ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನಲ್ಲಿ ದಾಂಪತ್ಯ ಕಲಹದಿಂದ ಬೇಸತ್ತು ಯುವ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದ ಅಂಬರೀಶ್ ಮತ್ತು ಶೃತಿ, ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾರೆ.

ಬಳ್ಳಾರಿ (ನ.16): ದಾಂಪತ್ಯ ಕಲಹಕ್ಕೆ ಬೇಸತ್ತು ಗಂಡ-ಹೆಂಡತಿ ಇಬ್ಬರು ನೇಣಿಗೆ ಶರಣಾದ ದಾರುಣ ಘಟನೆ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ಸಿರಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡರಾಜ್ ಕ್ಯಾಂಪ್‌ನಲ್ಲಿ ನಡೆದಿದೆ.

ಎರಡು ವರ್ಷದ ಹಿಂದೆ ಮದುವೆ; ವಿನಾಕಾರಣ ಜಗಳ:

ಅಂಬರೀಶ್(24), ಶೃತಿ (20) ಮೃತ ದುರ್ದೈವಿಗಳು. ಕಳೆದ ಎರಡು ವರ್ಷಗಳ ಹಿಂದೆಯಷ್ಟೇ ಮದುವೆಯಾಗಿದ್ದ ಈ ದಂಪತಿಗಳು ಮದುವೆಯಾದ ದಿನದಿಂದ ಸಣ್ಣಪುಟ್ಟ ವಿಚಾರಗಳಿಗೆ ಜಗಳವಾಗುತ್ತಿದ್ದರು. ಇಂದು ಕೂಡ ಕ್ಷುಲ್ಲಕ ಕಾರಣಕ್ಕೆ ವಾಗ್ವಾದ ನಡೆದು ಗಲಾಟೆ ಮಾಡಿಕೊಂಡಿದ್ದಾರೆ. ಕೋಪ, ಮನಸ್ತಾಪದಿಂದ ನೊಂದು ದಂಪತಿಗಳಿಬ್ಬರೂ ಮನೆಯಲ್ಲಿ ಯಾರೂ ಇಲ್ಲದ ವೇಳೆ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ.

ಕುಟುಂಬಸ್ಥರು ಆಘಾತ:

ದಂಪತಿಗಳಿಬ್ಬರು ನೇಣುಬಿಗಿದುಕೊಂಡು ಮೃತಪಟ್ಟಿರುವುದು ಕುಟುಂಬಸ್ಥರಿಗೆ ತಿಳಿದು ಆಘಾತಗೊಂಡಿದ್ದಾರೆ. ಘಟನೆ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಸಿರಿಗೇರಿ ಠಾಣೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಮರಣೋತ್ತರ ಪರೀಕ್ಷೆಗೆ ಕಂಪ್ಲಿ ಸರ್ಕಾರಿ ಆಸ್ಪತ್ರೆ ರವಾನಿಸಿದ್ದಾರೆ. ಸಿರಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.