ಹಿರಿಯ ನಟಿ ವಿನಯಾ ಪ್ರಸಾದ್‌ ಅವರ ಮನೆಗೆ ದುಷ್ಕರ್ಮಿಗಳು ಕನ್ನ ಹಾಕಿರುವ ಸಂಬಂಧ ನಂದಿನಿ ಲೇಔಟ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ನಂದಿನಿ ಲೇಔಟ್‌ 4ನೇ ಬ್ಲಾಕ್‌ನ ರೈಲ್ವೆ ಮೈನ್ಸ್‌ ಕಾಲೋನಿ ನಿವಾಸದಲ್ಲಿ ಈ ಕೃತ್ಯ ನಡೆದಿದೆ. ದುಷ್ಕರ್ಮಿಗಳು 7 ಸಾವಿರ ರು. ದೋಚಿ ಪರಾರಿಯಾಗಿದ್ದಾರೆ. 

ಬೆಂಗಳೂರು (ಅ.29): ಹಿರಿಯ ನಟಿ ವಿನಯಾ ಪ್ರಸಾದ್‌ ಅವರ ಮನೆಗೆ ದುಷ್ಕರ್ಮಿಗಳು ಕನ್ನ ಹಾಕಿರುವ ಸಂಬಂಧ ನಂದಿನಿ ಲೇಔಟ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ನಂದಿನಿ ಲೇಔಟ್‌ 4ನೇ ಬ್ಲಾಕ್‌ನ ರೈಲ್ವೆ ಮೈನ್ಸ್‌ ಕಾಲೋನಿ ನಿವಾಸದಲ್ಲಿ ಈ ಕೃತ್ಯ ನಡೆದಿದೆ. ದುಷ್ಕರ್ಮಿಗಳು 7 ಸಾವಿರ ರು. ದೋಚಿ ಪರಾರಿಯಾಗಿದ್ದಾರೆ. ಈ ಸಂಬಂಧ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗೆ ಶೋಧಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಟಿ ವಿನಯಾ ಪ್ರಸಾದ್‌ ಹಾಗೂ ಅವರ ಪತಿ ಜ್ಯೋತಿಪ್ರಕಾಶ್‌ ಅವರು ಮನೆಗೆ ಬೀಗ ಹಾಕಿಕೊಂಡು ಕಾರ್ಯ ನಿಮಿತ್ತ ಅ.22ರಂದು ಸ್ವಂತ ಊರು ಉಡುಪಿಗೆ ತೆರಳಿದ್ದರು. ಅ.26ರಂದು ಸಂಜೆ 4.30ಕ್ಕೆ ಮನೆಗೆ ವಾಪಸಾದಾಗ ಕೃತ್ಯ ಬೆಳಕಿಗೆ ಬಂದಿದೆ. ದುಷ್ಕರ್ಮಿಗಳು ಮನೆಯ ಬಾಗಿಲ ಬೀಗವನ್ನು ಮೀಟಿ ಮನೆ ಪ್ರವೇಶಿಸಿ, ಬೆಡ್‌ ರೂಮ್‌ನ ಡ್ರಾಯರ್‌ನಲ್ಲಿದ್ದ 7 ಸಾವಿರ ರು. ನಗದು ಹಣ ದೋಚಿ ಪರಾರಿಯಾಗಿದ್ದಾರೆ. ವಿನಯಾ ಪ್ರಸಾದ್‌ ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ನಂದಿನಿ ಲೇಔಟ್‌ ಠಾಣೆ ಪೊಲೀಸರು, ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಮನಗರ: ಕೌಟುಂಬಿಕ ಕಲಹ, ಕೆರೆಗೆ ಹಾರಿ ಗೃಹಿಣಿ ಆತ್ಮಹತ್ಯೆ

ಕಳ್ಳತನ ಮಾಡುತ್ತಿದ್ದ ಖದೀಮರ ಬಂಧನ: ನಗರದಲ್ಲಿ ಮನೆಗಳ ಬೀಗ ಮುರಿದು ಕಳ್ಳತನ ಮಾಡಿದ್ದ ಮೂವರು ಕುಖ್ಯಾತ ಖದೀಮರು ಹಾಗೂ ತಾನು ಕೆಲಸ ಮಾಡುತ್ತಿದ್ದ ಅಂಗಡಿಯಲ್ಲಿ ಕಳವು ಮಾಡಿದ್ದ ನೌಕರ ಸೇರಿ ನಾಲ್ವರು ಪ್ರತ್ಯೇಕವಾಗಿ ಸಿಸಿಬಿ ಬಲೆಗೆ ಬಿದ್ದಿದ್ದಾರೆ. ರಾಜಸ್ಥಾನ ಮೂಲದ ರಂಜಿತ್‌, ಮೈಸೂರಿನ ಸದ್ದಾಂ, ಡಿ.ಜೆ.ಹಳ್ಳಿಯ ಮೊಹಮ್ಮದ್‌ ತಬ್ರೇಜ್‌ ಹಾಗೂ ಸೈಯದ್‌ ಅಜಂ ಬಂಧಿತರಾಗಿದ್ದು, ಆರೋಪಿಗಳಿಂದ .98 ಲಕ್ಷ ಮೌಲ್ಯದ 1.985 ಕೇಜಿ ಬಂಗಾರ ಜಪ್ತಿ ಮಾಡಲಾಗಿದೆ. ಈ ನಾಲ್ವರು ಕಳವು ಮಾಡಿ ತಪ್ಪಿಸಿಕೊಂಡಿದ್ದರು. 

ಬಾತ್ಮೀದಾರರ ಮಾಹಿತಿ ಮೇರೆಗೆ ಇನ್‌ಸ್ಪೆಕ್ಟರ್‌ ಹಜರೇಶ್‌ ಕಿಲ್ಲೇದಾರ್‌ ನೇತೃತ್ವದ ತಂಡವು ಪ್ರತ್ಯೇಕವಾಗಿ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದಿದೆ ಎಂದು ಜಂಟಿ ಪೊಲೀಸ್‌ ಆಯುಕ್ತ (ಅಪರಾಧ) ರಮಣ್‌ ಗುಪ್ತಾ ತಿಳಿಸಿದ್ದಾರೆ. ಸದ್ದಾಂ, ತಬ್ರೇಜ್‌ ಹಾಗೂ ಅಜಂ ವೃತ್ತಿಪರ ಕ್ರಿಮಿನಲ್‌ಗಳಾಗಿದ್ದು, ಐದಾರು ವರ್ಷಗಳಿಂದ ಕಳ್ಳತನದಲ್ಲಿ ತೊಡಗಿದ್ದರು. ಈ ಆರೋಪಿಗಳ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, ಹಲವು ಬಾರಿ ಜೈಲಿಗೆ ಹೋಗಿ ಬಂದಿದ್ದಾರೆ. ಆದರೂ ಪಾಠ ಕಲಿಯದೆ ತಮ್ಮ ಚಾಳಿ ಮುಂದುವರೆಸಿದ್ದರು.

ಉಂಡ ಮನೆಗೆ ಕನ್ನ ಹಾಕಿದ ರಂಜಿತ್‌: ಕಳೆದ ಹದಿಮೂರು ವರ್ಷಗಳಿಂದ ಕಾಮಾಕ್ಷಿಪಾಳ್ಯ ಸಮೀಪ ಚಿನ್ನಾಭರಣ ಅಂಗಡಿಯಲ್ಲಿ ರಾಜಸ್ಥಾನ ಮೂಲದ ರಂಜಿತ್‌ ಕೆಲಸ ಮಾಡುತ್ತಿದ್ದ. ಈತನ ಮೇಲೆ ಮಾಲಿಕರಿಗೆ ವಿಶ್ವಾಸ ಮೂಡಿತ್ತು. ಈ ನಂಬಿಕೆಗೆ ದ್ರೋಹ ಬಗೆದ ಆತ, ಮಾಲಿಕರಿಗೆ ಗೊತ್ತಾಗದಂತೆ ಚಿನ್ನಾಭರಣ ಇದ್ದ ಲಾಕರ್‌ನ ನಕಲಿ ಕೀ ಮಾಡಿಸಿಕೊಂಡು ಕಳ್ಳತನ ಮಾಡುತ್ತಿದ್ದ. ಹೀಗೆ ಮೂರು-ನಾಲ್ಕು ವರ್ಷಗಳಿಂದ ಕಳವು ಮಾಡಿ ಆಭರಣಗಳನ್ನು ಮಾರಾಟ ಮಾಡಿ ಆತ ಹಣ ಸಂಪಾದಿಸಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಾನ್‌ಸ್ಟೇಟೇಬಲ್‌ ಮೇಲೆ ಪೆಪ್ಪರ್‌ ಸ್ಪ್ರೇ ಮಾಡಿ ಡ್ರ್ಯಾಗರಿಂದ ಹಲ್ಲೆಗೈದ ರೌಡಿ

ಇತ್ತೀಚೆಗೆ ಅಂಗಡಿಯಲ್ಲಿ ಕೆಲಸ ಮಾಡುವಾಗ ಆತನ ಜೇಬಿನಿಂದ ಕೀ ಕೆಳಗೆ ಬಿದ್ದಿದೆ. ಇದರಿಂದ ಅನುಮಾನಗೊಂಡ ಅಂಗಡಿ ಮಾಲಿಕರು, ರಂಜಿತ್‌ನನ್ನು ವಿಚಾರಿಸಲು ಮುಂದಾದಾಗ ತಪ್ಪಿಸಿಕೊಂಡು ತನ್ನೂರಿಗೆ ಪರಾರಿಯಾಗಿದ್ದ. ಈ ಬಗ್ಗೆ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಯಿತು. ಬಳಿಕ ತನಿಖೆಯನ್ನು ಸಿಸಿಬಿ ವರ್ಗಾಯಿಸಲಾಗಿತ್ತು.