ವಾಟ್ಸಪ್‌ಗೆ ಲಿಂಕ್‌ ಕಳುಹಿಸಿದ್ದ ವಂಚಕ, ಅಪ್‌ಡೇಟ್‌ ಮಾಡದಿದ್ದರೆ ಬ್ಯಾಂಕ್‌ ಖಾತೆ ಸ್ಥಗಿತ ಎಂದು ಬೆದರಿಕೆ, ಲಿಂಕ್‌ ಕ್ಲಿಕ್‌ ಮಾಡಿ ಅರ್ಜಿ ಭರ್ತಿ ಮಾಡುತ್ತಿದ್ದಂತೆ ಹಣ ಖೋತಾ, ಸಂದೇಶ ಬಂದಿದ್ದ ಸಂಖ್ಯೆಗೆ ಕರೆ ಮಾಡಿದರೆ ಸಿಗದ ಸ್ಪಂದನೆ: ದೂರು 

ಬೆಂಗಳೂರು(ಮಾ.05): ಪಾನ್‌ಕಾರ್ಡ್‌ ಅಪ್ಡೇಟ್‌ ಮಾಡುವಂತೆ ವ್ಯಕ್ತಿಯೊಬ್ಬರ ಮೊಬೈಲ್‌ಗೆ ಲಿಂಕ್‌ ಕಳುಹಿಸಿರುವ ಸೈಬರ್‌ ವಂಚಕರು ಆ ವ್ಯಕ್ತಿಯ ಬ್ಯಾಂಕ್‌ ಖಾತೆಯಿಂದ 4.99 ಲಕ್ಷ ಎಗರಿಸಿದ್ದಾರೆ. ಈ ಸಂಬಂಧ ಕೇಂದ್ರ ವಿಭಾಗದ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಶಾಂತಿನಗರ ನಿವಾಸಿ ಗೋಪಾಲ ಶರ್ಮಾ(48) ಹಣ ಕಳೆದುಕೊಂಡವರು. ಇತ್ತೀಚೆಗೆ ಅಪರಿಚಿತ ಮೊಬೈಲ್‌ ಸಂಖ್ಯೆಯಿಂದ ಗೋಪಾಲ ಅವರ ವಾಟ್ಸಾಪ್‌ಗೆ ‘ನಿಮ್ಮ ಪಾನ್‌ ಕಾರ್ಡ್‌ ಅಪ್ಡೇಟ್‌ ಮಾಡಿ. ಇಲ್ಲವಾದರೆ, ನಿಮ್ಮ ಬ್ಯಾಂಕ್‌ ಖಾತೆ ಬ್ಲಾಕ್‌ ಆಗಲಿದೆ’ ಎಂಬ ಸಂದೇಶ ಬಂದಿದೆ. ಈ ಸಂದೇಶದ ಜತೆಗೆ ಲಿಂಕ್‌ ಬಂದಿದ್ದು, ಅದರಂತೆ ಗೋಪಾಲ ಅವರು ಲಿಂಕ್‌ ತೆರೆದು ಅದರಲ್ಲಿ ಪಾನ್‌ ಕಾರ್ಡ್‌ ವಿವರಗಳನ್ನು ನಮೂದಿಸಿದ್ದಾರೆ. ಈ ವೇಳೆ ಅಪರಿಚಿತ ವ್ಯಕ್ತಿ ಗೋಪಾಲ ಅವರ ಐಸಿಐಸಿಐ ಬ್ಯಾಂಕ್‌ ಖಾತೆಯಿಂದ ಯೆಸ್‌ ಬ್ಯಾಂಕ್‌ ಖಾತೆಗೆ ವಿವಿಧ ಹಂತಗಳಲ್ಲಿ .4.99 ಲಕ್ಷವನ್ನು ವರ್ಗಾವಣೆ ಮಾಡಿಕೊಂಡಿದ್ದಾನೆ.

Bengaluru: ಯುಕೆನಲ್ಲಿ ಕೆಲಸ ಕೊಡಿಸೋದಾಗಿ ಮಹಿಳೆಯರಿಗೆ ವಂಚನೆ: ನೈಜೀರಿಯಾ ಪ್ರಜೆಯ ಬಂಧನ

ಲಿಂಕ್‌ನಲ್ಲಿ ಪಾನ್‌ ಕಾರ್ಡ್‌ ವಿವರ ನಮೂದಿಸಿದ ಬಳಿಕ ಗೋಪಾಲ ಅವರ ಖಾತೆಯಲ್ಲಿ ಹಣ ಕಡಿತವಾಗಿರುವ ಸಂದೇಶ ಬಂದಿದೆ. ಈ ವೇಳೆ ಆಶ್ಚರ್ಯಗೊಂಡ ಗೋಪಾಲ ಅವರು ಅಪರಿಚಿತ ಮೊಬೈಲ್‌ ಸಂಖ್ಯೆಗೆ ಕರೆ ಮಾಡಿದ್ದು, ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಬಳಿಕ ತಾನು ಸೈಬರ್‌ ವಂಚಕರ ಮೋಸದ ಜಾಲಕ್ಕೆ ಸಿಲುಕಿರುವುದು ವೇದ್ಯವಾಗಿದೆ. ಬಳಿಕ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಗೆ ಬಂದು ದೂರು ನೀಡಿದ್ದಾರೆ.