ಲಕ್ನೋ(ಆ.13): ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ದಲಿತ ಯುವತಿ ಮೇಲಿನ ಪೈಶಾಚಿಕ ಕೃತ್ಯದ ಕಹಿ ನೆನಪು ಇನ್ನೂ ಮರೆ ಮಾಚಿಲ್ಲ, ಅದಕ್ಕೂ ಮುನ್ನ ಗೋಂಡಾ ಜಿಲ್ಲೆಯ ಮೂವರು ಅಪ್ರಾಪ್ತ ದಲಿತ ಸಹೋದರಿಯರ ಮೇಲೆ ಆಸಿಡ್ ಎರಚಿರುವ ಘಟನೆ ಬೆಳಕಿಗೆ ಬಂದಿದೆ. ಸದ್ಯ ಸಂತ್ರಸ್ತರನ್ನು ಗೋಂಡಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ. 

ಹಿರಿಯ ಸಹೋದರಿಗೆ 17 ವರ್ಷ ವಯಸ್ಸಾಗಿದ್ದು, ಈ ದಾಳಿಯಲ್ಲಿ ಆಕೆ ಸುಮಾರು ಶೇ. 30ರಷ್ಟು ಸುಟ್ಟು ಹೋಗಿದ್ದಾಳೆ. ಇನ್ನು ಎರಡನೇ ಸಹೋದರಿಗೆ 12 ವರ್ಷ ವಯಸ್ಸಾಗಿದ್ದು, ಶೇ. 20ರಷ್ಟು ಸುಟ್ಟು ಹೋಗಿದ್ದಾಳೆ. ಇನ್ನು 8 ವರ್ಷದ ಕಿರಿಯ ಬಾಲಕಿ ಶೇ. 5-ರಷ್ಟು ಸುಟ್ಟು ಹೋಗಿದ್ದಾಳೆ. ಈ ಮೂವರು ಸಹೋದರಿಯರು ತಮ್ಮ ಮನೆಯಲ್ಲಿ ಒಂದೇ ಕೋಣೆಯಲ್ಲಿ ಮಲಗಿದ್ದರು. ಆದರೆ ತಡರಾತ್ರಿ ಸುಮಾರು ಎರಡು ಗಂಟೆಗೆ ಸರಿಯಾಗಿ ದುಷ್ಕರ್ಮಿಯೊಬ್ಬ ಮನೆ ಹೊರ ಬದಿಯಿಂದ ಛಾವಣಿ ಏರಿ ಕೋಣೆಯೊಳಗಿದ್ದ ಬಾಲಕಿಯರ ಮೇಲೆ ಆಸಿಡ್ ಹಾಕಿ ಪರಾರಿಯಾಗಿದ್ದಾನೆ. ಇತ್ತ ಮಕ್ಕಳ ಚೀರಾಟ ಕೇಳಿ ಕೋಣೆಗೆ ಬಂದ ತಂದೆಗೆ ವಿಚಾರ ತಿಳಿದಿದೆ. 

ಇನ್ನು ಈ ಬಾಲಕಿಯರ ತಂದೆ ರಾಮ್ ಅವತಾರ್ ಹಳ್ಳಿಯಲ್ಲಿ ಒಂದು ಮರದ ಕೆಳಗೆ ಬಟ್ಟೆಗೆ ಇಸ್ತ್ರಿ ಹಾಕುವ ಕೆಲಸ ಮಾಡುತ್ತಾರೆ. ಇನ್ನು ಹೆಚ್ಚು ಸುಟ್ಟುಕೊಂಡ ಬಾಲಕಿಯ ಮದುವೆ ನಿಶ್ಚಯವಾಗಿತ್ತು ಹಾಗೂ ಅತೀ ಶೀಘ್ರದಲ್ಲೇ ಮದುವೆಯೂ ನಡೆಯಲಿತ್ತು. ಆದರೆ ಮುಂದೇನು ನಡೆಯಲಿದೆಯೋ? ತಿಳಿಯದು.

ಇನ್ನು ಸ್ಥಳಕ್ಕಾಗಮಿಸಿದ ಪೊಲೀಸರು ನೆರೆ ಮನೆಯವರ ಹಾಗೂ ಕುಟುಂಬ ಸದಸ್ಯರ ಹೇಳಿಕೆ ಪಡೆದುಕೊಂಡಿದ್ದಾರೆ. ಪೊಲೀಸರ ಫಾರೆನ್ಸಿಕ್ ಟೀಂ ನಾಯಿಯ ತಂಡವೂ ಪರಿಶೀಲನೆ ನಡೆಸುತ್ತಿದೆ.