ವಿಜಯಪುರ(ನ.09): ಜಿಲ್ಲೆಯ ತಾಳಿಕೋಟೆ ಪಟ್ಟಣದಲ್ಲಿ ಹಗಲು ಮನೆಗಳ್ಳತನ ಮಾಡಿದ ಮೂವರನ್ನು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ವಿಜಯಪುರದ ಆಟೋ ಇಂದಿರಾ ನಗರದ ಅಬೂಬಕರ ರಜಾಕಸಾಬ ಝಂಡೆ (23), ಬಾಗಾಯತ ಗಲ್ಲಿಯ ಮಹಮ್ಮದಯೂಸೂಫ್‌ಅಯೂಬ್‌ಕೋಟಿಹಾಳ (21) ಹಾಗೂ ಝಂಡಾಕಟ್ಟಾ ನಿವಾಸಿ ಸಮೀರ ನಬಿಲಾಲ ಇನಾಮದಾರ ಬಂಧಿತ ಆರೋಪಿಗಳು.

ಬಂಧಿತರು ಅ.24ರಂದು ತಾಳಿಕೋಟೆಯ ಗಣೇಶ ನಗರದಲ್ಲಿ ಅನೀಲಕುಮಾರ ಶಿವಯ್ಯ ಆಲಾಳಮಠ ಅವರ ಮನೆಯ ಬಾಗಿಲು ಮುರಿದು 36,050 ಮೌಲ್ಯದ ಬಂಗಾರ ಮತ್ತು ಬೆಳ್ಳಿ ವಸ್ತುಗಳನ್ನು ದೋಚಿದ್ದರು. ಈ ಸಂಬಂಧ ತಾಳಿಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪೊಲೀಸರ ಹೆಸರಲ್ಲಿ ಆನ್‌ಲೈನ್‌ ವಂಚನೆ: ನಾಲ್ವರು ಕಳ್ಳರು ಅಂದರ್‌

ತನಿಖಾ ತಂಡವು ಆರೋಪಿತರ ತಪಾಸಣೆಯಲ್ಲಿದ್ದಾಗ ಸಂಶಯವಾಗಿ ತಾಳಿಕೋಟೆಯಲ್ಲಿ ತಿರುಗಾಡುತ್ತಿದ್ದಾಗ ಮೂವರು ಆರೋಪಿಗಳು ಸಿಕ್ಕಿಬಿದ್ದರು. ಅವರನ್ನು ಠಾಣೆಗೆ ಕರೆದುಕೊಂಡು ಬಂದು ವಿಚಾರಿಸಿದಾಗ ಹಲವು ಕಳ್ಳತನ ಪ್ರಕರಣಗಳು ಬಹಿರಂಗಗೊಂಡಿವೆ. ಸುಮಾರು 4 ತಿಂಗಳ ಹಿಂದೆ ತಾಳಿಕೋಟೆಯ ನಗರಕಲ್‌ಓಣಿಯಲ್ಲಿ ಒಂದು ಮನೆ, ಒಂದು ತಿಂಗಳ ಹಿಂದೆ ಶಿವಾಜಿ ನಗರದ ಒಂದು ಮನೆ ಹಾಗೂ 15 ದಿನಗಳ ಹಿಂದೆ ತಾಳಿಕೋಟೆಯ ಗಣೇಶನಗರದಲ್ಲಿಯ ಮನೆಯಲ್ಲಿಟ್ಟಿದ್ದ ಬಂಗಾರ, ಬೆಳ್ಳಿ ಹಾಗೂ ಹಣವನ್ನು ಕಳವು ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿಗಳಿಂದ 9000 ಮೌಲ್ಯದ ಒಂದೂವರೆ ಗ್ರಾಂದ ಒಂದು ಚಿನ್ನದುಂಗುರ, 25,000 ಮೌಲ್ಯದ 5 ಗ್ರಾಂ ಬಂಗಾರದ ಗಣಪತಿ ಚಿತ್ರ ಇದ್ದ ಒಂದು ಉಂಗುರ, 4,000 ಮೌಲ್ಯದ ಲಕ್ಷ್ಮಿ ಚಿತ್ರ ಇದ್ದ ಬಂಗಾರ ಕಾಯಿನ್‌, ಬೆಳ್ಳಿ ಆಭರಣ, 50,000 ಮೌಲ್ಯದ 1 ತೊಲಿ ಬಂಗಾರದ ಒಂದು ಸುತ್ತುಂಗರ, 75,000 ಮೌಲ್ಯದ 15 ಗ್ರಾಂ ಒಂದು ಬಂಗಾರದ ಚೈನ್‌, ಬಂಗಾರದ ಒಂದು ಚೈನ್‌, 1,75,000  ಮೌಲ್ಯದ 35 ಗ್ರಾಂನ ಎರಡು ಬಂಗಾರದ ಬಳೆಗಳು ಸೇರಿ ಒಟ್ಟು 4,14,500 ಬೆಲೆ ಬಾಳುವ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.