ಬ್ಯಾಗಿನಲ್ಲಿ ಹುಲಿ ತಲೆಬರುಡೆ, ಉಗುರು, ಹಲ್ಲು ಪತ್ತೆ, ಚಿಕ್ಕಮಗಳೂರಿನಲ್ಲಿ ಇಬ್ಬರು ಅರೆಸ್ಟ್
ಬೈಕಿಗೆ ನೇತುಹಾಕಿದ್ದ ಬ್ಯಾಗಿನಲ್ಲಿ ಹುಲಿ ತಲೆಬುರುಡೆ, ಹಲ್ಲು, ಉಗುರು ಪತ್ತೆಯಾಗಿದ್ದು, ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ಇಬ್ಬರನ್ನು ಬಂಧಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಜ.24): ಬೈಕಿಗೆ ನೇತುಹಾಕಿದ್ದ ಬ್ಯಾಗಿನಲ್ಲಿ ಹುಲಿ ತಲೆಬುರುಡೆ, ಹಲ್ಲು, ಉಗುರು ಪತ್ತೆಯಾಗಿದ್ದು, ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ಇಬ್ಬರನ್ನು ಬಂಧಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಬಂದ ಖಚಿತ ಮೇರೆಗೆ ದಾಳಿ ನಡೆಸಿದ ಸಮಯದಲ್ಲಿ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಚಿಕ್ಕಮಗಳೂರು ಹೊರ ವಲಯದ ಮತ್ತಾವರ ಬಳಿ ದಾಳಿ ನಡೆಸಿದ ವೇಳೆಯಲ್ಲಿ ಹುಲಿ ತಲೆ ,ನಾಲ್ಕು ಉಗುರು, ಎರಡು ಹಲ್ಲು ಪತ್ತೆಯಾಗಿದೆ.ಬಂಧಿತರನ್ನು ಮೂಡಿಗೆರೆ ತಾಲ್ಲೂಕು ತತ್ಕೊಳ ಸಮೀಪದ ಕುಂಡ್ರ ಗ್ರಾಮದ ಸತೀಶ್ ಮತ್ತು ಸುಧೀರ್ ಎಂದು ತಿಳಿದುಬಂದಿದೆ.
ಚಿತ್ರದುರ್ಗ: ಕುಡಿದ ಮತ್ತಿನಲ್ಲಿ ಸ್ಟೀಲ್ ಕಟ್ಟರ್ ನಿಂದ ಮೂವರಿಗೆ ಇರಿದ ಯುವಕ
ಪ್ರಕರಣ ದಾಖಲು :
ಚಿಕ್ಕಮಗಳೂರು ನಗರ ವ್ಯಾಪ್ತಿಯಲ್ಲಿ ಜನವರಿ 19 ರಂದು ಇಬ್ಬರನ್ನು ಬಂಧಿಸಲಾಗಿದೆ. ಪ್ರಕರಣವೊಂದರಲ್ಲಿ ನ್ಯಾಯಾಲಯಕ್ಕೆ ಹಾಜರಾಗಿದ್ದ ಸತೀಶ್ ನನ್ನು ಖಚಿತ ಮಾಹಿತಿ ಮೇರೆಗೆ ಮೂಡಿಗೆರೆ ಅರಣ್ಯ ಸಿಬ್ಬಂದಿ ತಡೆದು ಬೈಕ್ ಗೆ ನೇತುಹಾಕಿದ್ದ ಬ್ಯಾಗ್ ಪರೀಶೀಲನೆ ನಡೆಸಿದಾಗ ಅದರಲ್ಲಿ ಹುಲಿ ತಲೆಬುರುಡೆ, ಮೂರು ಹಲ್ಲು, ಮೂರು ಉಗುರು, ಒಂದು ಮೂಳೆ ಇರುವುದು ಪತ್ತೆಯಾಗಿದೆ.ತಕ್ಷಣ ಸತೀಶ್ ಮತ್ತು ಆತನ ಜೊತೆಗಿದ್ದ ಸುಧೀರ್ ಇವರುಗಳನ್ನು ಅರಣ್ಯ ಸಿಬ್ಬಂದಿ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಸಮಗ್ರ ತನಿಖೆ :
ಈ ಬಗ್ಗ ಏಷ್ಯಾನೆಟ್ ಸುವರ್ಣ ನ್ಯೂಸ್ ನೊಂದಿಗೆ ಮಾತಾಡಿದ ಚಿಕ್ಕಮಗಳೂರು ಡಿ.ಎಫ್.ಓ. ರಮೇಶ್ ಬಾಬು ಅವರು ಬಂಧಿತರ ವಿರುದ್ಧ ವನ್ಯಜೀವಿ ಕಾಯ್ದೆ 1972ರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ. ಬಂಧಿತರಿಂದ ಒಂದು ಹುಲಿ ತಲೆಬುರುಡೆ, ಮೂರು ಹಲ್ಲು, ಮೂರು ಉಗುರು, ಒಂದು ಮೂಳೆ, ನಾಲ್ಕು ಮೊಬೈಲ್, ಒಂದು ಬೈಕ್ ವಶಪಡಿಸಿಕೊಳ್ಳಲಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರವಾಗಿ ತನಿಖೆ ನಡೆಸಲಾಗುತ್ತಿದೆ. ಪ್ರಕರಣದ ಹಿಂದೆ ಯಾರೇ ಇದ್ದರು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.ಬಂಧಿತ ಸತೀಶ್ ಈಗ್ಗೆ ಕೆಲ ದಿನಗಳ ಹಿಂದೆ ಕೊರಳಿಗೆ ಹುಲಿ ಉಗುರು ಧರಿಸಿದ್ದ ಪ್ರಕರಣದಲ್ಲಿ ಬಂಧಿತನಾಗಿದ್ದ. ಇದೀಗ ಹುಲಿ ತಲೆಬುರುಡೆಯನ್ನೇ ಇಟ್ಟುಕೊಂಡಿದ್ದ ಪ್ರಕರಣದಲ್ಲಿ ಬಂಧಿತನಾಗಿದ್ದಾನೆ.
ಬೆಂಗಳೂರಿನಲ್ಲಿ ನಾಪತ್ತೆಯಾಗಿದ್ದ ಬಾಲಕ ಮೂರು ಸಿಟಿ ಸಂಚರಿಸಿ ಹೈದರಾಬಾದ್‌ನಲ್ಲಿ ಪತ್ತೆ!
ಪಾರದರ್ಶಕ ತನಿಖೆಗೆ ಆಗ್ರಹ :
ಈ ಪ್ರಕರಣದಲ್ಲಿ ಸ್ಥಳೀಯರು ಹಲವಾರು ಅನುಮಾನಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಭಾಗದಲ್ಲಿ ಇಂತಹ ಘಟನೆಗಳು ಮರುಕಳಿಸುತ್ತಿದ್ದು, ಇದರ ಹಿಂದೆ ಷಡ್ಯಂತ್ರ ಇರುವ ಬಗ್ಗೆಯೂ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಾರೆಯಾಗಿ ನಮ್ಮ ರಾಷ್ಟ್ರೀಯ ಪ್ರಾಣಿಯಾಗಿರುವ ಹುಲಿಯ ಅಂಗಾಂಗಗಳು ಪತ್ತೆಯಾಗಿರುವ ಪ್ರಕರಣದ ಬಗ್ಗೆ ಅಧಿಕಾರಿಗಳು ಸಮಗ್ರ ತನಿಖೆ ನಡೆಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.