Shraddha Walker Murder: ಬ್ಲೋ ಟಾರ್ಚ್ ಬಳಸಿ ಶ್ರದ್ಧಾಳ ಮುಖವನ್ನು ಸಂಪೂರ್ಣವಾಗಿ ಸುಟ್ಟಿದ್ದ ಅಫ್ತಾಬ್!
ಶ್ರದ್ಧಾಳ ತಲೆಬುರುಡೆಯ ಕೆಲ ಭಾಗಗಳನ್ನು ಗ್ರೈಂಡರ್‌ಗೆ ಹಾಕಿದ್ದೆ ಎಂದು ಅಫ್ತಾಭ್ ಪೂನಾವಾಲಾ ಹೇಳಿದ್ದು ಸುಳ್ಳು ಎಂದು ಚಾರ್ಜ್ ಶೀಟ್‌ನಲ್ಲಿ ಬಹಿರಂಗವಾಗಿದೆ. ಆರೋಪ ಪಟ್ಟಿಯ ಮಾಹಿತಿಯ ಪ್ರಕಾರ , ಶ್ರದ್ಧಾಳ ಮುಖದ ಗುರುತು ಸಿಗಬಾರದೆಂದು ಬ್ಲೋ ಟಾರ್ಚ್ ಬಳಸಿ ಆಕೆಯ ಮುಖವನ್ನು ಸಂಪೂರ್ಣವಾಗಿ ಸುಟ್ಟಿದ್ದ ಎಂದು ತಿಳಿಸಲಾಗಿದೆ.
ನವದೆಹಲಿ (ಫೆ.7): ದೆಹಲಿಯ ಮೆಹ್ರೌಲಿಯಲ್ಲಿ ನಡೆದ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದಲ್ಲಿ ಹೊಸ ಮಾಹಿತಿ ಬಹಿರಂಗವಾಗಿದೆ. ಪೊಲೀಸ್ ಚಾರ್ಜ್‌ಶೀಟ್ ಪ್ರಕಾರ, ಅಫ್ತಾಬ್ ಪೂನಾವಾಲಾ ತನ್ನ ಲೈವ್-ಇನ್ ಪಾರ್ಟ್‌ನರ್ ಆಗಿದ್ದ ಶ್ರದ್ಧಾ ವಾಕರ್ ಅನ್ನು ಕೊಂದ ನಂತರ ಆಕೆಯ ಮುಖ ಮತ್ತು ತಲೆಯನ್ನು ವಿರೂಪಗೊಳಿಸಲು ಬ್ಲೋ ಟಾರ್ಚ್ (ಗ್ಯಾಸ್ ವೆಲ್ಡಿಂಗ್‌ನಲ್ಲಿ ಬಳಸಲಾಗುವ ಬರ್ನರ್ ರೀತಿಯದ್ದೇ ವಸ್ತು, ಇದನ್ನು ಕ್ವಿಕ್ ಆಗಿ ಜೋಡಿಸಿ ಬರ್ನರ್ ಮಾಡಬಹುದು) ಬಳಸಿದ್ದ. ಇದಕ್ಕೂ ಮುನ್ನ ಶ್ರದ್ಧಾಳ ತಲೆಯನ್ನು ಕತ್ತರಿಸಿ ಅದರ ಕೆಲ ಭಾಗಗಳನ್ನು ಗ್ರೈಂಡರ್‌ನಲ್ಲಿ ಹಾಕಿದ್ದೆ, ಆಕೆಯ ದೇಹದ ಕೆಲಭಾಗಗಳನ್ನು ಸುಟ್ಟು ಬೂದಿ ಮಾಡಿದ್ದೆ ಎಂದು ಅಫ್ತಾಬ್ ಮೊದಲಿಗೆ ನೀಡಿದ್ದ ಹೇಳಿಕೆ ಪೊಲೀಸರನ್ನು ದಾರಿ ತಪ್ಪಿಸುವ ತಂತ್ರವಾಗಿತ್ತು ಎಂದು ಹೇಳಲಾಗಿದೆ. ಗರಗಸವನ್ನು ಬಳಸಿ ಆತ ಶ್ರದ್ಧಾಳ ದೇಹದ ಭಾಗಗಳನ್ನು ಕೊಯ್ದು, ಅದರ ಭಾಗಗಳನ್ನು ಪ್ಲಾಸ್ಟಿಕ್ ಬ್ಯಾಗ್‌ಗಳಲ್ಲಿ ಕಟ್ಟಿಟ್ಟಿದ್ದ ಎನ್ನಲಾಗಿದೆ.6,600 ಪುಟಗಳ ಚಾರ್ಜ್‌ಶೀಟ್‌ನಲ್ಲಿ ಅಫ್ತಾಬ್ ತನ್ನ ಹೊಸ ತಪ್ಪೊಪ್ಪಿಗೆಯಲ್ಲಿ ಪೊಲೀಸರಿಗೆ ಮತ್ತಷ್ಟು ಮಾಹಿತಿ ನೀಡಿದ್ದಾನೆ. ಕೊಲೆಯಾದ ರಾತ್ರಿ ತನ್ನ ಮನೆಯ ಸಮೀಪವಿರುವ ಹಾರ್ಡ್‌ವೇರ್ ಅಂಗಡಿಗೆ ಹೋಗಿದ್ದ ಅಫ್ತಾಭ್ ಗರಗಸ, ಮೂರು ಬ್ಲೇಡ್‌ಗಳು, ಸುತ್ತಿಗೆ ಮತ್ತು ಪ್ಲಾಸ್ಟಿಕ್ ಕ್ಲಿಪ್‌ಗಳನ್ನು ಖರೀದಿ ಮಾಡಿದ್ದ ಎನ್ನಲಾಗಿದೆ.
ಶ್ರದ್ಧಾಳ ಶವವನ್ನು ಬಾಥ್‌ರೂಮ್‌ಗೆ ಎಳೆದುಕೊಂದು ಹೋಗಿದ್ದ ಅಫ್ತಾಬ್ ಮೊದಲಿಗೆ ಆಕೆಯ ಎರಡು ಕೈಗಳನ್ನು ಕತ್ತರಿಸಿ, ಅದನ್ನು ಪಾಲಿಥಿನ್ ಬ್ಯಾಗ್‌ಗೆ ಹಾಕಿದ್ದ. ಪ್ಲಾಸ್ಟಿಕ್ ಕ್ಲಿಪ್ ಬಳಸಿ ಪಾಲಿಥಿನ್ ಕವರ್‌ಅನ್ನು ಕಟ್ಟಿ ತನ್ನ ಅಡುಗೆ ಮನೆಯ ಕೆಳಗಿನ ಕ್ಯಾಬಿನೆಟ್‌ನಲ್ಲಿ ಇರಿಸಿದ್ದ.
ಮರುದಿನ ಮಧ್ಯರಾತ್ರಿ 2 ಗಂಟೆಯ ವೇಳೆಗೆ ಮೊದಲ ಬಾರಿಗೆ ಶ್ರದ್ಧಾಳ ದೇಹದ ಕಾಲಿನ ಭಾಗಗಳನ್ನು ದೆಹಲಿ ಛತ್ತರ್‌ಪುರ ಅರಣ್ಯ ಪ್ರದೇಶದಲ್ಲಿ ಎಸೆದು ಬಂದಿದ್ದ. ಇದಾದ 4-5 ದಿನಕ್ಕೆ ಅಫ್ತಾಬ್, ಶ್ರದ್ಧಾಳ ದೇಹವನ್ನು ಒಟ್ಟು 35 ಪೀಸ್‌ಗಳನ್ನಾಗಿ ಕತ್ತರಿಸಿ ಹಾಕಿದ್ದ. ಬಳಿಕ ಈ ಪೀಸ್‌ಗಳನ್ನು ದೆಹಲಿಯ ಮೆಹ್ರುಲಿ ಪ್ರದೇಶದಲ್ಲಿದ್ದ ತನ್ನ ಮನೆಯ 300 ಲೀಟರ್ ಫ್ರಿಜ್‌ನಲ್ಲಿ ಜೋಡಿಸಿ ಇಟ್ಟಿದ್ದ. ಅಂದಾಜು ಮೂರು ವಾರಗಳ ಕಾಲ ಆತ ಶವವನ್ನು ಫ್ರಿಜ್‌ನಲ್ಲಿ ಇರಿಸಿದ್ದ. ಶವ ಕೊಳೆಯಬಾರದು ಎನ್ನುವ ಕಾರಣಕ್ಕಾಗಿ ಅಫ್ತಾಬ್ ಈ ಉಪಾಯ ಕಂಡುಕೊಂಡಿದ್ದ. ಅದಾದ ಬಳಿಕ ಆಕೆಯ ದೇಹವನ್ನು ಪೀಸ್ ಮಾಡಿ ತುಂಬಿದ್ದ ಒಂದೊಂದೇ ಬ್ಯಾಗ್‌ಗಳನ್ನು ಹೊರಗೆ ಹಾಕಿ ಬರುತ್ತಿದ್ದ. ಶ್ರದ್ಧಾಳ ಕೊಲೆಯಾದ ಮೂರು ತಿಂಗಳ ಬಳಿಕ, ಆಕೆಯ ತಲೆಬುರುಡೆಯನ್ನು ನಾಶ ಮಾಡಿದ್ದ ಎಂದು ಚಾರ್ಜ್‌ಶೀಟ್‌ನಲ್ಲಿ ತಿಳಿಸಲಾಗಿದೆ.
Shraddha Walker Murder: ಅಫ್ತಾಬ್ ಪೂನಾವಾಲಾ ವಿರುದ್ಧ 6 ಸಾವಿರ ಪುಟಗಳ ಚಾರ್ಜ್‌ಶೀಟ್
ಮುಂಬೈನಲ್ಲಿ ಶ್ರದ್ಧಾಳ ಫೋನ್ ಎಸೆದಿದ್ದ: ಚಾರ್ಜ್‌ಶೀಟ್‌ನಲ್ಲಿ ಹೇಳಿರುವ ಮಾಹಿತಿಯ ಪ್ರಕಾರ, ಅಫ್ತಾಬ್ ಪೂನಾವಾಲಾ ಶ್ರದ್ಧಾಳ ಮೊಬೈಲ್ ಫೋನ್‌ಅನ್ನು ಮುಂಬೈನಲ್ಲಿ ಎಸೆದಿದ್ದ. ಕಳೆದ ವರ್ಷದ ಅಂತ್ಯದಲ್ಲಿ ನಡೆದ ಪಾಲಿಗ್ರಾಫ್ ಹಾಗೂ ನಾರ್ಕೋ ಟೆಸ್ಟ್‌ನಲ್ಲಿ ಅಫ್ತಾಬ್ ಪೂನಾವಾಲಾ, ಶ್ರದ್ಧಾಳನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದ. ಮೂಲಗಳ ಪ್ರಕಾರ, ಶ್ರದ್ಧಾಳನ್ನು ಕೊಲೆ ಮಾಡಿದ್ದಕ್ಕೆ ತನಗೆ ಯಾವುದೇ ಪಶ್ಚಾತ್ತಾಪವೂ ಇಲ್ಲ ಎಂದು ಅತ ಹೇಳಿದ್ದಾಗಿ ತಿಳಿಸಿದ್ದಾರೆ.
Shraddha Walker Murder: ಮೆಹ್ರುಲಿ ಅರಣ್ಯದಲ್ಲಿ ಸಿಕ್ಕ ಮೂಳೆಗಳು ಶ್ರದ್ಧಾಳದು, ಡಿಎನ್‌ಎ ಪರೀಕ್ಷೆಯಲ್ಲಿ ಸಾಬೀತು!
ಡೇಟಿಂಗ್ ಆಪ್ ಮೂಲಕ ಪರಿಚಯ: ಅಫ್ತಾಬ್ ಹಾಗೂ ಶ್ರದ್ಧಾ ವಾಕರ್ 2019ರಲ್ಲಿ ಡೇಟಿಂಗ್ ಅಪ್ಲಿಕೇಶನ್ ಮೂಲಕ ಪರಿಚಯವಾಗಿದ್ದರು. ಕೆಲ ಸಮಯ ಮುಂಬೈನಲ್ಲಿ ಜೊತೆಗಿದ್ದ ಬಳಿಕ ಇಬ್ಬರೂ ದೆಹಲಿಯಲ್ಲಿ ಒಟ್ಟಾಗಿ ಕಳೆಯಲು ತೀರ್ಮಾನ ಮಾಡಿದ್ದರು. ಅಫ್ತಾಬ್ ಹಾಗೂ ಶ್ರದ್ಧಾಳ ನಡುವೆ ಮನೆಯ ಖರ್ಚುಗಳು, ಅಫ್ತಾಬ್‌ಗೆ ಇರುವ ಗರ್ಲ್‌ಫ್ರೆಂಡ್‌ಗಳ ಹಾಗೂ ಇತರ ವಿಚಾರಗಳಲ್ಲಿ ಗಲಾಟೆ ನಡೆಯುತ್ತಿತ್ತು. ಇದರಿಂದಾಗಿ ಅವರ ಸಂಬಂಧ ಕೂಡ ಹಳಸಿಹೋಗಿತ್ತು. ಅಫ್ತಾಭ್‌ಗೆ ಶ್ರದ್ಧಾ ಮಾತ್ರವಲ್ಲದೆ, ದೆಹಲಿ ಹಾಗೂ ದುಬೈನಲ್ಲೂ ಗರ್ಲ್‌ಫ್ರೆಂಡ್‌ಗಳಿದ್ದರು.
ಇಬ್ಬರೂ ಮೇ 18 ರಂದು ಮುಂಬೈಗೆ ಹೋಗಲು ಯೋಜಿಸಿದ್ದರು, ಆದರೆ ಇದ್ದಕ್ಕಿದ್ದಂತೆ ಅಫ್ತಾಬ್ ಟಿಕೆಟ್ ಕ್ಯಾನ್ಸಲ್ ಮಾಡಿದ್ದ. ಇದಾದ ನಂತರ ಖರ್ಚಿನ ವಿಚಾರದಲ್ಲಿ ಮತ್ತೊಂದು ಸುತ್ತಿನ ಜಗಳ ನಡೆದಿತ್ತು ಮತ್ತು ಕೋಪದ ಭರದಲ್ಲಿ ಅಫ್ತಾಬ್ 18 ಮೇ 2022 ರಂದು ಶ್ರದ್ಧಾಳನ್ನು ಕತ್ತು ಹಿಸುಕಿ ಕೊಂದು ಹಾಕಿದ್ದ.