ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ದೇವರ ದೀಪದಿಂದ ಆಕಸ್ಮಿಕವಾಗಿ ಮನೆಗೆ ಬೆಂಕಿ ಹೊತ್ತಿಕೊಂಡು ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತುಗಳು ಭಸ್ಮವಾಗಿವೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಉತ್ತರಕನ್ನಡ (ಆ.3): ದೇವರ ಮನೆಯಲ್ಲಿ ಹಚ್ಚಿದ ದೀಪದಿಂದ ಸಂಪೂರ್ಣ ಮನೆಯೇ ಸುಟ್ಟು ಭಸ್ಮವಾದ ದುರ್ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ನಂದನಗದ್ದಾದಲ್ಲಿ ಶನಿವಾರ ರಾತ್ರಿ ನಡೆದಿದೆ. ಶಾಂತರಾಮ ದತ್ತ ದೇಸಾಯಿ ಎಂಬವರಿಗೆ ಸೇರಿದ ಮನೆಯಲ್ಲಿ ನಡೆದಿರುವ ಅಗ್ನಿ ಅವಘಡ. ಬೆಂಕಿಯ ತೀವ್ರತೆಗೆ ಸಂಪೂರ್ಣ ಮನೆ ಧಗಧಗಿಸಿ ಹೊತ್ತಿ ಉರಿದು ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತುಗಳು ಕರಗಿ ಭಸ್ಮವಾಗಿವೆ.
ಮೂಲಗಳ ಪ್ರಕಾರ, ಶಾಂತರಾಮ ದೇಸಾಯಿ ಅವರು ಶನಿವಾರ ಸಂಜೆ ದೇವರ ಪೂಜೆಗಾಗಿ ದೀಪ ಹಚ್ಚಿ ಮನೆಯಿಂದ ಹೊರಗೆ ತೆರಳಿದ್ದರು. ಈ ವೇಳೆ ದೀಪದಿಂದ ಉಂಟಾದ ಬೆಂಕಿಯ ಕಿಡಿ ಹತ್ತಿಕೊಂಡು ಕೆಲವೇ ಕ್ಷಣಗಳಲ್ಲಿ ಇಡೀ ಮನೆಗೆ ವ್ಯಾಪಿಸಿದೆ. ಮನೆಯಲ್ಲಿದ್ದ ಪೀಠೋಪಕರಣಗಳು, ದುಬಾರಿ ವಸ್ತುಗಳು, ದಾಖಲೆಗಳು ಸೇರಿದಂತೆ ಎಲ್ಲವೂ ಬೆಂಕಿಯ ಜ್ವಾಲೆಗೆ ಆಹುತಿಯಾಗಿವೆ. ನೆರೆಹೊರೆಯವರು ಬೆಂಕಿಯನ್ನು ಗಮನಿಸಿ ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.
ಕಾರವಾರ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತಕ್ಷಣ ಧಾವಿಸಿ ಬೆಂಕಿಯನ್ನು ನಂದಿಸುವ ಪ್ರಯತ್ನ ನಡೆಸಿದರು. ಆದರೆ, ಅಷ್ಟರಲ್ಲಾಗಲೇ ಬೆಂಕಿಯ ತೀವ್ರತೆಯಿಂದಾಗಿ ಮನೆಯ ಒಳಗಿನ ಬಹುತೇಕ ವಸ್ತುಗಳು ಸುಟ್ಟುಹೋಗಿದ್ದವು. ಘಟನೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲವಾದರೂ, ದೇಸಾಯಿ ಕುಟುಂಬಕ್ಕೆ ಭಾರೀ ಆರ್ಥಿಕ ನಷ್ಟವಾಗಿದೆ.
ಕಾರವಾರ ನಗರ ಠಾಣೆಯ ಪೊಲೀಸರು ಘಟನೆಯ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಬೆಂಕಿಗೆ ದೇವರ ದೀಪವೇ ಕಾರಣ ಎಂದು ತಿಳಿದುಬಂದಿದೆ.
