ ಅಶ್ಲೀಲ ಫೋಟೋ ತೆಗೆದು ಗಂಡನ ವಿಕೃತಿ
ಯುವತಿಯ ಅಸಹಾಯಕತೆಯನ್ನು ದುರ್ಬಳಕೆ ಮಾಡಿಕೊಳ್ಳಲು ಯತ್ನಿಸಿದ್ದ ಬ್ರಿಜ್ ಭೂಷಣ್‌ನ ಸ್ನೇಹಿತ ವಿವೇಕ್ ರೆಡ್ಡಿ 2019ರಲ್ಲಿ ಫೇಸ್‌ಬುಕ್‌ನಲ್ಲಿ ಯುವತಿಯೊಂದಿಗೆ ಚಾಟ್ ಮಾಡುತ್ತಿದ್ದ. ಬಳಿಕ ರಾಚೇನಹಳ್ಳಿ ಕೆರೆ ಬಳಿ ಕರೆಸಿಕೊಂಡು ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದ. ಒಮ್ಮೆ ಕರೆ ಮಾಡಿ ‘ನಿನ್ನ ಖಾಸಗಿ ಫೋಟೋ’ ಇದೆ ಎಂದು ಬೆದರಿಸಿ, ಹಣ, ಒಡವೆ ಕೊಡದಿದ್ದರೆ ಖಾಸಗಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡುತ್ತೇನೆ ಎಂದು ಬೆದರಿಸಿದ್ದ. ಇದರಿಂದ ಹೆದರಿದ ಸಂತ್ರಸ್ತೆ, ತನ್ನ ಮಾವನ ಪತ್ನಿಯ ಮಾಂಗಲ್ಯ ಸರ ತಂದು ಕೊಟ್ಟಿದ್ದರು. ಆದರೂ ಆರೋಪಿಗಳು ಪದೇ ಪದೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದರು. ಇದರಿಂದ ಬೇಸತ್ತ ಸಂತ್ರಸ್ತೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.