ಮುಂಬೈ(ಏ.23): ದೇಶದಲ್ಲಿ ಮುಂದುವರೆದ ಕೊರೋನಾ ಅಟ್ಟಹಾಸದ ನಡುವೆ ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಹಾಗೂ ಖ್ಯಾತ ಪರ್ತಕರ್ತ ಅರ್ನಬ್ ಗೋಸ್ವಾಮಿ ಹಾಗೂ ಅವರ ಪತ್ನಿ ಮೇಲೆ ಹಲ್ಲೆ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಖುದ್ದು ಅರ್ನಬ್ ಗೋಸ್ವಾಮಿ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಪೊಲೀಸ್ ದೂರು ದಾಖಲಿಸಿದ್ದು, ತನಿಖೆ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ತಡರಾತ್ರಿ ಸ್ಟುಡಿಯೋದಿಂದ ಮನೆಗೆ ಮರಳುತ್ತಿದ್ದ ವೇಳೆ ಈ ದಾಳಿ ನಡೆದಿದೆ.

ಕೂದಲೆಳೆ ಅಂತರದಲ್ಲಿ ಪಾರಾದ ಅರ್ನಬ್ ಹಾಗೂ ಅವರ ಪತ್ನಿ

ಹಲ್ಲೆಯಿಂದ ಪಾರಾದ ಅರ್ನಬ್ ಗೋಸ್ವಾಮಿ, ಘಟನೆ ಸಂಬಂಧ ಸಂಪೂರ್ಣ ಮಾಹಿತಿ ಬಿಚ್ಚಿಟ್ಟಿದ್ದು, ರಾತ್ರಿ ವೇಳೆ ಸ್ಟುಡಿಯೋದಿಂದ ಮನೆಗೆ ತೆರಳುತ್ತಿದ್ದ ವೇಳೆ ಇಬ್ಬರು ಏಕಾಏಕಿ ತಾವಿದ್ದ ಕಾರಿನ ಮೇಲೆ ದಾಳಿ ನಡೆಸಿದ್ದಾರೆ. ಈ ಸಂಬಂಧ ಪೊಲಿಸರಿಗೆ ದೂರು ನೀಡಿರುವುದಾಗಿ ತಿಳಿಸಿದ್ದಾರೆ. ಈ ದಾಳಿಯಲ್ಲಿ ಅರ್ನಬ್ ಹಾಗೂ ಅವರ ಪತ್ನಿ ಪಿಪಿ ಗೋಸ್ವಾಮಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಈ ಘಟನೆ ರಾತ್ರಿ ಸುಮಾರು 12 ಗಂಟೆ 15 ನಿಮಿಷ ಸಮಯಕ್ಕೆ ನಡೆದಿದೆ ಎಂದು ಪತ್ರಕರ್ತ ಅರ್ನಬ್ ಗೋಸ್ವಾಮಿ ತಿಳಿಸಿದ್ದಾರೆ.

ಬಾಟಲಿಯಲ್ಲಿದ್ದ ದ್ರವ ಎಸೆದಿದ್ದ ದುಷ್ಕರ್ಮಿಗಳು

ಘಟನೆ ಕುರಿತು ಉಲ್ಲೇಖಿಸಿದ ಅರ್ನಬ್ ಗೋಸ್ವಾಮಿ ಕಾರಿನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಬೈಕಿನಲ್ಲಿ ಬಂದ ಇಬ್ಬರು ದುರ್ಷರ್ಮಿಗಳು ಕಾರಿನ ಪಕ್ಕ ಬಂದು ನಮ್ಮೆಡೆ ಕೈ ತೋರಿಸಿ ಅದೇನೋ ಹೇಳುತ್ತಿದ್ದರು. ಅಲ್ಲದೇ ಕಾರಿನ ಗಾಜಿಗೆ ಜೋರಾಗಿ ಹೊಡೆಯಲಾರಂಭಿಸಿದರು. ನಾವು ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ನಮ್ಮ ಮೇಲೆ ಅದ್ಯಾವುದೋ ದ್ರವ ಪದಾರ್ಥ ಎಸೆಯಲಾರಂಭಿಸಿದರು ಎಂದಿದ್ದಾರೆ.

ಅರ್ನಬ್ ಆಯ್ತು, ಈಗ ಪೋಸ್ಟ್‌ ಕಾರ್ಡ್ ಸಂಪಾದಕನಿಗೆ ಅವಮಾನ

FIR ರಿಜಿಸ್ಟರ್ ಇಬ್ಬರು ಅರೆಸ್ಟ್

ಮುಂಬೈ ಝೋನ್ 3ರ ಡಿಸಿಪಿ ಈ ಸಂಬಂಧ ಪ್ರತಿಕ್ರಿಯಿಸಿದ್ದು, ಅರ್ನಬ್ ಹಾಗೂ ಅವರ ಪತ್ನಿ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಇಬ್ಬರನ್ನು ಅರೆಸ್ಟ್ ಮಾಡಲಾಗಿದೆ. ಇಬ್ಬರ ವಿರುದ್ಧ ಎನ್‌. ಎಂ. ಜೋಶಿ ರಸ್ತೆ ಪೊಲಿಸ್ ಸ್ಟೇಷನ್‌ನಲ್ಲಿ ಐಪಿಸಿ ಸೆಕ್ಷನ್ 341 ಹಾಗೂ 504ರ ಅಡಿಯಲ್ಲಿ FIR ದಾಖಲಿಸಲಾಗಿದೆ ಎಂದಿದ್ದಾರೆ.