ಬೆಂಗಳೂರು(ಜ.18): ಓರೆಕ್ಸ್‌ ಕಂಪನಿಯಿಂದ ಕಾರುಗಳನ್ನು ಬಾಡಿಗೆಗೆ ಪಡೆದು ನಕಲಿ ದಾಖಲೆ ಸೃಷ್ಟಿಸಿ ಕಡಿಮೆ ಮೊತ್ತಕ್ಕೆ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿ ಕೋಟ್ಯಂತರ ಮೌಲ್ಯದ ಕಾರು ಜಪ್ತಿ ಮಾಡಿದ್ದಾರೆ.

ಉತ್ತರಹಳ್ಳಿಯ ಗಿರೀಶ್‌ ಗೌಡ (32), ಕೋಣನಕುಂಟೆ ಕ್ರಾಸ್‌ನ ಮೋಹನ್‌ (24) ಬಂಧಿತರು. ಆರೋಪಿಗಳಿಂದ 12 ಇನ್ನೋವಾ, ಫಾರ್ಚೂನರ್‌ ಸೇರಿ ಸುಮಾರು 5.25 ಕೋಟಿ ಮೌಲ್ಯದ 27 ಐಷಾರಾಮಿ ಕಾರುಗಳನ್ನು ಜಪ್ತಿ ಮಾಡಲಾಗಿದೆ. ಪ್ರಕರಣದಲ್ಲಿ ಓರೆಕ್ಸ್‌ ಕಂಪನಿಯ ಸಿಬ್ಬಂದಿ ಕೂಡ ಶಾಮೀಲಾಗಿರುವ ಶಂಕೆ ಇದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ವೈದ್ಯ ಸೀಟು ಕೊಡಿಸುವುದಾಗಿ 52 ಲಕ್ಷ ವಂಚನೆ

ಓರೆಕ್ಸ್‌ ಆಟೋ ಇನ್‌ಫ್ರಾಸ್ಟ್ರಕ್ಚರ್‌ ಸರ್ವೀಸ್‌ ಲಿ. ಸಂಸ್ಥೆ ಖಾಸಗಿ ಕಂಪನಿ ಹಾಗೂ ಖಾಸಗಿ ವ್ಯಕ್ತಿಗಳಿಗೆ ಬಾಡಿಗೆ ರೂಪದಲ್ಲಿ ವಾಹನವನ್ನು ಕೊಡುತ್ತದೆ. ಆರೋಪಿಗಳಾದ ಮೋಹನ್‌ ಮತ್ತು ಗಿರೀಶ್‌ ಗೌಡ ಓರೆಕ್ಸ್‌ ಕಚೇರಿಗೆ ಬಂದು ಕಂಪನಿಯೊಂದಿಗೆ ಕರಾರು ಪತ್ರ ಮಾಡಿಕೊಂಡು ಕೆಲ ವಾಹನಗಳನ್ನು ಬಾಡಿಗೆಗೆ ಪಡೆದುಕೊಂಡಿದ್ದರು. ಆರೋಪಿಗಳು ಕಾರನ್ನು ಕಂಪನಿಗೆ ಹಿಂತಿರುಗಿಸದಿದ್ದಾಗ, ಓರೆಕ್ಸ್‌ ಕಂಪನಿಯ ಜನರಲ್‌ ಮ್ಯಾನೇಜರ್‌ ಮೋಹನ್‌ ವೇಲು ಆರೋಪಿಗಳ ವಿರುದ್ದ ಬೈಯ್ಯಪ್ಪನಹಳ್ಳಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ನಂತರ ಪ್ರಕರಣ ಸಿಸಿಬಿಗೆ ವರ್ಗಾವಣೆಯಾಗಿತ್ತು.

ಆರೋಪಿಗಳು ನಕಲಿ ದಾಖಲೆ ಸೃಷ್ಟಿಸಿ ಬಾಡಿಗೆಗೆ ಪಡೆದಿದ್ದ ಹಳದಿ ಬೋರ್ಡ್‌ ಕಾರುಗಳನ್ನು ಬಿಳಿ ಬೋರ್ಡ್‌ ನಂಬರ್‌ಗೆ ಬದಲಾವಣೆ ಮಾಡುತ್ತಿದ್ದರು. ಇದೇ ರೀತಿ ಹಲವು ಕಂಪನಿಯ ಕಾರುಗಳನ್ನು ಬಾಡಿಗೆಗೆ ಪಡೆದು ವಂಚನೆ ಮಾಡುತ್ತಿದ್ದರು. ಕಂಪನಿಯ ಕೆಲ ಸಿಬ್ಬಂದಿಯನ್ನು ಬಳಸಿಕೊಂಡು ಕೃತ್ಯ ಎಸಗುತ್ತಿದ್ದರು. ಕಡಿಮೆ ಬೆಲೆಗೆ ಹೊರ ರಾಜ್ಯದ ವ್ಯಕ್ತಿಗಳಿಗೆ ಮಾರಾಟ ಮಾಡಿ, ಬಂದ ಹಣದಲ್ಲಿ ಮೋಜಿನ ಜೀವನ ನಡೆಸುತ್ತಿದ್ದರು. ಪ್ರಕರಣದ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದ್ದಾರೆ.