ರಾಂಚಿ (ಫೆ. 18) ಪ್ರೇಮಿಗಳ ದಿನಾಚರಣೆ ಮುಗಿದಿದೆ. ಆದರೆ ಇಲ್ಲೊಂದು ಪ್ರೇಮ ಕತೆಗೆ ಅಂತ್ಯ ಸಿಕ್ಕಿಲ್ಲ. ಪೊಲೀಸರೆ ಈ ಪ್ರಕರಣಕ್ಕೆ ಒಂದು ತೀರ್ಪನ್ನು ನೀಡಿದ್ದಾರೆ.

ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ .. ಆದರೆ ಇಲ್ಲಿ ಪ್ರಿಯತಮೆಯೂ ಬಂದರೆ...  ಒಬ್ಬನಿಗಾಗಿ ಹೆಂಡತಿ ಮತ್ತು ಪ್ರಿಯತಮೆ ಕಿತ್ತಾಟ ಮಾಡಿಕೊಳ್ಳುತ್ತಿದ್ದರು. ಇದಕ್ಕೆ ಪೊಲೀಸರೇ ಒಂದು ತೀರ್ಮಾನ ನೀಡಿದ್ದು  ವಾರದ ಮೂರು ದಿನ ಪತ್ನಿ ಜತೆ, ಮೂರು ದಿನ ಗೆಳತಿ ಜತೆ ಇರಲು ಸೂಚನೆ ನೀಡಿದ್ದಾರೆ. ಒಂದು ದಿನ ವೀಕ್ ಆಫ್!

ಜಾರ್ಖಂಡ್‌ ರಾಜ್ಯದ ಪೊಲೀಸರು, ವಿಚಿತ್ರ ನ್ಯಾಯ ಮಾಡಿ ಸುದ್ದಿಗೆ ಗ್ರಾಸವಾಗಿದ್ದಾರೆ.  ರಾಂಚಿಯ ನಿವಾಸಿ ರಾಜೇಶ್‌ ಮಹತೋ ತನಗೆ ಹೆಂಡತಿ ಮತ್ತು ಒಂದು ಮಗು ಇದ್ದರೂ ಕೂಡ ಅದನ್ನು ಮರೆಮಾಚಿ, ಬ್ಯಾಚುಲರ್‌ ಎಂದು ಸುಳ್ಳು ಹೇಳಿ ಯುವತಿಯೊಬ್ಬಳನ್ನು ಪ್ರೀತಿಸಿದ್ದ. ಪ್ರೀತಿಸಿದ ಗೆಳತಿಯೊಂದಿಗೆ ಪರಾರಿಯಾಗಿದ್ದ. ಇದರಿಂದ ಕುಪಿತಗೊಂಡ ಹೆಂಡತಿ ಪೊಲೀಸ್‌ ಠಾಣೆ ಮೆಟ್ಟಿಲೇರಿ ಗಂಡನ ಬಂಧನಕ್ಕೆ ಆಗ್ರಹಿಸಿದ್ದಳು. 

ಯುವತಿಯರ ಬೆತ್ತಲೆ ಶೂಟ್ ಮಾಡಿದ ನಟಿಗೆ ಬಂಧನ ಭೀತಿ

ಇನ್ನೊಂದು ಕಡೆ ಪ್ರಿಯತಮೆಯ ಕುಟುಂಬದವರು   ಮಗಳ ಅಪಹರಣವಾಗಿದೆ ಎಂದು ದೂರು ನೀಡಿದರು. ಇಬ್ಬರ ದೂರಿನ ಆಧಾರದಲ್ಲಿ ರಾಜೇಶ್‌ ನನ್ನು  ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡು ಪ್ರಕರಣದ ಬುಡಕ್ಕೆ ಕೈ ಹಾಕಿದರು.

ಪೊಲೀಸ್ ಠಾಣೆ ಮುಂದೆ ಹೈಡ್ರಾಮಾ ನಡೆದುಹೋಯಿತು. ಹೆಂಡತಿ ಮತ್ತು ಪ್ರಿಯತಮೆ ನಡುವೆ ಜೋರಾಗಿ ಗಲಾಟೆ ನಡೆದಿದೆ. ಇದನ್ನು ಬಗೆಹರಿಸಲು ಸಾಧ್ಯವಿಲ್ಲ ಎಂದು ಅರಿತ ಪೊಲೀಸರು ಅಲ್ಲಿಯೇ ಒಂದು ನ್ಯಾಯ ನೀಡಿದ್ದು ಎರಡು ತಂಡದವರು ಒಪ್ಪಿಕೊಂಡಿದ್ದಾರೆ.

ರಾಜೇಶ್‌ನನ್ನು ಕರೆದು, ವಾರದ ಏಳು ದಿನಗಳ ಪೈಕಿ ಮೊದಲ ಮೂರು ದಿನ ಮೊದಲ ಹೆಂಡತಿ ಮನೆಯಲ್ಲಿ, ನಂತರದ ಮೂರು ದಿನ ಎರಡನೇ ಹೆಂಡತಿ (ಪ್ರೆಯಸಿ) ಜತೆಯಲ್ಲಿ ಕಳೆಯುವಂತೆ ಸೂಚಿಸಿದರು. ಉಳಿದ ಒಂದು ದಿನವನ್ನು ವೈಯಕ್ತಿಕ ರಜೆ  ಎಂದರು. ಸಮ್ಮತಿ ಪತ್ರಕ್ಕೆ ಎರಡು ಕಡೆಯವರು ಸಹಿ ಮಾಡಿದ್ದು ಪ್ರಕರಣ ಸಿನಿಮೀಯ ಅಂತ್ಯ ಕಂಡಿದೆ.