ಆನ್‌ಲೈನ್‌ ಬೆಟ್ಟಿಂಗ್‌ ಹುಚ್ಚಿಗೆ ತನ್ನ ಮನೆಯಲ್ಲೇ ಚಿನ್ನಾಭರಣ ಕಳವು ಮಾಡಿ ಸಿದ್ದಾಪುರ ಠಾಣೆ ಪೊಲೀಸರಿಗೆ ಸಿಕ್ಕಿಬಿದ್ದ ಯುವಕನೊಬ್ಬ ಈಗ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರುವಂತಾಗಿದೆ. ಜಯನಗರ 1ನೇ ಹಂತದ ಪ್ರಜಾನ್‌ ಬಂಧಿತ.

ಬೆಂಗಳೂರು (ಜು.09): ಆನ್‌ಲೈನ್‌ ಬೆಟ್ಟಿಂಗ್‌ ಹುಚ್ಚಿಗೆ ತನ್ನ ಮನೆಯಲ್ಲೇ ಚಿನ್ನಾಭರಣ ಕಳವು ಮಾಡಿ ಸಿದ್ದಾಪುರ ಠಾಣೆ ಪೊಲೀಸರಿಗೆ ಸಿಕ್ಕಿಬಿದ್ದ ಯುವಕನೊಬ್ಬ ಈಗ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರುವಂತಾಗಿದೆ. ಜಯನಗರ 1ನೇ ಹಂತದ ಪ್ರಜಾನ್‌ ಬಂಧಿತನಾಗಿದ್ದು, ಆರೋಪಿಯಿಂದ 78.3 ಗ್ರಾಂ ಚಿನ್ನ, 288 ಗ್ರಾಂ ಬೆಳ್ಳಿ ಹಾಗೂ ವಾಚ್‌ ಸೇರಿದಂತೆ .4.6 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಮನೆಯಲ್ಲಿ ಕಳ್ಳತನವಾಗಿರುವ ಬಗ್ಗೆ ಸಿದ್ದಾಪುರ ಪೊಲೀಸರಿಗೆ ಆತನ ಸೋದರ ದೂರು ನೀಡಿದ್ದರು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಶಂಕೆ ಮೇರೆಗೆ ಪ್ರಜಾನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬಾಯ್ಬಿಟ್ಟಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಜಯನಗರದ 1ನೇ ಹಂತದಲ್ಲಿ ತನ್ನ ಪೋಷಕರ ಜತೆ ನೆಲೆಸಿದ್ದ ಪ್ರಜಾನ್‌, ಔಷಧ ಮಾರಾಟ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದ. ಆನ್‌ಲೈನ್‌ ಬೆಟ್ಟಿಂಗ್‌ ಹುಚ್ಚಿಗೆ ಬಿದ್ದು ಆತ ಹಣ ಕಳೆದುಕೊಂಡಿದ್ದ. ಇದಕ್ಕಾಗಿ ತನ್ನ ಮನೆಯಲ್ಲಿ ಆತ ಕಳವು ಮಾಡಿದ್ದ. ಮನೆಗಳ್ಳತನ ಕೃತ್ಯದ ಬಗ್ಗೆ ದೂರಿನ ಮೇರೆಗೆ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಲಾಯಿತು. ಆ ವೇಳೆ ಮನೆಯಲ್ಲೇ ಇದ್ದ ಪ್ರಜಾನ್‌ ಮೇಲೆ ಶಂಕೆ ಮೂಡಿತು. ಬಳಿಕ ಮನೆಯಲ್ಲಿ ಚಿನ್ನ ದೋಚಿದ್ದ ಬಾಕ್ಸ್‌ ಮೇಲಿದ್ದ ಬೆರಳ ಮುದ್ರೆಗೂ ಪ್ರಜಾನ್‌ ಬೆರಳಚ್ಚಿಗೂ ಹೋಲಿಕೆಯಾಯಿತು. ಈ ಸುಳಿವಿನ ಮೇರೆಗೆ ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಬೀದಿಬದಿ ವ್ಯಾಪಾರಿಗಳಿಗೇ ಕಂಟಕವಾದ ತರಕಾರಿ ಬೆಲೆ ಏರಿಕೆ: ಖರೀದಿಗೆ ಗ್ರಾಹಕರ ಹಿಂದೇಟು

ರಸ್ತೆಯಲ್ಲಿ ಬೈಕ್‌ ವ್ಹೀಲಿಂಗ್‌ ಶೋಕಿ: ಪಶ್ಚಿಮ ಸಂಚಾರ ವಿಭಾಗದ ವ್ಯಾಪ್ತಿಯ ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಅಪಾಯಕಾರಿ ವ್ಹೀಲಿಂಗ್‌ ಮಾಡುತ್ತಿದ್ದ ಸವಾರನನ್ನು ಮಾಗಡಿ ರಸ್ತೆ ಸಂಚಾರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಾಗಡಿ ರಸ್ತೆಯ ಕೆ.ಪಿ.ಅಗ್ರಹಾರ ನಿವಾಸಿ ರಾಜೇಶ್‌(18) ಬಂಧಿತ. ಈತ ನಗರದ ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆಯಲ್ಲಿ ದ್ವಿಚಕ್ರ ವಾಹನ ವ್ಹೀಲಿಂಗ್‌ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದ. ವ್ಹೀಲಿಂಗ್‌ ಪ್ರಕರಣ ಪತ್ತೆಗೆ ರಚಿಸಿರುವ ಪೊಲೀಸರ ವಿಶೇಷ ತಂಡವು ವಿಡಿಯೋ ಪರಿಶೀಲಿಸಿ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿ, ದ್ವಿಚಕ್ರ ವಾಹನವನ್ನು ಜಪ್ತಿಮಾಡಿದ್ದಾರೆ. ಆರೋಪಿ ರಾಜೇಶ್‌ ವ್ಹೀಲಿಂಗ್‌ ಮಾಡಲು ದ್ವಿಚಕ್ರ ವಾಹನವನ್ನು ನಿಯಮಬಾಹಿರವಾಗಿ ಮಾರ್ಪಾಡು ಮಾಡಿಸಿದ್ದಾನೆ. ಈ ಬಗ್ಗೆ ಆರ್‌ಟಿಒ ಅಧಿಕಾರಿಗಳಿಂದ ತನಿಖೆ ಮಾಡಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಮಾಗಡಿ ರಸ್ತೆ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬ್ರ್ಯಾಂಡ್‌ ಬೆಂಗಳೂರಿಗೆ ಹರಿಯಲಿದೆ ಹಣ: ಬಿಬಿಎಂಪಿಗೆ 4093 ಕೋಟಿ ಅನುದಾನ

ಗಾಂಜಾ ಗಿಡಗಳ ಬೆಳೆಸುತ್ತಿದ್ದ ಆರೋಪಿ ಸೆರೆ: ತಾಲೂಕಿನ ಕಬ್ಬಳ ಗ್ರಾಮದಲ್ಲಿ ಚಂದ್ರನಾಯ್ಕ ಎಂಬಾತ ತನ್ನ ಮನೆ ಪಕ್ಕದ ಖಾಲಿ ನಿವೇಶನದಲ್ಲಿ ಅಕ್ರಮವಾಗಿ ಗಾಂಜಾಗಿಡಗಳ ಬೆಳೆಸುತ್ತಿದ್ದ ಆತನನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಆರ್‌.ಬಿ.ಬಸರಗಿ, ಡಿವೈಎಸ್‌ಪಿ ಡಾ.ಸಂತೋಷ್‌, ಸಂತೆಬೆನ್ನೂರು ಸರ್ಕಲ್‌ ಇನ್ಸ್‌ಪೆಕ್ಟರ್‌ ಮಹೇಶ್‌ ಮಾರ್ಗದರ್ಶನದಲ್ಲಿ ಬಸವಾಪಟ್ಟಣ ಸಬ್‌ ಇನ್ಸ್‌ಪೆಕ್ಟರ್‌ ವೀಣಾ ನೇತೃತ್ವದಲ್ಲಿ ಸಿಬ್ಬಂದಿಗಳಾದ ಲಕ್ಷ್ಮಣ, ಪ್ರಕಾಶ್‌, ಇಬ್ರಾಹಿಂ, ರವೀಂದ್ರ, ಆಂಜನೇಯ ದಾಳಿ ನಡೆಸಿ ಸ್ಥಳದಲ್ಲೇ ಗಾಂಜಾ ಆರೋಪಿಯ ಬಂಧಿಸಿದ್ದಾರೆ. ಒಟ್ಟು 20ಸಾವಿರ ರುಪಾಯಿ ಮೌಲ್ಯದ 10 ಗಾಂಜಾ ಗಿಡಗಳ ವಶಪಡಿಸಿದ್ದಾರೆ. ಬಸವಾಪಟ್ಟಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಯಚರಣೆಯಲ್ಲಿ ಭಾಗಿಯಾದ ಅಧಿಕಾರಿ ಮತ್ತು ಸಿಬ್ಬಂದಿಗಳ ಪೊಲೀಸ್‌ ಅಧೀಕ್ಷಕ ಡಾ.ಅರುಣ್‌ ಪ್ರಶಂಸಿದ್ದಾರೆ.