ಸಚಿವ ಭೋಸರಾಜು ಆಪ್ತ ಸಹಾಯಕರ ಸೋಗಲ್ಲಿ ವಂಚನೆ: ಇಬ್ಬರ ಬಂಧನ
ಸಚಿವ ಭೋಸರಾಜು ಅವರ ಆಪ್ತ ಸಹಾಯಕರು ಎಂದು ಹೇಳಿಕೊಂಡು ಸರ್ಕಾರಿ ಅಧಿಕಾರಿಯೊಬ್ಬರಿಂದ ಹಣ ಪಡೆದು ವಂಚಿಸಿದ್ದ ಆರೋಪಿಗಳಿಬ್ಬರನ್ನು ಬಂಧಿಸಿದ ಪೊಲೀಸರು
ಮಡಿಕೇರಿ(ನ.23): ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಭೋಸರಾಜು ಅವರ ಆಪ್ತ ಸಹಾಯಕರು ಎಂದು ಹೇಳಿಕೊಂಡು ಸರ್ಕಾರಿ ಅಧಿಕಾರಿಯೊಬ್ಬರಿಂದ ಹಣ ಪಡೆದು ವಂಚಿಸಿದ್ದ ಆರೋಪಿಗಳಿಬ್ಬರನ್ನು ಬಂಧಿಸಲಾಗಿದೆ.
ಮೈಸೂರು ನಿವಾಸಿಗಳಾದ ರಘುನಾಥ (34) ಮತ್ತು ಶಿವಮೂರ್ತಿ (35) ಬಂಧಿತರು. ಕುಶಾಲನಗರ ತಾಲೂಕಿನ ಕಂದಾಯ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಎಚ್.ಎನ್. ಸಂತೋಷ್ ಎಂಬುವರ ಮೊಬೈಲ್ ಗೆ ನ.19 ರಂದು ರಾತ್ರಿ 9 ಗಂಟೆ ಸಮಯದಲ್ಲಿ ಇವರು ಕರೆ ಮಾಡಿ, ತಾವು ಸಚಿವರ ಆಪ್ತ ಸಹಾಯಕರು. ತಮಗೆ ತುರ್ತಾಗಿ 20 ಸಾವಿರ ರೂ. ಹಣದ ಅವಶ್ಯಕತೆಯಿದ್ದು, ಗೂಗಲ್ ಪೇ ಮೂಲಕ ಕಳುಹಿಸಿಕೊಡು. ಹಣವನ್ನು ಆದಷ್ಟು ಬೇಗ ಹಿಂತಿರುಗಿಸುತ್ತೇವೆ ಎಂದು ಹೇಳಿದ್ದರು.
ಪತ್ನಿಯ ಶೀಲ ಶಂಕಿಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪತಿರಾಯ!
ಅವರ ಮಾತನ್ನು ನಂಬಿದ ಕಂದಾಯ ನಿರೀಕ್ಷಕ ಸಂತೋಷ್, 20 ಸಾವಿರವನ್ನು ಗೂಗಲ್ ಪೇ ಮೂಲಕ ಕಳುಹಿಸಿದ್ದರು. ಮರುದಿನ ಹಣದ ವಿಚಾರವಾಗಿ ಸಂತೋಷ್ ಅವರು ಸಚಿವರ ಕಚೇರಿಯಲ್ಲಿ ಪ್ರಸ್ತಾಪಿಸಿದಾಗ ಹಣ ಪಡೆದವರ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದರು. ಬಳಿಕ, ತಾವು ವಂಚನೆಗೊಳಗಾಗಿರುವುದನ್ನು ಅರಿತ ಅಧಿಕಾರಿ ಸಂತೋಷ್, ಪೊಲೀಸರಿಗೆ ದೂರು ದಾಖಲಿಸಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರು, ಆರೋಪಿಗಳನ್ನು ಬಂಧಿಸಿದ್ದಾರೆ.