Asianet Suvarna News Asianet Suvarna News

ಫ್ಯಾಕ್ಟರಿ ಕೊಡದ ಮಾವನ ಕೊಲೆಗೆ ಸುಪಾರಿ ಕೊಟ್ಟ ಅಳಿಯ!

ಫ್ಯಾಕ್ಟರಿ ಕೊಡದ ಮಾವನ ಕೊಲೆಗೆ ಸುಪಾರಿ ಕೊಟ್ಟಅಳಿಯ!| ಪಾಪ ಕೃತ್ಯ, ಉದ್ಯಮಿಯನ್ನು ಅಡ್ಡಗಟ್ಟಿಹತ್ಯೆಗೆ ಯತ್ನಿಸಿದ್ದ ರೌಡಿಗಳು| ಪೊಲೀಸರಿಂದ ಸುಪಾರಿ ಹಂತಕರಿಗೆ ಗುಂಡೇಟು| ಅಳಿಯ ನಾಗೇಶ್‌ನಿಂದ ಕೃಷ್ಣೋಜಿರಾವ್‌ಗೆ ಸುಪಾರಿ| ಈ ಸುಪಾರಿಯನ್ನು ತಮಿಳ್‌ ಪ್ರಭುಗೆ ನೀಡಿದ್ದ

Son In law gave supari to kill his father in law who denied to give factory
Author
Bangalore, First Published Nov 25, 2019, 3:07 PM IST

ಬೆಂಗಳೂರು[ನ.25]: ಉದ್ಯಮಿಯೊಬ್ಬರ ಕೊಲೆಗೆ ವಿಫಲ ಯತ್ನ ನಡೆಸಿದ್ದ ರೌಡಿಯೊಬ್ಬನ ಮೇಲೆ ಪೀಣ್ಯ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.

ನಂದಿನಿ ಲೇಔಟ್‌ನ ಕೂಲಿ ನಗರ ನಿವಾಸಿ ತಮಿಳ್‌ ಪ್ರಭು (30) ಬಂಧಿತ. ಘಟನೆಯಲ್ಲಿ ಹೆಡ್‌ಕಾನ್‌ಸ್ಟೇಬಲ್‌ಗಳಾದ ರಾಮಮೂರ್ತಿ ಮತ್ತು ರಂಗಸ್ವಾಮಿ ಗಾಯಗೊಂಡಿದ್ದಾರೆ. ಮತ್ತೊಬ್ಬ ಆರೋಪಿ ಮುರುಳಿ ಎಂಬಾತ ತಲೆಮರೆಸಿಕೊಂಡಿದ್ದಾನೆ. ಉದ್ಯಮಿ ಸೋಮನಾಥ್‌ ಎಂಬುವರು ಪೀಣ್ಯದಲ್ಲಿ ಸಣ್ಣ ಕಾರ್ಖಾನೆ ಹೊಂದಿದ್ದಾರೆ. ಕಾರ್ಖಾನೆಯನ್ನು ತನ್ನ ಸುರ್ಪದಿಗೆ ಪಡೆಯಬೇಕೆಂದು ಉದ್ಯಮಿ ಅಳಿಯ ನಾಗೇಶ್‌ ಎಂಬಾತ ಯತ್ನಿಸಿದ್ದ. ಕಾರ್ಖಾನೆ ಸಿಗದ ಹಿನ್ನೆಲೆಯಲ್ಲಿ ಆಕ್ರೋಶಗೊಂಡಿದ್ದ ನಾಗೇಶ್‌ ಮಾವನ ಕೊಲೆಗೆ ಕೃಷ್ಣೋಜಿರಾವ್‌ ಎಂಬಾತನಿಗೆ ಸುಪಾರಿ ನೀಡಿದ್ದ. ಈ ಸುಪಾರಿಯನ್ನು ಕೃಷ್ಣೋಜಿರಾವ್‌ ತನ್ನ ಸಹಚರ ರೌಡಿ ತಮಿಳ್‌ ಪ್ರಭು ಮತ್ತು ಮುರುಳಿಗೆ ನೀಡಿದ್ದ.

ಪ್ರಭು ಮತ್ತು ಮುರುಳಿ ನ.6ರಂದು ಬೆಳಗ್ಗೆ ಬೈಕ್‌ನಲ್ಲಿ ಕಾರ್ಖಾನೆಗೆ ಹೋಗುತ್ತಿದ್ದ ಉದ್ಯಮಿಯನ್ನು ಹಿಂಬಾಲಿಸಿದ್ದರು. ಪೀಣ್ಯ ಬಳಿ ಅಡ್ಡಗಟ್ಟಿಆಯುಧದಿಂದ ಕೊಲೆಗೆ ಯತ್ನಿಸಿದ್ದರು. ಈ ವೇಳೆ ಮಾರಣಾಂತಿಕ ಹಲ್ಲೆಗೊಳಗಾದ ಸೋಮನಾಥ್‌ ಅವರು ಚೀರಾಡಿದ್ದರು. ಸಾರ್ವಜನಿಕರು ಸ್ಥಳದಲ್ಲಿ ಜಮಾಯಿಸುತ್ತಿದ್ದ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು.

ಸೋಮನಾಥ್‌ ಅವರು ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಕೊಲೆ ಸುಪಾರಿ ರಹಸ್ಯ ಬಯಲಾಯಿತು.

ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದರು. ಶನಿವಾರ ರಾತ್ರಿ ಪೀಣ್ಯ ಸಮೀಪದ ತಿಪ್ಪೇನಹಳ್ಳಿಯಲ್ಲಿ ಆರೋಪಿ ತಮಿಳ್‌ ಪ್ರಭು ರಾಮು ಮತ್ತು ಬಾಲಮುರಳಿ ಎಂಬುವರನ್ನು ದರೋಡೆ ಮಾಡಿದ್ದ. ಅಲ್ಲದೆ, ಒಬ್ಬರಿಂದ ಹಣ ಮತ್ತು ಮೊಬೈಲ್‌ ಕಸಿದುಕೊಂಡಿದ್ದ. ಇನ್ನೊಬ್ಬರಿಂದ ದ್ವಿಚಕ್ರ ವಾಹನ ಕಿತ್ತುಕೊಂಡಿದ್ದ. ದರೋಡೆ ಮಾಡಿದ ದ್ವಿಚಕ್ರ ವಾಹನದಲ್ಲಿ ಆರೋಪಿ ತನ್ನ ಸಹಚರರ ಜತೆ ಪ್ರಯಾಣಿಸಿದ್ದ. ತಮಿಳ್‌ ಪ್ರಭು ತಿಪ್ಪೇನಹಳ್ಳಿ ತ್ಯಾಜ್ಯ ವಿಲೇವಾರಿ ಘಟಕದ ಬಳಿ ಇರುವ ಬಗ್ಗೆ ಪೀಣ್ಯ ಠಾಣೆ ಇನ್ಸ್‌ಪೆಕ್ಟರ್‌ ಮುದ್ದುರಾಜು ಅವರಿಗೆ ಭಾನುವಾರ ನಸುಕಿನಲ್ಲಿ ಮಾಹಿತಿ ಲಭ್ಯವಾಗಿತ್ತು.

ಇನ್ಸ್‌ಪೆಕ್ಟರ್‌ ತಮ್ಮ ಸಿಬ್ಬಂದಿ ಜತೆ ಸ್ಥಳಕ್ಕೆ ತೆರಳಿದ್ದರು. ಬಂಧಿಸಲು ಹೋದ ಹೆಡ್‌ ಕಾನ್ಸ್‌ಟೇಬಲ್‌ಗಳಾದ ರಾಮಮೂರ್ತಿ ಮತ್ತು ರಂಗಸ್ವಾಮಿ ಅವರ ಆರೋಪಿ ಮೇಲೆ ಹಲ್ಲೆ ನಡೆಸಿದ್ದಾನೆ. ತಕ್ಷಣ ಇನ್ಸ್‌ಪೆಕ್ಟರ್‌ ಮುದ್ದುರಾಜು ಅವರು ಒಂದು ಸುತ್ತು ಗಾಳಿಯಲ್ಲಿ ಗುಂಡುಹಾರಿಸಿ ಎಚ್ಚರಿಕೆ ನೀಡಿದ್ದರು. ಶರಣಾಗದೆ ಹಲ್ಲೆ ಮಾಡಲು ಮುಂದಾದಾಗ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಪಿನಾಯಿಲ್‌ ಕುಡಿದು ಆತ್ಮಹತ್ಯೆಗೆ ಯತ್ನ

ಉದ್ಯಮಿ ಸೋಮನಾಥ ಹತ್ಯೆಗೆ ಸುಪಾರಿ ಪಡೆದಿದ್ದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಆರೋಪಿ ಕೃಷ್ಣೋಜಿರಾವ್‌ ನ.21ರಂದು ನಸುಕಿನ ಜಾವ 4.30ರಲ್ಲಿ ಶೌಚಗೃಹಕ್ಕೆ ಹೋಗಿದ್ದ. ಈ ವೇಳೆ ಪಿನಾಯಿಲ್‌ ಕುಡಿದಿದ್ದಾನೆ. ಸೆಲ್‌ಗೆ ಹಾಕಿದಾಗ ಹೊಟ್ಟೆನೋವು ಕಾಣಿಸಿಕೊಂಡಿದೆ. ಈ ಬಗ್ಗೆ ಸಿಬ್ಬಂದಿ ವಿಚಾರಿಸಿದ್ದು, ಪಿನಾಯಿಲ್‌ ಕುಡಿದಿರುವುದಾಗಿ ಹೇಳಿದ್ದಾನೆ. ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Follow Us:
Download App:
  • android
  • ios