ಬೆಂಗಳೂರು: ಬೈಕ್ ಕಳ್ಳರ ಸುಳಿವು ಕೊಟ್ಟ ಜಿಪಿಎಸ್..!
ವೀಲ್ಹಿಂಗ್ ಶೋಕಿಗಾಗಿ ಡ್ಯೂಕ್ ಬೈಕ್ ಕಳವು, ನೆಲಮಂಗಲದಲ್ಲಿ ನಿಲ್ಲಿಸಿದ್ದ ಕಳ್ಳರು
ಬೆಂಗಳೂರು(ನ.26): ವ್ಹೀಲಿಂಗ್ ಶೋಕಿಗಾಗಿ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ನಂದಿನಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ನೆಲಮಂಗಲದ ಅಮೃತಗೌಡ(19) ಮತ್ತು ಶ್ರೀನಿವಾಸ(23) ಬಂಧಿತರು. ಆರೋಪಿಗಳಿಂದ .2 ಲಕ್ಷ ಮೌಲ್ಯದ ನಾಲ್ಕು ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ನಂದಿನಿ ಲೇಔಟ್‌ನ ಲಕ್ಷ್ಮೇದೇವಿ ನಗರದ ನಿವಾಸಿಯೊಬ್ಬರು ತಮ್ಮ ಮನೆ ಎದುರು ನಿಲುಗಡೆ ಮಾಡಿದ್ದ ಕೆಟಿಎಂ ಡ್ಯೂಕ್ ಕಳ್ಳತನವಾಗಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿಗಳು ವಿದ್ಯಾಭ್ಯಾಸ ಅರ್ಧಕ್ಕೆ ಮೊಟಕುಗೊಳಿಸಿದ್ದು, ಸಣ್ಣಪುಟ್ಟಕೆಲಸ ಮಾಡಿಕೊಂಡಿದ್ದರು. ಬಳಿಕ ಕೆಲಸ ಬಿಟ್ಟು ದುಶ್ಚಟಗಳಿಗೆ ಬಿದ್ದಿದ್ದರು. ವ್ಹೀಲಿಂಗ್ ಶೋಕಿ ಬೆಳೆಸಿಕೊಂಡಿದ್ದ ಆರೋಪಿಗಳು, ವಿವಿಧೆಡೆ ಸುತ್ತಾಡಿ ಮನೆ ಎದುರು ನಿಲುಗಡೆ ಮಾಡಿದ ದ್ವಿಚಕ್ರ ವಾಹನಗಳನ್ನು ಗುರಿಯಾಗಿಸಿಕೊಂಡು ರಾತ್ರಿ ವೇಳೆ ಕಳವು ಮಾಡುತ್ತಿದ್ದರು. ನಗರದ ಹೊರವಲಯದ ರಸ್ತೆಗಳಲ್ಲಿ ವ್ಹೀಲಿಂಗ್ ಶೋಕಿ ತೀರಿಸಿಕೊಂಡು ಬಳಿಕ ನೆಲಮಂಗಲದ ಸಂಬಂಧಿಕರ ತೋಟದಲ್ಲಿ ಆ ದ್ವಿಚಕ್ರ ವಾಹನ ನಿಲ್ಲಿಸುತ್ತಿದ್ದರು. ಆರೋಪಿಗಳ ಬಂಧನದಿಂದ ನಂದಿನಿ ಲೇಔಟ್, ಮಾದನಾಯಕನಹಳ್ಳಿ ತಲಾ ಒಂದು, ನೆಲಮಂಗಲ ಟೌನ್ ಎರಡು ಸೇರಿದಂತೆ ಒಟ್ಟು ನಾಲ್ಕು ದಿಚಕ್ರ ವಾಹನ ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
37 ಶಾಲಾ ಕಾಲೇಜುಗಳಲ್ಲಿ ಕಳವು: ಇಬ್ಬರು ಕುಖ್ಯಾತ ಕಳ್ಳರ ಸೆರೆ
ಜಿಪಿಎಸ್ ಆಧರಿಸಿ ಬಲೆಗೆ:
ಆರೋಪಿಗಳು ನಂದಿನಿ ಲೇಔಟ್‌ನ ಲಕ್ಷ್ಮೇದೇವಿ ನಗರದಲ್ಲಿ ಕಳವು ಮಾಡಿದ್ದ ಕೆಟಿಎಂ ಡ್ಯೂಕ್ ದ್ವಿಚಕ್ರ ವಾಹನಕ್ಕೆ ಮಾಲಿಕ ಜಿಪಿಎಸ್ ಅಳವಡಿಸಿದ್ದರು. ಈ ಜಿಪಿಎಸ್ ನೆಟ್‌ವರ್ಕ್ ಆಧರಿಸಿ ಪೊಲೀಸರು ಆರೋಪಿಗಳನ್ನು ನೆಲಮಂಗಲದಲ್ಲಿ ಪತ್ತೆಹಚ್ಚಿ ಬಂಧಿಸಿದ್ದಾರೆ. ಬಳಿಕ ವಿಚಾರಣೆ ವೇಳೆ ವ್ಹೀಲಿಂಗ್ ಶೋಕಿ ಹಾಗೂ ತೋಟದ ಮನೆಯಲ್ಲಿ ದ್ವಿಚಕ್ರ ವಾಹನ ನಿಲುಗಡೆ ಮಾಡಿರುವ ಬಗ್ಗೆ ಬಾಯ್ಬಿಟ್ಟಿದ್ದಾರೆ.