ಅಮೀನಗಡ(ಫೆ.20): ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಡೆತ್‌ನೋಟ್‌ಬರೆದಿಟ್ಟು ಪ್ರೌಢಶಾಲಾ ಶಿಕ್ಷಕರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಮೀಪದ ಹುನಗುಂದ ತಾಲೂಕು ಮೂಗನೂರು ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ಮೂಗನೂರು ಗ್ರಾಮದ ಹನುಮಂತ ಪೂಜಾರ (42) ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕ. ಕಮತಗಿ ಪಟ್ಟಣದ ಹೊಳೆ ಹುಚ್ಚೇಶ್ವರ ಪ್ರೌಢಶಾಲೆಯಲ್ಲಿ ಆಂಗ್ಲಭಾಷೆ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಸ್ವಗ್ರಾಮ ಮೂಗನೂರಿನ ಮನೆಯಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿರುವ ಅವರು ಸಾವಿಗೂ ಮುನ್ನ ಡೆತ್‌ನೋಟ್‌ ಬರೆದಿಟ್ಟಿದ್ದಾರೆ. ಅದರಲ್ಲಿ ನನ್ನ ಸಾವಿಗೆ ಕಮತಗಿಯ ತಿಮ್ಮಣ್ಣ ಹಗೇದಾಳ ಕಾರಣ. ಈತ ನನಗೆ ಮೂರು ಲಕ್ಷ ಹಣ ಕೊಡಬೇಕು. ಎಷ್ಟೊಂದು ಕೇಳಿದರೂ ಕೊಟ್ಟಿಲ್ಲ. ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದೇನೆ ಎಂದು ಬರೆದಿಟ್ಟಿದ್ದಾರೆ.

ಪತ್ನಿ ಸಾವಿನ ಸುದ್ದಿ ಕೇಳಿ ಪತಿ ಆತ್ಮಹತ್ಯೆ: ಸಾವಿನಲ್ಲೂ ಒಂದಾದ ದಂಪತಿ

ಜೊತೆಗೆ ಆರೋಪಿಸಿದ ತಿಮ್ಮಣ್ಣ ಹಗೇದಾಳ ಅವರ ಫೋನ್‌ ನಂಬರ್‌ನ ಮೂದಿಸಿದ್ದಾರೆ. ಕಮತಗಿ ಪಟ್ಟಣದಲ್ಲಿ ಶಿಕ್ಷಕ ಹನುಮಂತ ಪೂಜಾರಿ ನಿವೇಶನ ಖರೀದಿಸಲು ತಿಮ್ಮಣ್ಣ ಹಗೇದಾಳಗೆ 3 ಲಕ್ಷ ಮುಂಗಡ ನೀಡಿದ್ದರು. 13 ಲಕ್ಷಕ್ಕೆ ನಿವೇಶನ ಖರೀದಿಸಲು ಒಪ್ಪಂದವಾಗಿತ್ತು. ಹಣ ಹೊಂದಿಸಲಾಗದ ಹನುಮಂತ ಮುಂಗಡ ಹಣ 3 ಲಕ್ಷ ವಾಪಸ್‌ ಕೊಡುವಂತೆ ತಿಮ್ಮಣ್ಣ ಅವರನ್ನು ಕೇಳಿಕೊಂಡಿದ್ದಾನೆ. ಹಣ ಕೊಡಲು ತಿಮ್ಮಣ್ಣ ಹಗೇದಾಳ ಸತಾಯಿಸಿದ್ದಾನೆ. ಮನನೊಂದ ಶಿಕ್ಷಕ ಸಾವಿಗೆ ಕಾರಣ ಬರೆದಿಟ್ಟಿದ್ದಾನೆ. 

ಮೃತನಿಗೆ ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ, ತಾಯಿ, ಸಹೋದರ, ಸಹೋದರಿ ಸೇರಿದಂತೆ ಅಪಾರ ಬಂಧು-ಬಳಗ ಇದೆ. ಈ ಕುರಿತು ಅಮೀನಗಡ ಪೊಲೀಸ್‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.